Advertisement

ಹಿಂದುಳಿದವರ ಉದ್ಯಮಶೀಲತೆಗೆ “ಸಮೃದ್ಧಿ’

06:00 AM Oct 28, 2018 | |

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪಂಗಡದವರು ಉದ್ಯೋಗಿಗಳಾಗುವುದು ಮಾತ್ರವಲ್ಲದೇ ಸ್ವತಃ ಉದ್ಯಮಿಗಳಾಗಿ ವ್ಯಾಪಾರ, ಉದ್ದಿಮೆ ಆರಂಭಿಸಲು ಸಹಾಯಧನ ನೀಡಿ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆ “ಸಮೃದ್ಧಿ’ ಯೋಜನೆ ಜಾರಿಗೆ ಸಜ್ಜಾಗಿದೆ.

Advertisement

ಪ್ರತಿಷ್ಠಿತ ಆಯ್ದ ಕಂಪೆನಿಗಳೊಂದಿಗೆ ಈ ಸಂಬಂಧ ಒಡಂಬಡಿಕೆ ಮಾಡಿಕೊಂಡು ಫ‌ಲಾನುಭವಿಗಳಿಗೆ ಸೂಕ್ತ ತರಬೇತಿ ಕೊಡಿಸಿ ನಂತರ ವ್ಯಾಪಾರ- ಉದ್ದಿಮೆ ಆರಂಭಿಸಲು ಆರ್ಥಿಕ ನೆರವುದು ಯೋಜನೆ ಉದ್ದೇಶ. ಆರ್ಥಿಕವಾಗಿ ಸಬಲರನ್ನಾಗಿ ರೂಪಿಸುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಬಜೆಟ್‌ ಅನುದಾನದಡಿ ಸುಮಾರು 500 ಕೋಟಿ ರೂ. ವೆಚ್ಚ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪಂಗಡದವರ ಬಲವರ್ಧನೆಗಾಗಿ ಸಮಾಜ ಕಲ್ಯಾಣ ಇಲಾಖೆಯು ನಾನಾ ಯೋಜನೆ ಜಾರಿಗೊಳಿಸುತ್ತಿದೆ. ಎಸ್‌ಸಿಪಿ- ಟಿಎಸ್‌ಪಿ ಕಾಯ್ದೆ ಜಾರಿ ಬಳಿಕ ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನ ಯೋಜನಾ ಗಾತ್ರದಲ್ಲಿ ಅನುದಾನ ಕಾಯ್ದಿರಿಸುವ ವ್ಯವಸ್ಥೆ ನಂತರ ವೈವಿಧ್ಯದ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆ “ಸಮೃದ್ಧಿ’ ಯೋಜನೆ.

ಪ್ರಸ್ತುತ ವ್ಯಾವಹಾರಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಪರಿಶಿಷ್ಟ ಜಾತಿ, ಪಂಗಡದವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಜತೆಗೆ ಉದ್ಯಮಶೀಲತೆಯಲ್ಲಿ ತೊಡಗುವಂತೆ ಉತ್ತೇಜಿಸಲು “ಸಮೃದ್ಧಿ’ ರೂಪುಗೊಂಡಿದೆ. ಯೋಜನೆಯಡಿ ಗುರುತಿಸಿದ ವ್ಯಾಪಾರ, ಉದ್ದಿಮೆ ಸೇರಿದಂತೆ ಯಾವುದೇ ನಿರ್ದಿಷ್ಟ ಗುರಿಯ ವ್ಯಾಪಾರ, ವ್ಯವಹಾರ ನಡೆಸುವ ಬಗ್ಗೆ ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಿದೆ. ಉದಾಹರಣೆಗೆ ಬಿಸ್ಕೆಟ್‌, ತಿಂಡಿ- ತಿನಿಸು, ತಂಪು ಪಾನೀಯ, ಕಾಫಿ- ತಿಂಡಿ, ಊಟ, ಸೂಪರ್‌ ಮಾಲ್‌, ಉಗ್ರಾಣ ಸೇರಿದಂತೆ ಯಾವುದೇ ವ್ಯವಹಾರ ನಡೆಸಲು ನಾನಾ ಮಾನದಂಡ ಅನುಸರಿಸಿ ಸಹಾಯ ಧನ ನೀಡಲಿದೆ.

ಪ್ರತಿಷ್ಠಿತ ಕಂಪೆನಿಗಳೊಂದಿಗೆ ಒಪ್ಪಂದ
ಪ್ರತಿಷ್ಠಿತ ವ್ಯಾಪಾರ- ವ್ಯವಹಾರ ಕಂಪೆನಿಗಳೊಂದಿಗೆ ಮಾತುಕತೆ ನಡೆ‌ಸಿರುವ ಸಮಾಜ ಕಲ್ಯಾಣ ಇಲಾಖೆಯು ಮಾಸಾಂತ್ಯದಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಬಳಿಕ ಪ್ರತಿ ವ್ಯಾಪಾರ- ವ್ಯವಹಾರಕ್ಕೂ ಕನಿಷ್ಠ ಅಗತ್ಯವಿರುವ ಬಂಡವಾಳವನ್ನು ಮೊದಲೇ ನಿಗದಿಪಡಿಸಲಿದೆ. ಅದರಂತೆ ತಾತ್ಕಾಲಿಕವಾಗಿ ಆಯ್ಕೆಯಾಗುವ ಫ‌ಲಾನುಭವಿಗಳಿಗೆ ಸಂಬಂಧಪಟ್ಟ ಕಂಪೆನಿಯಡಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಿದೆ.

Advertisement

ತರಬೇತಿ ಕಡ್ಡಾಯ
ಸಹಾಯಧನ ಪಡೆಯಲು ತರಬೇತಿ ಕಡ್ಡಾಯಗೊಳಿಸಲು ಚಿಂತಿಸಿದೆ. ಆಸಕ್ತರು ಆರಂಭಿಸುವ ವ್ಯವಹಾರ ಕುರಿತಂತೆ ಪ್ರತಿಷ್ಠಿತ ಕಂಪೆನಿಯೇ ಜಿಎಸ್‌ಟಿ ನಿರ್ವಹಣೆ, ಇನ್‌ವೆಂಟ್ರಿ ಮ್ಯಾನೇಜ್‌ಮೆಂಟ್‌, ಬಿಲ್ಲಿಂಗ್‌, ವ್ಯಾಪಾರ ವೃದ್ಧಿಗೆ ಪೂರಕ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಿದೆ. ತರಬೇತಿ ಪೂರ್ಣಗೊಳಿಸಿದ ಪ್ರಮಾಣ ಪತ್ರ ಪಡೆದವರಿಗೆ ಸಹಾಯಧನ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಆ ಮೂಲಕ ಸ್ವಂತ ಉದ್ದಿಮೆ ಆರಂಭಿಸಿ ನಿರ್ವಹಿಸುವ ಬದ್ಧತೆ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲಿದೆ. ಉದ್ಯಮ ಆರಂಭಿಸಲು ಅಗತ್ಯ ಸೌಲಭ್ಯ, ಸಹಕಾರ, ತರಬೇತಿ, ಮೇಲ್ವಿಚಾರಣೆ ನಡೆಸುವ ಅಂಶವನ್ನು ಒಪ್ಪಂದದಲ್ಲಿ ಸೇರಿಸಲಿದೆ.

ಫ‌ಲಾನುಭವಿಗಳು ಆರಂಭಿಸಲು ಉದ್ದೇಶಿಸಿರುವ ವ್ಯಾಪಾರ, ವ್ಯವಹಾರ, ಉದ್ದಿಮೆಯ ಮಾಹಿತಿಯನ್ನು ಪರಿಶೀಲಿಸಿ ಖಾತರಿಯಾದ ಬಳಿಕವಷ್ಟೇ ಸಹಾಯಧನಕ್ಕೆ ಪರಿಗಣಿಸಲಿದೆ. ಒಟ್ಟಾರೆ ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಸಹಾಯಧನದೊಂದಿಗೆ ತರಬೇತಿ ಕೊಡಿಸಿ ಯಶಸ್ವಿಯಾಗಿ ನಡೆಸಲು ಪೂರಕ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಿದೆ.

“ಐರಾವತ’ ಯೋಜನೆಯಡಿ 12,700 ಅರ್ಜಿ
ಈಗಾಗಲೇ ಇಲಾಖೆ 500 ಟ್ಯಾಕ್ಸಿ ಕ್ಯಾಬ್‌ ವಿತರಣೆಗೆ ರೂಪಿಸಿರುವ “ಐರಾವತ’ ಯೋಜನೆಗೆ 12,700ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಪರಿಶಿಷ್ಟ ಜಾತಿ, ಪಂಗಡದವರು ಆರಂಭಿಸಿರುವ ಇಲ್ಲವೇ ಪಾಲುದಾರಿಕೆಯಿರುವ ತಂತ್ರಜ್ಞಾನ ಆಧಾರಿತ ಕ್ರಿಯಾಶೀಲ ಸ್ಟಾರ್ಟ್‌ಅಪ್‌ಗ್ಳಿಗೂ ಗರಿಷ್ಠ 50 ಲಕ್ಷ ರೂ.ವರೆಗೆ ನೆರವು ನೀಡುವ ಯೋಜನೆ ಜಾರಿಯಲ್ಲಿದೆ. ಒಟ್ಟಾರೆ ಹಿಂದುಳಿದ ಪರಿಶಿಷ್ಟ ಜಾತಿ, ಪಂಗಡದವರನ್ನು ಆರ್ಥಿಕತೆಯ ಮುಖ್ಯವಾಹಿನಿಗೆ ತರುವುದು ಇಲಾಖೆ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದು ಎಷ್ಟರ ಮಟ್ಟಿಗೆ ಆರ್ಥಿಕ ಬಲವರ್ಧನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪಂಗಡದವರ ಬಲವರ್ಧನೆಗೆ ಪೂರಕವಾಗಿ ಶಿಕ್ಷಣ, ಮೂಲ ಸೌಕರ್ಯ ಹಾಗೂ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಅದರಂತೆ ಉದ್ಯೋಗಿಗಳಾಗುವುದು ಮಾತ್ರವಲ್ಲದೆ, ಉದ್ಯಮಶೀಲರನ್ನಾಗಿ ರೂಪಿಸಲು “ಸಮೃದ್ಧಿ’ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next