Advertisement

ಅಭ್ಯುದಯ ಇಂಟರ್‌ ನ್ಯಾಶನಲ್‌ ಸ್ಕೂಲ್‌ ಲೋಕಾರ್ಪಣೆ ಇಂದು

07:39 PM Jul 02, 2021 | Girisha |

ಮುದ್ದೇಬಿಹಾಳ: ಅಡವಿಹುಲಗಬಾಳ ಗ್ರಾಮದ ಅಭ್ಯುದಯ ಇಂಟರ್‌ನ್ಯಾಶನಲ್‌ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಲೋಕಾರ್ಪಣೆ ಸಮಾರಂಭ ಜು.2ರಂದು ಬೆಳಗ್ಗೆ 10ಕ್ಕೆ ಸರಳವಾಗಿ ನಡೆಯಲಿದೆ ಎಂದು ಅಹಿಲ್ಯಾದೇವಿ ಹೋಳ್ಕರ್‌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯೂ ಆಗಿರುವ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ತಿಳಿಸಿದ್ದಾರೆ. “ಉದಯವಾಣಿ’ ಜತೆ ಮಾತನಾಡಿದ ಅವರು, 2020-21ನೇ ಸಾಲಿನಲ್ಲೇ ಶಾಲೆ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿತ್ತು. ಆದರೆ ಕೋವಿಡ್‌ ಕಾರಣ ಸಾಧ್ಯವಾಗಿರಲಿಲ್ಲ.

Advertisement

ಈಗ ಕೋವಿಡ್‌ ಪರಿಸ್ಥಿತಿ ತಿಳಿಯಾಗುತ್ತಿದ್ದು, ಶಾಲೆಗಳು ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದಿಂದ ಕಲಿಕಾ ಚಟುವಟಿಕೆ ನಡೆಸಲಾಗುವುದು ಎಂದರು. ಅಂದಾಜು ಎರಡು ಎಕರೆ ವಿಸ್ತೀರ್ಣದ ಜಮೀನಿನಲ್ಲಿ 100×100 ಅಳತೆ ಜಾಗದಲ್ಲಿ ಮೂರು ಅಂತಸ್ತಿನ ಅತ್ಯಾಧುನಿಕ, ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಉಳಿದ ಜಾಗವನ್ನು ಆಟದ ಮೈದಾನಕ್ಕೆ ಮೀಸಲಿಡಲಾಗಿದೆ. ಒಟ್ಟು 35 ಕೊಠಡಿಗಳಿದ್ದು ಮುಖ್ಯಾಧ್ಯಾಪಕರು, ಶಿಕ್ಷಕರು, ಪ್ರಯೋಗಾಲಯ ಮತ್ತು ಆಡಳಿತ ಕಚೇರಿಗೆ ಹೊರತುಪಡಿಸಿ ಉಳಿದ 20-25 ಕೊಠಡಿಗಳನ್ನು ಪಠ್ಯಬೋಧನೆಗಾಗಿ ಮೀಸಲಿಡಲಾಗಿದೆ ಎಂದರು.

ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ಮುಖ್ಯಾಧ್ಯಾಪಕರೂ ಸೇರಿ ಅಂದಾಜು 15-20 ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಅಂದಾಜು 200 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸದ್ಯ ಆನ್‌ಲೈನ್‌ ಕ್ಲಾಸ್‌ ಆರಂಭಿಸಲಾಗುತ್ತಿದೆ. ಭೌತಿಕ ತರಗತಿಗಳು ಪ್ರಾರಂಭಗೊಂಡ ಮೇಲೆ ಮಕ್ಕಳಿಗೆ ಶಾಲಾ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಸ್ವಾಮೀಜಿಗಳಿಂದ ಲೋಕಾರ್ಪಣೆ: ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ದಿವ್ಯಸಾನ್ನಿಧ್ಯ, ಬಾಲಶಿವಯೋಗಿ ಸಿದ್ಧಲಿಂಗ ದೇವರು, ಸರೂರಿನ ಶಿವಯ್ಯ ಗುರುವಿನ, ಸಿದ್ದಾಪೂರದ ಅರವಿಂದ ಒಡೆಯರ್‌ ಹಾಗೂ ರಾಮಾನಂದ ಮಹಾರಾಜರು ಸಾನ್ನಿಧ್ಯ ವಹಿಸಿ ಶಾಲೆ ಲೋಕಾರ್ಪಣೆಗೊಳಿಸುವರು. ಸಂಸ್ಥೆಯ ಅಧ್ಯಕ್ಷ ಎನ್‌.ಎಸ್‌. ಪೂಜಾರಿ ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕರು, ಶಿಕ್ಷಕರು, ಸುತ್ತಲಿನ ಗ್ರಾಮಗಳ ಹಿತೈಷಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next