ನಿಜ ಹೇಳಬೇಕೆಂದರೆ, ನೀನು ಕೇಳಿದಷ್ಟು ಹಣ ನನ್ನ ಬಳಿಯೂ ಇರಲಿಲ್ಲ. ನಿನ್ನನ್ನು ನೇರಾನೇರ ಮಾತಾಡಿಸಲು ಇದೇ ಸುಸಂದರ್ಭ ಅಂತ ಯೋಚಿಸಿ, “ಪಾರ್ಕ್‌ಗೆ ಬಾ, ದುಡ್ಡು ಕೊಡ್ತಿನಿ’ ಎಂದು ಹೇಳಿಬಿಟ್ಟೆ. ನೀನು ಬಂದಾಗ, ನಾನು ನಿನ್ನ ಪ್ರೀತಿಸುತ್ತಿರುವ ವಿಷಯವನ್ನು ನಿನ್ನ ಮುಂದೆ ಹೇಳಿದೆ.
ನೀನು ನೀಲಾಕಾಶದಲ್ಲಿ ಹಾರಾಡೋ ಸ್ವತಂತ್ರ ಹಕ್ಕಿ. ನಿನ್ನ ಹಾರಾಟವನ್ನು ನೋಡಿ ತೃಪ್ತಿ ಪಡುವುದಷ್ಟೇ ನಾನು ಪಡೆದುಕೊಂಡು ಬಂದ ಭಾಗ್ಯ. ನೀನು ನನ್ನನ್ನು ಯಾವತ್ತಿಗೂ ಪ್ರೀತಿಸುವುದಿಲ್ಲ ಎಂದು ತಿಳಿದಿದ್ದರೂ, ನೀನೇ ಬೇಕೆಂದು ಹಠ ಮಾಡುವುದು ನನ್ನ ಮನಸ್ಸಿನ ತಪ್ಪು. ಈಗಲೂ ನಿನ್ನ ನೆನಪಾದಾಗೆಲ್ಲ ನಿನ್ನ ವಾಟ್ಸಾಪ್ ಡಿಪಿ ನೋಡಿ, ಸಮಾಧಾನ ಪಡುವುದು ನನ್ನ ಹವ್ಯಾಸ. ಎಲ್ಲಾದರೂ ನಿನ್ನ ಹೆಸರು ಕೇಳಿದರೆ ಸಾಕು, ಹಳೆದ ದಿನಗಳು ನೆನಪಾಗುತ್ತವೆ.
ಆವತ್ತು ಬಸ್‌ನಲ್ಲಿ ಕಾಲೇಜಿಗೆ ಹೋಗುವಾಗ, ಡ್ರೈವರ್ ತಕ್ಷಣ ಬ್ರೇಕ್ ಹಾಕಿದ್ದರಿಂದ ನಿನ್ನ ಕೈ ನನ್ನ ತಲೆಗೆ ತಾಗಿತು; ತಲೆ ಮೇಲೆತ್ತಿ ನೋಡಿದಾಗ, ನೀನು “ಸಾರಿ’ ಎಂದು ಹೇಳಿ ಬಸ್‌ನಿಂದ ಇಳಿದುಹೋದೆ. ನಿನ್ನನ್ನು ಅವತ್ತೇ ಮೊದಲು ನೋಡಿದ್ದು. ಆಗ ನನ್ನ ಗೆಳತಿ ಹೇಳಿದಳು, “ನಿಮ್ಮೂರಿನವನೇ ಕಣೇ ಅವನು’ ಅಂತ. ನಮ್ಮ ಹಾಸ್ಟೆಲ್‌ನ ಎದುರಿಗಿರೋ ಹಾಸ್ಟೆಲ್‌ನಲ್ಲೇ ನೀನು ಇರೋದು ಅಂತ ಗೊತ್ತಾದಾಗ, ಹೊಟ್ಟೆಯಲ್ಲಿ ಸಾವಿರ ಚಿಟ್ಟೆಗಳು ಹಾರಿದ ಅನುಭವ. ಯಾವ ಹುಡಗನಿಗೂ ಕ್ಯಾರೇ ಅನ್ನದ ನಾನು, ನಿನ್ನ ನೋಟಕ್ಕೆ ಮನಸೋತಿದ್ದು ಅಚ್ಚರಿಯೇ. ಇವತ್ತಲ್ಲ ನಾಳೆ ನಿನಗೂ ನನ್ನಲ್ಲಿ ಪ್ರೀತಿ ಮೂಡುತ್ತದೆ ಅಂತ ಕನಸು ಕಾಣತೊಡಗಿದೆ.
ಕಷ್ಟಪಟ್ಟು ನಿನ್ನ ಸ್ನೇಹ ಸಂಪಾದಿಸಿದ್ದೆ. ಮಾತು-ಕತೆ ಏನಿದ್ದರೂ ಫೋನ್‌ನಲ್ಲಿ ಮಾತ್ರ ನಡೆಯುತ್ತಿತ್ತು. ಭಾವನೆಗಳನ್ನು ಹಂಚಿಕೊಳ್ಳಲು ಹೆದರುತ್ತಿದ್ದ ನನಗೆ ಆ ದೇವರೇ ಒಂದು ದಾರಿ ತೋರಿಸಿದ. ಯಾವುದೋ ತೊಂದರೆಗೆ ಸಿಲುಕಿದ್ದ ನೀನು, ಸ್ವಲ್ಪ ದುಡ್ಡು ಬೇಕೆಂದು ನನ್ನ ಬಳಿ ಕೇಳಿದ್ದೆ. ನಿಜ ಹೇಳಬೇಕೆಂದರೆ, ನೀನು ಕೇಳಿದಷ್ಟು ಹಣ ನನ್ನ ಬಳಿಯೂ ಇರಲಿಲ್ಲ. ನಿನ್ನನ್ನು ನೇರಾನೇರ ಮಾತಾಡಿಸಲು ಇದೇ ಸುಸಂದರ್ಭ ಅಂತ ಯೋಚಿಸಿ, “ಪಾರ್ಕ್‌ಗೆ ಬಾ, ದುಡ್ಡು ಕೊಡ್ತಿನಿ’ ಎಂದು ಹೇಳಿಬಿಟ್ಟೆ. ನೀನು ಬಂದಾಗ, ನಾನು ನಿನ್ನ ಪ್ರೀತಿಸುತ್ತಿರುವ ವಿಷಯವನ್ನು ನಿನ್ನ ಮುಂದೆ ಹೇಳಿದೆ. ನನಗೆ ಗೊತ್ತಿತ್ತು, ನೀನು ಒಪ್ಪುವುದಿಲ್ಲ ಅಂತ. ಕೊನೆಗೂ ನಿನ್ನ ಉತ್ತರ ಅದೇ ಆಗಿತ್ತು. “ದುಡ್ಡು ಕೊಡ್ತೀನಿ ಬಾ’ ಅಂತ ಕರೆದು, ಪ್ರಪೋಸ್ ಮಾಡಿದ ನನ್ನಮೇಲೆ ನಿಂಗೆ ತುಂಬಾ ಸಿಟ್ಟು ಬಂತು. ಹಣಕಾಸಿನ ತೊಂದರೆಯಿಂದ ಒತ್ತಡದಲ್ಲಿದ್ದ ನೀನು, ನನಗೆ ಚೆನ್ನಾಗಿ ಬೈದುಬಿಟ್ಟೆ. ಅದೇ ಕೊನೆ, ಮತ್ತೆ ನೀನು ನನ್ನೊಂದಿಗೆ ಮಾತಾಡಲಿಲ್ಲ.
ಆವತ್ತು ನಾನು ಮಾಡಿದ್ದು ತಪ್ಪು. ದಯವಿಟ್ಟು ಕ್ಷಮಿಸಿಬಿಡು. ನೀನು ಎಲ್ಲೇ ಇರು, ಹೇಗೆ ಇರು, ನೀನಗಾಗಿ ನಾನು ಯಾವಾಗಲೂ ಕಾಯುತ್ತಿರುತ್ತೇನೆ. ಕೋಪಿಸಿಕೊಂಡರೂ, ಬೈದರೂ, ಪ್ರೀತಿಸದೇ ಇದ್ದರೂ ನೀನು ನನ್ನವನು. ನಿನ್ನೆಡೆಗೆ ಹರಿಯುತ್ತಿರುವ ನನ್ನ ಪ್ರೀತಿಯನ್ನು ತಡೆಯಲು ನಿನಗೆ ಸಾಧ್ಯವಿಲ್ಲ.
ನೀಲಮ್ಮ ವಡವಡಗಿ, ವಿಜಯಪುರ