Advertisement

ಗುಜರಾತ್‌ ಮಾದರಿ ನಿಧಿಗೆ ಪ್ರಸ್ತಾವನೆ?

12:32 AM Dec 31, 2019 | Lakshmi GovindaRaj |

ಬೆಂಗಳೂರು: ಎಲೆಕ್ಟ್ರಿಕ್‌ ಬಸ್‌ ಸೇವೆಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ ಕಂಪನಿಗಳು ನಿರೀಕ್ಷೆಗಿಂತ ಹೆಚ್ಚು ದರ ನಿಗದಿಪಡಿಸಿದ್ದು, ಇದರಿಂದ ಆಗಲಿರುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರಿದೂ ಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಗುಜರಾತ್‌ ಮಾದರಿ ಅನುಸರಿಸಲು ಮುಂದಾಗಿದೆ.

Advertisement

ಹವಾನಿಯಂತ್ರಿತ ಬಸ್‌ನ ಪ್ರತಿ ಕಿ.ಮೀ. ಕಾರ್ಯಾಚರಣೆಗೆ ಆಗುವ ಖರ್ಚು ಅನ್ನು ಪ್ರತಿ ಕಿ.ಮೀ.ಗೆ ಬರುವ ಆದಾಯಕ್ಕೆ ಹೋಲಿಸಿದರೆ, ಕನಿಷ್ಠ 25ರಿಂದ 28 ರೂ. ಹೆಚ್ಚುವರಿ ಹೊರೆ ಆಗುತ್ತದೆ. ಈ ಹೊರೆಯನ್ನು ತಗ್ಗಿಸಲು ಗುಜರಾತ್‌ ಮಾದರಿಯಲ್ಲಿ ಸಂಸ್ಥೆಗೆ “ಕಾರ್ಯಸಾಧ್ಯತಾ ಅಂತರ ನಿಧಿ’ (ವಯಾಬಲಿಟಿ ಗ್ಯಾಪ್‌ ಫ‌ಂಡ್‌)ಯನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ “ಫೇಮ್‌-2′ ಅಡಿ ರಾಜ್ಯ ಸಾರಿಗೆ ನಿಗಮಗಳು ಒಟ್ಟಾರೆ 400 ವಿದ್ಯುತ್‌ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಲು ಟೆಂಡರ್‌ ಆಹ್ವಾನಿಸಿತ್ತು. ಇದರಲ್ಲಿ ಬಿಎಂಟಿಸಿಗೇ 300 ಬಸ್‌ಗಳು ಪೂರೈಕೆ ಆಗಲಿವೆ. 37 ಆಸನಗಳ ಈ 300 ಎಲೆಕ್ಟ್ರಿಕ್‌ ಬಸ್‌ಗಳಿಗೆ ಈಗಾಗಲೇ ತಾಂತ್ರಿಕ ಮತ್ತು ಹಣಕಾಸು ಬಿಡ್‌ ತೆರೆಯಲಾಗಿದ್ದು, ಮೂಲಗಳ ಪ್ರಕಾರ ಎರಡು ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದು, ಈ ಪೈಕಿ ಹೈದರಾಬಾದ್‌ ಮೂಲದ ಕಂಪೆನಿಯು ಕನಿಷ್ಠ ದರ ಅಂದರೆ ಕಿ.ಮೀ.ಗೆ ಸುಮಾರು 88ರಿಂದ 90 ರೂ. (ಎಸಿ) ನಿಗದಿಪಡಿಸಿವೆ. ಇದಲ್ಲದೆ, ಚಾಲಕ ಮತ್ತು ನಿರ್ವಹಣಾ ವೆಚ್ಚ ಪ್ರತ್ಯೇಕವಾಗಿರುತ್ತದೆ. ಹಾಗಾಗಿ, ಹೆಚ್ಚು-ಕಡಿಮೆ 100 ರೂ. ದಾಟಲಿದೆ.

