Advertisement

ಯೋಧರಿಗೆ ಭೂಮಿ ನೀಡಲು ಪ್ರಸ್ತಾವನೆ

12:41 AM Jun 23, 2019 | Lakshmi GovindaRaj |

ಬೆಂಗಳೂರು: ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬ ಸದಸ್ಯರಿಗೆ ಜಮೀನು ಅಥವಾ ನಿವೇಶನ ಹಂಚಿಕೆ ವಿಚಾರವಾಗಿ ಇಲಾಖೆಯಲ್ಲಿ ಅವಕಾಶಗಳಿದ್ದರೆ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಶನಿವಾರ ಸಂಸ್ಥೆಯ ಸರ್‌ ಎಂ.ವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಗಡಿ ಕಾಯ್ದ ಯೋಧರಿಗೆ ಗೌರವ ಸಮರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೈನಿಕರು ಮತ್ತು ನಿವೃತ್ತ ಸೈನಿಕರಿಗೆ ಇಂತಿಷ್ಟು ವರ್ಷಗಳಲ್ಲಿ ನಿವೇಶನ ಅಥವಾ ಜಮೀನು ಹಂಚಿಕೆ ಮಾಡಬೇಕು ಎಂಬ ನಿಯಮಗಳಿವೆ. ಆದರೆ, ಆ ನಿಯಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಯೋಧರು ಮತ್ತು ಅವರ ಕುಟುಂಬದವರು ಅದಕ್ಕಾಗಿ ಕಚೇರಿಗಳಿಗೆ ವರ್ಷಗಟ್ಟಲೆ ಅಲೆದಾಡಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೈನಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಕಾಲಮಿತಿಯೊಳಗೆ ಗೌರವಯುತವಾಗಿ ಸಿಗಬೇಕು. ಇದಕ್ಕಾಗಿ, ಚಾಲ್ತಿ ನಿಯಮಗಳಿಗೆ ಇಂದಿನ ಅಗತ್ಯತೆಗಳಿಗೆ ಅನುಗುಣವಾಗಿ ತಿದ್ದುಪಡಿ ತರುವ ಬಗ್ಗೆಯೂ ಆಲೋಚಿಸಬೇಕಾಗಿದೆ.

ಅಲ್ಲದೇ ಸೈನಿಕರು ಮತ್ತು ಯೋಧರ ಕುಟುಂಬದವರಿಗೆ ಜಮೀನು ಅಥವಾ ನಿವೇಶನ ಹಂಚಿಕೆಗೆ ಯಾವುದಾರರೂ ರೂಪದಲ್ಲಿ ನಮ್ಮ ಇಲಾಖೆಯಲ್ಲಿ ಅವಕಾಶಗಳಿದ್ದರೆ, ಆ ಬಗ್ಗೆ ಸರ್ಕಾರದ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸಲು ಸಿದ್ಧ ಎಂದು ಖಾದರ್‌ ಹೇಳಿದರು.

Advertisement

ಕಾರ್ಪಸ್‌ ನಿಧಿಗೆ ನೆರವು: ದೇಶ ಬಲಿಷ್ಠವಾಗಬೇಕಾದರೆ ಆರ್ಥಿಕತೆ ಮತ್ತು ಸೇನೆ ಬಲಿಷ್ಠವಾಗಿರಬೇಕು. ವಾಣಿಜ್ಯ ಮತ್ತು ಕೈಗಾರಿಕಾ ವಿಷಯಗಳನ್ನು ನೋಡಿಕೊಳ್ಳುವ ಎಫ್ಕೆಸಿಸಿಐ ಯೋಧರಿಗೆ ಗೌರವ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಪೂರ್ವ ಸಂಗಮವಾಗಿದೆ.

ಈ ಕಾರ್ಯಕ್ರಮ ನಿರಂತರವಾಗಿ ನಡೆದು ಇತರ ಸಂಘ-ಸಂಸ್ಥೆಗಳು ಮತ್ತು ಬೇರೆ ರಾಜ್ಯಗಳಿಗೂ ಮಾದರಿಯಾಗಬೇಕು. ಇದಕ್ಕಾಗಿ, ಸರ್ಕಾರದಿಂದ ಸಹಕಾರ ನೀಡಲು ಸಿದ್ಧ. ಯೋಧರ ಗೌರವ ಸಮರ್ಪಣೆ ಕಾರ್ಯಕ್ರಮಕ್ಕೆ ಎಫ್ಕೆಸಿಸಿಐ ನಿಗದಿತ ಮೊತ್ತದ “ಕಾರ್ಪಸ್‌ ನಿಧಿ’ ಸ್ಥಾಪಿಸಿದರೆ ಸರ್ಕಾರದಿಂದ ಅಷ್ಟೇ ಮೊತ್ತದ ನೆರವು ನೀಡುವ ಕುರಿತು ಮುಖ್ಯಮಂತ್ರಿ ಜತೆಗೆ ಚರ್ಚಿಸುತ್ತೇನೆ ಎಂದು ಖಾದರ್‌ ಭರವಸೆ ನೀಡಿದರು.

ಯೋಧರಿಗೆ ಗೌರವ ಅರ್ಪಣೆ: ಕಾರ್ಗಿಲ್‌ ಯುದ್ದದಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ ಕ್ಯಾಪ್ಟನ್‌ ನವೀನ್‌ ನಾಗಪ್ಪ, ಇತ್ತಿಚಿಗೆ ನಡೆದ ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ ಜವಾನ್‌ ಎಚ್‌. ಗುರು ಸೇರಿದಂತೆ ಸೈನಿಕರು ಮತ್ತು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು. ಈ ವೇಳೆ ಕ್ಯಾ. ನವೀನ್‌ ನಾಗಪ್ಪ ಅವರು ಕಾರ್ಗಿಲ್‌ ಯುದ್ದದ ಅನುಭವಗಳನ್ನು ಹಂಚಿಕೊಂಡರು.

ಎಫ್ಕೆಸಿಸಿಐ ಅಧ್ಯಕ್ಷ ಸುಧಾರರ್‌ ಎಸ್‌. ಶೆಟ್ಟಿ, ಚುನಾಯಿತ ಹಿರಿಯ ಉಪಾಧ್ಯಕ್ಷ ಪೆರಿಕಲ್‌ ಎಂ. ಸುಂದರ್‌, ಸದಸ್ಯತ್ವ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಬಿ. ಅಮರನಾಥ್‌, ನಿಕಟಪೂರ್ವ ಅಧ್ಯಕ್ಷ ಕೆ. ರವಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next