Advertisement

Kundapura: ನನಸಾಗದ ಫ್ಲೈಓವರ್‌ ಪಾರ್ಕ್‌ ಕನಸು- 3 ವರ್ಷಗಳಿಂದ ಬಾಕಿಯಾದ ಪ್ರಸ್ತಾವನೆ

01:17 PM Jan 04, 2024 | Team Udayavani |

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ನ ಫ್ಲೈಓವರ್‌ನ ಅಡಿಯಲ್ಲಿ ಪಾರ್ಕ್‌ ಮತ್ತು ಪಾರ್ಕಿಂಗ್ ಮಾಡುವ ಕನಸು ಇನ್ನೂ ನನಸಾಗಿಲ್ಲ. ಫ್ಲೈಓವರ್‌ನ ಸುಂದರೀಕರಣಕ್ಕೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

Advertisement

ಗುರುತಿಟ್ಟುಕೊಳ್ಳುವ ವೃತ್ತ ಕುಂದಾಪುರ ಶಾಸ್ತ್ರಿ ಸರ್ಕಲ್‌, ಶಾಸ್ತ್ರಿ ಪಾರ್ಕ್‌ ಹೆಸರು ವಾಸಿ. ಕುಂದಾಪುರಕ್ಕೆ ಎಲ್ಲಿಂದಲೇ ಬಂದರೂ
ಬಸ್ಸಿನಿಂದಿಳಿಯಲು ಸೂಚನೆ ಕೊಡುವುದು‌ ಇದೇ ವೃತ್ತವನ್ನು. ದೂರದೂರಿಗೆ ಬಸ್ಸೇರುವುದೂ ಇಲ್ಲಿಯೇ. ಯಾವುದೇ ಸ್ಥಳದ ಗುರುತು ಪರಿಚಯ ಹೇಳಬೇಕಾದರೂ ಶಾಸ್ತ್ರಿ ಸರ್ಕಲನ್ನು ಹೆಸರಿಸುತ್ತಾರೆ. ಇಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಕನ್‌ಸ್ಟ್ರಕ್ಷನ್ಸ್‌ ಕಂಪೆನಿ ಮೂಲಕ ನೀಡಿದ ಲಾಲ್‌ಬಹದ್ದೂರ್‌ ಶಾಸ್ತ್ರಿಗಳ ಸುಂದರ ಪ್ರತಿಮೆಯಿದೆ. ಪುರಸಭೆ ವೃತ್ತ ಹಾಗೂ ಗೋಪುರವನ್ನು ನಿರ್ಮಿಸಿದೆ.

ಪ್ರಯಾಣಿಕರಿಗೆ ಅವಶ್ಯ
ಪ್ರತಿನಿತ್ಯ ರಾತ್ರಿ ವೇಳೆ ಬೆಂಗಳೂರು, ಶಿವಮೊಗ್ಗ, ಮುಂಬಯಿ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಹೋಗುವ ಬಸ್‌ಗಳನ್ನು ಫ್ಲೈಓವರ್‌ ಸಮೀಪ ಏರುತ್ತಾರೆ. ಸಹಜವಾಗಿ ಪ್ರಯಾಣಿಕರ ಜಂಗುಳಿ ಇರುತ್ತದೆ. ಮುಂಜಾನೆ ವೇಳೆ ಬೇರೆ ಬೇರೆ ಊರುಗಳಿಂದ ಬಂದವರು ಇಳಿಯುುವುದೂ ಇಲ್ಲಿಯೇ. ಆದರೆ ಫ್ಲೈಓವರ್‌ ಬೆಳಕನ್ನು ನಂಬಿ ಇಳಿಯುವಂತಿಲ್ಲ. ಹೈ ಮಾಸ್ಟ್‌ ದೀಪ ಒಂದು
ಕಡೆಯಲ್ಲಿದೆ. ಅದೇ ಕಡೆಯಲ್ಲಿ ಫ್ಲೈಓವರ್‌ ದೀಪಗಳ ಬೆಳಕೂ ಇದೆ. ಆದರೆ ಆರ್‌.ಎನ್‌. ಶೆಟ್ಟಿ ಸಭಾಂಗಣದ ಬದಿಯ ಸರ್ವಿಸ್‌ ರಸ್ತೆ ಮತ್ತು ಫ್ಲೈಓವರ್‌ ಮೇಲಿನಿಂದ ಬೀಳುವ ಬೀದಿ ದೀಪದ ಬೆಳಕು ಯಾವಾಗ ಇರುತ್ತದೆ ಯಾವಾಗ ಕತ್ತಲಲ್ಲಿ ಇರುತ್ತದೆ ಎಂದು ಊಹಿಸುವುದೇ ಕಷ್ಟ. ಆಗಾಗ ಕತ್ತಲಾವರಿಸುತ್ತದೆ. ಸ್ಥಳೀಯರು ಸಹಾಯಕ ಕಮಿಷನರ್‌ ಅವರ ಗಮನಕ್ಕೆ ತಂದು ಸರಿಪಡಿಸಬೇಕಾದ ಅನಿವಾರ್ಯ ಇದೆ.