ಆದರೆ, ವೋಲ್ವೋ ಬಸ್‌ವೊಂದರಿಂದ ಪ್ರಸ್ತುತ ಪ್ರತಿ ಕಿ.ಮೀ. ಬರುವ ಆದಾಯವೇ 66ರಿಂದ 68 ರೂ. ಎಂದು ಅಂದಾಜಿಸಲಾಗಿದೆ. ಇನ್ನು ಡೀಸೆಲ್‌ ಆಧಾರಿತ ಹವಾನಿಯಂತ್ರಿ ಬಸ್‌ನ ಕಾರ್ಯಾಚರಣೆ ವೆಚ್ಚ ಕಿ.ಮೀ.ಗೆ 75ರಿಂದ 80 ರೂ. ಆಗುತ್ತದೆ. ಹೀಗಿರುವಾಗ, ಯೋಜನೆ ಅನುಷ್ಠಾನ ಖರ್ಚು ಮತ್ತು ಆದಾಯದ ನಡುವಿನ ಅಂತರದ ಮೊತ್ತವನ್ನು ಭರಿಸುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದೆ. ಈ ಸಂಬಂಧ ಹಣಕಾಸು ಇಲಾಖೆಯೊಂದಿಗೆ ಮಾತುಕತೆಯನ್ನೂ ನಡೆಸುತ್ತಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಗುಜರಾತ್‌ನಲ್ಲಿ ಹೇಗಿದೆ?: ಗುಜರಾತಿನಲ್ಲಿ ಕೂಡ ಇದೇ ರೀತಿ ನಗರ ಸಾರಿಗೆಗೆ ವಿದ್ಯುತ್‌ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಿದೆ. ಬಸ್‌ ಕಾರ್ಯಾಚರಣೆ ಖರ್ಚು ಮತ್ತು ಅದರಿಂದ ಬರುವ ಆದಾಯದ ನಡುವಿನ ಅಂತರವನ್ನು ಅಲ್ಲಿನ ಸರ್ಕಾರವೇ ಭರಿಸುತ್ತಿದೆ. ಅದೇ ರೀತಿ, ಇಲ್ಲಿಯೂ ಅನುದಾನದ ನೆರವು ನೀಡಬೇಕು ಎಂಬುದು ಸಂಸ್ಥೆಯ ಪ್ರತಿಪಾದನೆ. ಅಂದಹಾಗೆ, ವಿದ್ಯುತ್‌ಚಾಲಿತ ಬಸ್‌ವೊಂದಕ್ಕೆ ಕೇಂದ್ರವು ಫೇಮ್‌-2 ಯೋಜನೆ ಅಡಿ ಗರಿಷ್ಠ 50 ಲಕ್ಷ ರೂ. ಸಬ್ಸಿಡಿ ನೀಡುತ್ತಿದೆ.

