ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಇನ್ನಷ್ಟು ವಿಸ್ತಾರಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರಕ್ಕೆ ಆಗಮಿಸುವ ವಿಮಾನಗಳ ಸಂಖ್ಯೆ ಹೆಚ್ಚತೊಡಗಿದ್ದು, ಪ್ರಯಾಣಿಕರ ಸಂಖ್ಯೆಯೂ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಭದ್ರತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪ್ರಯಾಣಿಕರು ಹಾಗೂ ಅವರ ಸರಕಗಳ ತಪಾಸಣೆ ಮಾಡುವುದು, ನಿರ್ವಹಿಸುವುದು ಕಷ್ಟಕರವೆನಿಸುತ್ತಿದೆ. ಈಗಿರುವ ಟರ್ಮಿನಲ್ ಕಟ್ಟಡ, ಅಪ್ರಾನ್ ಸ್ಥಳ ಚಿಕ್ಕದೆನಿಸುತ್ತಿದೆ. ಅದನ್ನು ವಿಸ್ತರಿಸುವ ನಿಟ್ಟಿನಲ್ಲಿ ಸ್ಥಳೀಯ ವಿಮಾನ ನಿಲ್ದಾಣದ ನಿರ್ದೇಶಕರು ಕೇಂದ್ರ ವಿಮಾನಯಾನ ಸಚಿವರ ಸಲಹೆ ಮೇರೆಗೆ ವಿಮಾನ ನಿಲ್ದಾಣದ ಹೆಡ್‌ಕ್ವಾರ್ಟರ್ಸ್‌ಗೆ ಟರ್ಮಿನಲ್ ಕಟ್ಟಡ ವಿಸ್ತರಣೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕೇಂದ್ರ ವಿಮಾನಯಾನ ಸಚಿವ ಜಯಂತ ಸಿನ್ಹಾ ಅವರು ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದಾಗ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಗಮನಿಸಿದ್ದರು. ಅಲ್ಲದೆ ಸಂಸದ ಪ್ರಹ್ಲಾದ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಟರ್ಮಿನಲ್ ಕಟ್ಟಡ ವಿಸ್ತರಣೆ ಕುರಿತು ಪ್ರಸ್ತಾಪಿಸಿದ್ದಕ್ಕೆ ಸ್ಥಳೀಯ ವಿಮಾನ ನಿಲ್ದಾಣ ನಿರ್ದೇಶಕರಿಗೆ ಟರ್ಮಿನಲ್ ಕಟ್ಟಡ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಗುಣಮಟ್ಟ: ನಗರದ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಅಂದಾಜು 141 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ರನ್ ವೇ 2,600 ಮೀಟರ್ ಉದ್ದ ಹಾಗೂ 45 ಮೀಟರ್ ಅಗಲ ಇದೆ. ಟರ್ಮಿನಲ್ ಕಟ್ಟಡ 5,400 ಚಮೀ ವಿಸ್ತೀರ್ಣ ಹೊಂದಿದ್ದು, ಸಂಪೂರ್ಣ ಕೇಂದ್ರೀಯ ಹವಾನಿಯಂತ್ರಿತ (ಸಿಎಸಿ) ವ್ಯವಸ್ಥೆ ಹೊಂದಿದೆ. ಪ್ರಯಾಣಿಕರ ಸುರಕ್ಷತೆ, ಭದ್ರತೆಗಾಗಿ 80 ಸಿಸಿಟಿವಿ ಹಾಗೂ ಸರಕು ತಪಾಸಣೆಗಾಗಿ ಆರು ಎಕ್ಸರೇ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಕಟ್ಟಡದಲ್ಲಿ ಏಕಕಾಲಕ್ಕೆ 200ಕ್ಕೂ ಅಧಿಕ ಪ್ರಯಾಣಿಕರು ಕುಳಿತುಕೊಳ್ಳಬಹುದಾಗಿದೆ. 6ಕ್ಕೂ ಅಧಿಕ ಏರ್ ಲೈನ್ಸ್ ಕೌಂಟರ್‌ಗಳಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರಬಹುದಾದ ಎಲ್ಲ ಬಗೆಯ ಆಧುನಿಕ ಸೌಲಭ್ಯಗಳನ್ನು ಇಲ್ಲಿನ ಟರ್ಮಿನಲ್ ಹೊಂದಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡದಲ್ಲಿ ಪ್ರಯಾಣಿಕರದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಟರ್ಮಿನಲ್ ಕಟ್ಟಡ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ವಿಸ್ತರಿಸಲು ಯೋಜಿಸಲಾಗಿದ್ದು, ಕೇಂದ್ರ ವಿಮಾನಯಾನ ಸಚಿವರ ಸೂಚನೆ ಮೇರೆಗೆ ಈಗಾಗಲೇ ವಿಮಾನ ನಿಲ್ದಾಣದ ಹೆಡ್ ಕ್ವಾರ್ಟರ್ಸ್‌ಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.
.
ಅಹಲ್ಯಾ ಎಸ್. ಕಾಕೋಡಿಕರ,
ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರು.
ಶಿವಶಂಕರ ಕಂಠಿ