ಒಂದು ಬೀದಿ ದೀಪ ಸರಿಪಡಿಸಲೂ ಸಹಾಯಕ ಕಮಿಷನರ್‌ ಅವರ ಮೊರೆ ಹೋಗಬೇಕು, ಅವರಲ್ಲಿಂದಲೇ ಗುತ್ತಿಗೆದಾರ ಕಂಪೆನಿಗೆ ಫರ್ಮಾನು ಹೋಗಬೇಕೆಂಬ ದುರವಸ್ಥೆ ಇದೆ. ಸಾರ್ವಜನಿಕರ ಮಾತಿಗೆ ಬೆಲೆಯೇ ಇಲ್ಲ. ಬೆಳಕು ನೀಡದ ಈ ದೀಪಗಳ ಬಗ್ಗೆಯೂ ಹೆದ್ದಾರಿ ಅಧಿಕಾರಿಗಳಿಗೆ ಕೂಡ ದೂರು ನೀಡಬೇಕಾಗಿ ಬರುತ್ತಿತ್ತು. ದೂರು ನೀಡಿದರೆ ಕೆಲವು ಬಾರಿ ಸರಿಪಡಿಸಿದರೂ ಅನೇಕ ಬಾರಿ ಸರಿಪಡಿಸಲಾಗಿದೆ ಎಂದು ಸುಳ್ಳು ಸುಳ್ಳೇ ಹೇಳಿ ದಾರಿ ತಪ್ಪಿಸಲಾಗುತ್ತಿತ್ತು.

ಸದುಪಯೋಗ
ಫ್ಲೈಓವರ್‌ ಅಡಿಯಲ್ಲಿ ಇನ್ನು ಮುಂದೆ ತ್ಯಾಜ್ಯ ರಾಶಿ ಇರುವುದಿಲ್ಲ, ವಲಸೆ ಕಾರ್ಮಿಕರ ಹೊಡೆದಾಟ, ಬಡಿದಾಟ, ಕಚ್ಚಾಟ, ಕೊಚ್ಚೆ ಇರುವುದಿಲ್ಲ. ಗಬ್ಬು ನಾರುವುದಿಲ್ಲ. ಕುಂದಾಪುರ ಪ್ರವೇಶಿಸಿದಾಗ ಇಂತಹ ಸ್ಥಿತಿಯಿದೆ ಎಂದು ಮೂಗುಮುಚ್ಚಿಕೊಂಡು
ಹೇಳಬೇಕಾದ ಸ್ಥಿತಿ ಇರುವುದಿಲ್ಲ. ಹೀಗೊಂದು ಆಶಾಭಾವನೆ ಹೊಮ್ಮಿ ವರ್ಷ ಮೂರಾಯಿತು. ಫ್ಲೈಓವರ್‌ ಮೇಲೆ ಓಡಾಟಕ್ಕೆ ಬಿಟ್ಟು ಕೊಟ್ಟು ಮೂರು ವರ್ಷಗಳಾದರೂ ಅದರ ಕೆಳಗೆ ಪೂರ್ಣಪ್ರಮಾಣದಲ್ಲಿ ಸ್ವತ್ಛತೆ ಕಾಪಾಡಲು, ಜಾಗದ ಸದುಪಯೋಗ ಮಾಡಲು ಇನ್ನೂ ಸಾಧ್ಯವಾಗಲಿಲ್ಲ.