Advertisement

ಬಸ್‌ಗೆ ತಗಲುವ ವೆಚ್ಚ ಅಂದಾಜು 1.50 ಕೋಟಿ ರೂ. ಉಳಿದ ಒಂದು ಕೋಟಿ ರೂ.ಗಳನ್ನು ಪ್ರತಿ ಕಿ.ಮೀ.ಗೆ ದರ ನಿಗದಿಪಡಿಸಿ ಗುತ್ತಿಗೆ ರೂಪದಲ್ಲಿ ಕಾರ್ಯಾಚರಣೆ ಮಾಡುವ ಮೂಲಕ ಸರಿದೂಗಿಸಬೇಕಾಗುತ್ತದೆ. ನಿರೀಕ್ಷೆಗಿಂತ ಹೆಚ್ಚು ಮೊತ್ತಕ್ಕೆ ಬಿಡ್‌ ಮಾಡಿದ್ದರಿಂದ ಬಿಎಂಟಿಸಿಯು ಇಕ್ಕಟ್ಟಿಗೆ ಸಿಲುಕಿದೆ. ಯೋಜನೆ ಅನುಷ್ಠಾನದಿಂದ ಕೋಟ್ಯಂತರ ರೂ. ಆರ್ಥಿಕ ಹೊರೆ ಆಗುತ್ತದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಇದು ನುಂಗಲಾರದ ತುತ್ತು. ಹಾಗಂತ, ಅನುಷ್ಠಾನ ಮಾಡದಿದ್ದರೆ ಸರ್ಕಾರಗಳ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದು, ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯೂ ಇದಾಗಿದೆ. ಬಸ್‌ಗಳ ಖರೀದಿ-ಗುತ್ತಿಗೆ ನಡುವಿನ ಹಗ್ಗಜಗ್ಗಾಟದಲ್ಲೇ ಫೇಮ್‌-1 ಅನುಷ್ಠಾನ ಆಗಲಿಲ್ಲ. ಈಗ ಮತ್ತೂಂದು ನೆಪದಲ್ಲಿ ಯೋಜನೆಗೆ ಹಿನ್ನಡೆಯಾದರೆ, ಅದು ಮತ್ತೂಂದು ರೀತಿಯ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಚಾಲಿತ ಬಸ್‌ಗಳನ್ನು ರಸ್ತೆಗಿಳಿಸುವ ಅನಿವಾರ್ಯತೆ ಕೂಡ ಇದೆ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕನಿಷ್ಠ ಬಿಡ್‌ಗೆ ಪೂರೈಕೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮ (ಎನ್‌ಡಬುಕೆಆರ್‌ಟಿಸಿ)ದ ವ್ಯಾಪ್ತಿಯಲ್ಲಿ ಬರುವ ಅಂತರ ನಗರಗಳಲ್ಲಿ ಕಾರ್ಯಾಚರಣೆ ಮಾಡಲು ತಲಾ 50 ವಿದ್ಯುತ್‌ಚಾಲಿತ ಹವಾನಿಯಂತ್ರಿತ ಬಸ್‌ಗಳಿಗೂ ಟೆಂಡರ್‌ ಕರೆಯಲಾಗಿತ್ತು. ಕನಿಷ್ಠ ಬಿಡ್‌ ಕ್ರಮವಾಗಿ ಕಿ.ಮೀ.ಗೆ 68.4 ರೂ. ಹಾಗೂ 91.8 ರೂ. ಆಗಿದೆ. ಮೂರೂ ಸಂಸ್ಥೆಗಳಿಗೆ “Olectra-BYD’ ಕಂಪನಿ ಕನಿಷ್ಠ ಬಿಡ್‌ಗೆ ಬಸ್‌ಗಳನ್ನು ಪೂರೈಸಲು ಮುಂದೆಬಂದಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದು ಆಯಾ ಸಾರಿಗೆ ನಿಗಮಗಳ ಆಡಳಿತ ಮಂಡಳಿಯಲ್ಲಿ ಅನುಮೋದನೆಗೊಂಡ ನಂತರ ಅಂತಿಮವಾಗಲಿದೆ.

ಈಚೆಗಷ್ಟೇ ತಾಂತ್ರಿಕ ಮತ್ತು ಹಣಕಾಸು ಬಿಡ್‌ ತೆರೆಯಲಾಗಿದೆ. ಆಯಾ ಕಂಪೆನಿಗಳು ಮಾಡಿರುವ ಬಿಡ್‌ ದರವನ್ನು ನೋಡಿಕೊಂಡು, ಒಂದು ವೇಳೆ ಸಂಸ್ಥೆಗೆ ಆರ್ಥಿಕವಾಗಿ ಹೊರೆ ಆಗುವಂತಿದ್ದರೆ, “ವಯಾಬಿಲಿಟಿ ಗ್ಯಾಪ್‌ ಫ‌ಂಡ್‌’ಗಾಗಿ ಸರ್ಕಾರ ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.
-ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next