ಬೆಂಗಳೂರು: ಬಿಬಿಎಂಪಿಗೆ ಆಸ್ತಿ ತೆರಿಗೆಯೇ ಸಂಪನ್ಮೂಲದ ಸಂಜೀವಿನಿ. ಆದರೆ, ಹಲವು ವರ್ಷಗಳಿಂದ ಬಾಕಿ
ಉಳಿಸಿಕೊಂಡವರಿಂದ ಬರ ಬೇಕಾದ ಬಾಕಿ ಮೊತ್ತವೇ 1,211 ಕೋಟಿ ರೂ. ಹೀಗಾಗಿ, ವಲಯವಾರು ಆಸ್ತಿ ತೆರಿಗೆ ಬಾಕಿ
ಉಳಿಸಿಕೊಂಡಿರುವವರ ಪಟ್ಟಿ ಮಾಡಿ ನೋಟಿಸ್ ನೀಡಿ ಅದಕ್ಕೂ ಜಗ್ಗದಿದ್ದರೆ ಚರಾಸ್ತಿ ಜಪ್ತಿಗೂ ಪಾಲಿಕೆ ತೀರ್ಮಾನಿಸಿದೆ.
ಮಾಲ್‌ಗಳು, ವಾಣಿಜ್ಯ ಉದ್ಯಮಗಳು ಹಾಗೂ ಬೃಹತ್ ಕಟ್ಟಡಗಳ ಹಲವು ಮಾಲೀಕರು ಕಳೆದ ಹಲವು ವರ್ಷಗಳಿಂದ ಪಾಲಿಕೆಗೆ ಆಸ್ತಿತೆರಿಗೆ ಪಾವತಿ ಮಾಡದೆ ಆಟವಾಡಿಸುತ್ತಿದ್ದು ಅಂತವರಿಗೆ ಚಾಟಿ ಬೀಸಲು ಪಾಲಿಕೆ ಮುಂದಾಗಿದೆ. ಒಂದು ವರ್ಷಕ್ಕಿಂತ ಹೆಚ್ಚು ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧ ಮಾಡಿ ಅವರ ವಿರುದ್ಧ ಕಾರ್ಯಚರಣೆ ಆರಂಭಿಸಿ ಎಂದು ಆಯುಕ್ತರು ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಒಂದೇ ಆಸ್ತಿ ಹಲವು ಸಂಖ್ಯೆ: ಈ ಮಧ್ಯೆ, ಪಾಲಿಕೆ ವ್ಯಾಪ್ತಿಯಲ್ಲಿ ಒಂದು ನಿರ್ದಿಷ್ಟ ಆಸ್ತಿಗೆ ಎರಡು ಅಥವಾ ಮೂರು ಆಸ್ತಿ ಪಾವತಿ ಸಂಖ್ಯೆ ಸೃಷ್ಟಿಯಾಗಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ, ಈ ರೀತಿ ಹೆಚ್ಚುವರಿ ಸಂಖ್ಯೆಯನ್ನು ತೆಗೆದು ಹಾಕುವಂತೆಯೂ ನಿರ್ದೇಶನ ನೀಡಿದ್ದಾರೆ.
ಕೋವಿಡ್ ಹಿನ್ನೆಲೆ ಈ ವರ್ಷದ ಬಾಕಿ ಉಳಿಸಿಕೊಂಡಿರುವವರಿಗೆ ಒತ್ತಡ ಹೇರುವುದು ಬೇಡ. ಮುಂದಿನ ವರ್ಷದ ಮಾ. 31 ವರೆಗೂ ಕಾಲಾವಕಾಶ ಇದೆ. ಹೀಗಾಗಿ, ಒಂದು ವರ್ಷಕ್ಕಿಂತ ಹೆಚ್ಚು ಅವಧಿಯ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವ ರಿಂದ ವಸೂಲಿಗೆ ಮುಂದಾಗಿ ಎಂದು ಸೂಚಿಸಿದ್ದಾರೆ. ಪ್ರಸಕ್ತ ವರ್ಷ ಕೋವಿಡ್ ನಡುವೆಯೂ ಏಪ್ರಿಲ್‌ನಿಂದ ಇದುವರೆಗೆ 1,824 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆನ್‌ಲೆ„ನ್ ಮೂಲಕ 937 ಕೋಟಿ ರೂ. ಹಾಗೂ ಚಲನ್ ಮೂಲಕ 885 ಕೋಟಿ ರೂ. ಸಂಗ್ರಹವಾಗಿದೆ.
ನಕಲಿ ದಾಖಲೆ ಸೃಷಿಸಿ ಅವ್ಯವಹಾರ ಆರೋಪ: ಕ್ರಮಕೆ ಪತ್ರ : ಬಿಬಿಎಂಪಿಯ ವಿವಿಧ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ನಕಲಿ ದಾಖಲೆ ನೀಡಿದ್ದಾರೆ. ಇದಕ್ಕೆ ಪಾಲಿಕೆಯ ಕೆಲ ಅಧಿಕಾರಿಗಳೂ ಸಹಕಾರ ನೀಡಿದ್ದಾರೆ ಎಂದು ಮೇಯರ್ ಎಂ.ಗೌತಮ್‌ಕುಮಾರ್ ದೂರಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಅಧಿಕಾರಿಗಳು, ಗುತ್ತಿಗೆದಾರರ ಜತೆ ಕೈ ಜೋಡಿಸಿ ಕೆಲವು ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೆ, ನಕಲಿ ದಾಖಲೆಗಳಿ ದ್ದರೂ ಟೆಂಡರ್‌ನ ತಾಂತ್ರಿಕ ಬಿಡ್ ಮೌಲ್ಯ ಮಾಪನ ಕಾರ್ಯ ನಿರ್ವಹಿಸುವಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪಾಲಿಕೆಯ ರಸ್ತೆ, ಮೂಲ ಭೂತ ಸೌಕರ್ಯ ವಿಭಾಗ ಹಾಗೂ ಬೃಹತ್ ನೀರುಗಾಲುವೆ ವಿಭಾಗದಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಇಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಳ್ಳಬೇಕು ಹಾಗೂ ಗುತ್ತಿಗೆಯನ್ನು ರದ್ದು ಪಡಿಸುವಂತೆ ಒತ್ತಾಯಿಸಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ಜಾರಿ ಮಾಡುವಂತೆ ಆಯುಕ್ತರು ಸೂಚನೆ ನೀಡಿದ್ದು, ಇದರಂತೆ ಕ್ರಮ ವಹಿಸುತ್ತಿದ್ದೇವೆ. ನೋಟಿಸ್ ನೀಡಿದ ಮೇಲೂ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದರೆ, ಸಂಬಂಧ ಪಟ್ಟ ಮಾಲೀಕರ ಚರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು. -ಡಾ.ಎಸ್.ಬಸವರಾಜ್, ವಿಶೇಷ ಆಯುಕ್ತ (ಕಂದಾಯ)
– ಹಿತೇಶ್ ವೈ