Advertisement

ಆಸ್ತಿ ತೆರಿಗೆ ಸಂಗ್ರಹ ಗುರಿ ತಲುಪದ ಪಾಲಿಕೆ

11:54 PM Apr 01, 2019 | Lakshmi GovindaRaju |

ಬೆಂಗಳೂರು: ತೆರಿಗೆ ವ್ಯಾಪ್ತಿಗೆ ಪ್ರತಿ ವರ್ಷ ಸಾವಿರಾರು ಆಸ್ತಿಗಳು ಸೇರ್ಪಡೆಯಾಗುತ್ತಿದ್ದರೂ, ಆಸ್ತಿ ತೆರಿಗೆ ಸಂಗ್ರಹದಲ್ಲಿ ಮಾತ್ರ ಪಾಲಿಕೆ ಹಿಂದೆ ಬೀಳುತ್ತಿದೆ. ಜತೆಗೆ ತಾವೇ ಹಾಕಿಕೊಂಡ ಗುರಿ ಮುಟ್ಟುವಲ್ಲಿ ಪಾಲಿಕೆಯ ಅಧಿಕಾರಿಗಳು ಸಂಪೂರ್ಣವಾಗಿ ವಿಫ‌ಲವಾಗಿದ್ದಾರೆ.

Advertisement

2018-19ನೇ ಸಾಲಿನ ಆರ್ಥಿಕ ವರ್ಷ ಪೂರ್ಣಗೊಂಡಿದ್ದು, ಪಾಲಿಕೆಯಿಂದ ಹಾಕಿಕೊಂಡಿದ್ದ 3100 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲು ಪಾಲಿಕೆಗೆ ಸಾಧ್ಯವಾಗಿಲ್ಲ. ಆದರೆ, ಕಳೆದ ಬಾರಿಗಿಂತಲೂ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆ ಈ ವರ್ಷ ಸಂಗ್ರಹವಾಗಿದ್ದು, ಮಾರ್ಚ್‌ 31ರ ವೇಳೆಗೆ ಒಟ್ಟು 2,539 ಕೋಟಿ ರೂ. (ಶೇ.77.25) ತೆರಿಗೆ ಸಂಗ್ರಹವಾಗಿದೆ.

ತೆರಿಗೆ ಆಂದೋಲನ, ವಲಯವಾರು ಸಭೆ ಕರೆದು ಆಸ್ತಿ ತೆರಿಗೆ ