ಹೊನ್ನಾಳಿ: ಕೊಡತಾಳು, ತೀರ್ಥರಾಮೇಶ್ವರ ಹಾಗೂ ಗೆಡ್ಡೆರಾಮೇಶ್ವರಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಡಿಪಿಆರ್ ಮಾಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ತಾಲೂಕಿನ ಕೊಡತಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಣಿವೆ ವೀರಭದ್ರೇಶ್ವರ ದೇವಾಲಯ ಲೋಕಾರ್ಪಣೆ ಮತ್ತು ಗೋಪುರ ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸವಳಂಗ-ಕೊಡತಾಳು ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಹಾಗಾಗಿ ಗ್ರಾಮಸ್ಥರು ಕೆರೆಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ. ಇದೀಗ ರಸ್ತೆ ಅಗಲೀಕರಣ ಮಾಡಿ ತಡೆಗೋಡೆ ನಿರ್ಮಾಣ ಮಾಡಲು ನಾಲ್ಕು ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.
ಈ ಹಿಂದೆ ಕಣಿವೆ ವೀರಭದ್ರೇಶ್ವರ ದೇವಾಲಯದಲ್ಲಿ ಬೋಜನಾಲಯ ನಿರ್ಮಾಣಕ್ಕೆ 5 ಲಕ್ಷ ರೂ. ಹಾಗೂ ದೇವಾಲಯಕ್ಕೆ 3 ಲಕ್ಷ ರೂ. ನೀಡಿದ್ದೇನೆ. ದೇವಾಲಯಕ್ಕೆ ಹೋಗುವ ರಸ್ತೆ ಹಾಳಾಗಿದ್ದು, ರಸ್ತೆ ನಿರ್ಮಿಸಿಕೊಡುವಂತೆ ದೇವಾಲಯ ಸಮಿತಿಯವರು ಮನವಿ ಮಾಡಿದ್ದು, 1 ಕೋಟಿ ರೂ. ನೀಡಲಾಗಿದ್ದು, ದೇವಾಲಯಕ್ಕೆ ತೆರಳುವ ರಸ್ತೆ ಡಾಂಬರ್ ರಸ್ತೆ ಅಥವಾ ಸಿಸಿ ರಸ್ತೆ ಮಾಡಬೇಕು ಎನ್ನುವುದನ್ನು ದೇವಾಲಯದ ಸಮಿತಿಯವರು ನಿರ್ಧರಿಸಿ ತಿಳಿಸಿದರೆ ಮತ್ತಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕೊಡತಾಳು ಗ್ರಾಮವನ್ನು ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿ 40 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸೇವಾಲಾಲ್ ಸಾಂಸ್ಕೃತಿಕ ಕೇಂದ್ರಕ್ಕೆ 10 ಲಕ್ಷ ರೂ. ಅನುದಾನ ನೀಡಿರುವುದಾಗಿ ತಿಳಿಸಿದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಶಿಕ್ಷಕಿ ಬನಶಂಕರಮ್ಮ, ನಿವೃತ್ತ ಉಪನ್ಯಾಸಕ ಎಸ್.ಆರ್. ಬಸವರಾಜಪ್ಪ, ಜಯಣ್ಣ ಮಾತನಾಡಿದರು. ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಫಲವನಹಳ್ಳಿ ಏತ ನೀರಾವರಿ ಯೋಜನೆಗೆ 83 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆದು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.
-ಎಂ.ಪಿ. ರೇಣುಕಾಚಾರ್ಯ ಸಿಎಂ ರಾಜಕೀಯ ಕಾರ್ಯದರ್ಶಿ