Advertisement

ಸುಂದರೀಕರಣ
ಲಯನ್ಸ್‌ ಸಂಸ್ಥೆಯವರು ಸ್ವಚ್ಛ ಕುಂದಾಪುರ ಭಾಗವಾಗಿ ಫ್ಲೈಓವರ್‌ನ ಒಂದು ಭಾಗದಲ್ಲಿ ಬಣ್ಣ ಬಳಿದು, ಆಲಂಕಾರಿಕ ಚಿತ್ರಗಳನ್ನು ಬಿಡಿಸಿ, ಸುಂದರವಾದ ಉದ್ಯಾನವನ ನಿರ್ಮಿಸಲು ಮುಂದಾಗಿದ್ದರು. ಇನ್ನೊಂದು ಭಾಗದಲ್ಲಿ ದಿವ್ಯಾ ಹೆಗ್ಡೆ ಅವರ ಟಿಪ್ಸ್‌ ಸೆಷನ್ಸ್‌ ಎನ್ನುವ ಸಂಸ್ಥೆ ಅಭಿವೃದ್ಧಿ ಮಾಡಲು ಮುಂದಾಗಿದ್ದರು. ಫ್ಲೈಓವರ್‌ ಅಡಿಯನ್ನು ಸುಂದರಗೊಳಿಸುವ ಮೂಲಕ ಪಾರ್ಕ್‌ ಮತ್ತು ಪಾರ್ಕಿಂಗ್‌ಗೆ ಅವಕಾಶ ಆಗುವಂತಹ ಪ್ರದೇಶ ಆಗಲಿದೆ ಎಂದೇ ಕುಂದಾಪುರದ ಜನ ಭಾವಿಸಿದ್ದರು.

ಅಭಿವೃದ್ಧಿಗೇಕೆ ಮೀನಮೇಷ?
ಫ್ಲೈ ಓವರ್‌ ಅಡಿಯಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು ಅಭಿವೃದ್ಧಿಗೆ ಕೇಳುತ್ತಿರುವುದೇ ಮೂರು ವರ್ಷಗಳಾಯಿತು. ವಾಹನಗಳ
ಪಾರ್ಕಿಂಗ್‌ಗೆ ಅವಕಾಶ ಇಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದರು. ಹಾಗಿದ್ದರೂ ಬಿ.ಸಿ.ರೋಡ್‌,
ಸುರತ್ಕಲ್‌, ಮೂಲ್ಕಿ, ಕೂಳೂರು, ಕೊಟ್ಟಾರ ಮೊದಲಾದೆಡೆ ವಾಹನಗಳು ನಿಲ್ಲುತ್ತವೆ. ಈ ಬಗ್ಗೆ ಜನರೂ ಪ್ರಶ್ನಿಸಲಿಲ್ಲ, ಅಧಿಕಾರಿಗಳೂ ತಾವಾಗಿ ಉತ್ತರಿಸಲಿಲ್ಲ. ಒಟ್ಟಿನಲ್ಲಿ ಸುಂದರೀಕರಣವಾದರೂ ಆಗಲಿ ಎಂದು ಜನ ಕಾಯುತ್ತಿದ್ದರು. ಮೂರು ವರ್ಷಗಳು ಅದರಷ್ಟಕ್ಕೇ ಜಾರಿದರೂ ಈಗಿನ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಯೊಂದು ಪುರಸಭೆ ಕಚೇರಿಯಲ್ಲಿ ನಡೆದು ಮೂರು ತಿಂಗಳಾಗುತ್ತಾ ಬಂತು. ಇನ್ನೇನು ಸಂಘ ಸಂಸ್ಥೆಯವರು ಇಲ್ಲಿ ಸುಂದರೀಕರಣ ಆರಂಭಿಸುತ್ತಾರೆ ಎಂದು ಜನ ಕಾದದ್ದೇ ಬಂತು. ಇನ್ನೂ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಫ್ಲೈ ಓವರ್‌ ಅಡಿಯಲ್ಲಿ ಅದೇ ತುಕ್ಕು ಹಿಡಿದ ಕಬ್ಬಿಣ, ಶುಚಿಯಿಲ್ಲದ ವಾತಾವರಣ, ಅಡ್ಡಾದಿಡ್ಡಿ ನಿಲ್ಲಿಸಿದ ವಾಹನಗಳು, ಸಂಜೆ ವೇಳೆಗೆ ಅಪರಿಚಿತರ ತಾಣವಾಗಿಯೇ ಮುಂದುವರಿದಿದೆ. ಯಾವಾಗ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಕಾದು ನೋಡಬೇಕಿದೆ.

ವಾರದೊಳಗೆ ಆರಂಭ
ಫ್ಲೈ ಓವರ್‌ ಅಡಿಯಲ್ಲಿ ಬಣ್ಣ ಬಳಿದು ಉದ್ಯಾನವನ ನಿರ್ಮಿಸಲು ಎರಡು ಸಂಸ್ಥೆಯವರು ಮುಂದೆ ಬಂದಿದ್ದು ವಾರದೊಳಗೆ ಕಾರ್ಯಾರಂಭಿಸುವುದಾಗಿ ಮಾಹಿತಿ ನೀಡಿದ್ದಾರೆ.
 -ರಶ್ಮೀ ಎಸ್‌.ಆರ್‌. ಸಹಾಯಕ ಕಮಿಷನರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next