ಯಾದಗಿರಿ: ಜಿಲ್ಲೆಯಲ್ಲಿ ಬಾಲಕರ ಬಾಲ ಮಂದಿರವನ್ನು ಸ್ಥಾಪಿಸಲು ಮತ್ತು ನವಜಾತಶಿಶುಗಳ ರಕ್ಷಣೆಗಾಗಿ ಶಿಶುಗೃಹವನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಹಾಯವಾಣಿ ಸಲಹಾ ಮಂಡಳಿ ಹಾಗೂ ಮಕ್ಕಳ ರಕ್ಷಣಾ ಘಟಕ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದಅವರು, ಏಕ ಪೋಷಕರಿರುವ ಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ಧನ ಸಹಾಯ ನೀಡಲಾಗುತ್ತಿದೆ. ನಿರ್ಗತಿಕರು, ಜೈಲು ಶಿಕ್ಷೆಗೆ ಒಳಗಾಗಿರುವ ಪೋಷಕರ ಮಕ್ಕಳಿಗೂ ಈ ಸೌಲಭ್ಯ ಒದಗಿಸಿ ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಸುಧಾರಣೆಗೆ ಕ್ರಮವಹಿಸುವಂತೆ ಡಿಸಿ ಸೂಚಿಸಿದರು.
ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಅದನ್ನು ನಿಷೇಧಿ ಸಿ ಸರ್ಕಾರ ಹೊರಡಿಸಿರುವ ಕಾನೂನಿನ ಕುರಿತು ಜಿಲ್ಲೆಯಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿ ಸಿ ಕಾನೂನು ಜಾರಿಗೊಳಿಸಲಾಗಿದೆ. ಅದನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವವರು ಹಾಗೂ ಬಾಲ್ಯ ವಿವಾಹವನ್ನು ಜರುಗಿಸುವವರ ವಿರುದ್ಧ ಸಂಬಂಧಿಸಿದ ಎಲ್ಲಾ ಇಲಾಖೆಗಳು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬಾಲ್ಯ ವಿವಾಹ ನಿಷೇಧದ ಕುರಿತು ಗೋಡೆ ಬರಹಗಳು ಸೇರಿದಂತೆ ಸ್ಥಳೀಯ ಪ್ರಚಾರ ಮಾಧ್ಯಮಗಳ ಮೂಲಕ ಎಲ್ಲಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು. ಪುರೋಹಿತರು, ಚರ್ಚ್ ಪಾದ್ರಿಗಳು ಸೇರಿದಂತೆ ಸಂಬಂಧಿಸಿದವರಿಗೆ ಕಾನೂನಿನ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ಶಾಲೆಗಳು, ಅಂಗನವಾಡಿ ಕಟ್ಟಡಗಳು, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗಳು, ಗ್ರಾಪಂ ಕಟ್ಟಡಗಳು, ತಹಶೀಲ್ದಾರರ ಕಚೇರಿ ಸೇರಿದಂತೆ ಸರ್ಕಾರಿ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕುರಿತು ಪ್ರಚಾರ ಕಾರ್ಯ ಕೈಗೊಳ್ಳಬೇಕು. ಯಾವುದೇ ಮಗು ಸಮಸ್ಯೆಗೆ ಸಿಲುಕಿಕೊಂಡಿದ್ದಲ್ಲಿ ಉಚಿತ ದೂರವಾಣಿ 1098ಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಉಪ ನಿರ್ದೇಶಕ ಪ್ರಭಾಕರ ಮಾತನಾಡಿ, ಜಿಲ್ಲೆಯಲ್ಲಿ ಎಚ್.ಐ.ವಿ ಸೋಂಕಿತ ಅಥವಾ ಬಾಧಿ ತರ 321 ಮಕ್ಕಳಿಗೆ ಸರ್ಕಾರದಿಂದ ಪೌಷ್ಟಿಕ ಆಹಾರ, ಭದ್ರತೆ, ಶಿಕ್ಷಣ ಹಾಗೂ ರಕ್ಷಣೆ ಹಾಗೂ ಅವರ ಆರೈಕೆಗಾಗಿ ಧನ ಸಹಾಯ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಯೋಜನೆ ಕುರಿತು ವ್ಯಾಪಕ ಪ್ರಚಾರ ಕೈಗೊಂಡು ಹೆಚ್ಚಿನ ಅರ್ಜಿ ಪಡೆಯಲಾಗುವುದು ಎಂದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ್ ಸೋನಾವಣೆ, ಬಾಲ ನ್ಯಾಯಮಂಡಳಿ ಹಾಗೂ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಎನ್.ಕೆ. ಸಾಲಿಮಂಟಪಿ, ಡಾನ್ ಬಾಸ್ಕೋ ಸಂಸ್ಥೆಯ ಸಮಾಜ ಸೇವಾ ಕೇಂದ್ರದ ನಿರ್ದೇಶಕ ಫಾ. ಪ್ರವೀಣ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿಸಿಪಿಒ, ಸಿಡಿಪಿಒಗಳು ಸೇರಿದಂತೆ ಇತರರಿದ್ದರು.