ಹುಬ್ಬಳ್ಳಿ: ರಾಜ್ಯ ಸರಕಾರ 2021-22ನೇ ಸಾಲಿನಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಹೊಸ ಅವೈಜ್ಞಾನಿಕ ಹಾಗೂ ಕರಾಳ ಕಾನೂನನ್ನು ಜಾರಿಗೆ ತಂದಿರುವುದನ್ನು ಹಿಂಪಡೆಯಬೇಕೆಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಕರದಾತರಿಗೆ, ಜನಸಾಮಾನ್ಯರಿಗೆ ಅತ್ಯಂತ ಹೊರೆಯಾಗಿ ಅಸಮಾಧಾನಗೊಂಡಿರುವರು. ಈ ಕಾನೂನು ವಿರೋಧಿಸಿ ರಾಜ್ಯದಲ್ಲಿನ ಹಲವಾರು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳು, ವಿವಿಧ ಸಂಘ- ಸಂಸ್ಥೆಗಳೊಂದಿಗೆ ಸಂಸ್ಥೆಯಲ್ಲಿ ಸಭೆ ಸೇರಿ ಕರ್ನಾಟಕ ಸರಕಾರಕ್ಕೆ ತೆರಿಗೆ ಹೆಚ್ಚಳ ಹಿಂಪಡೆದು ಜನಸ್ನೇಹಿ ತೆರಿಗೆ ವ್ಯವಸ್ಥೆ ರೂಪಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಸರಕಾರದಿಂದ ಈವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ಬಂದಿಲ್ಲ.
ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಅವರ ನೇತೃತ್ವದಲ್ಲಿ ಭೆಟ್ಟಿಯಾಗಿ ಆಸ್ತಿ ಕರ ಹೆಚ್ಚಳ ಹಿಂಪಡೆಯಲು ಸರಕಾರದ ಮೇಲೆ ಒತ್ತಡ ತರಬೇಕೆಂದು ಮನವಿ ಮಾಡಲಾಯಿತು.
ಕೂಡಲೇ ಸಚಿವರು ಸ್ಪಂದಿಸಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಶಾಸಕ ಅರವಿಂದ ಬೆಲ್ಲದ ಅವರನ್ನು ಸಂಪರ್ಕಿಸಿ ಶೀಘ್ರದಲ್ಲೇ ಈ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಸಭೆ ಆಯೋಜಿಸಬೇಕೆಂದು ತಿಳಿಸಿದರು.
ಜತೆಗೆ ಸಭೆಯಲ್ಲಿ ನಾನು ಸಹ ಪಾಲ್ಗೊಳ್ಳುವ ಮೂಲಕ ಒಂದು ಒಳ್ಳೆಯ ನಿರ್ಧಾರ ಕೈಗೊಳ್ಳೋಣ ಎಂದು ತಿಳಿಸಿದ್ದಾರೆ. ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ, ಮಾಜಿ ಅಧ್ಯಕ್ಷ ರಮೇಶ ಪಾಟೀಲ, ಸದಸ್ಯರಾದ ಬಾಳು ಮಗಜಿಕೊಂಡಿ, ಅಶ್ವಿನ ಕೋತಂಬ್ರಿ, ಚನ್ನು ಹೊಸಮನಿ, ಶಶಿಧರ ಶೆಟ್ಟರ ಸೇರಿದಂತೆ ಇನ್ನಿತರರಿದ್ದರು.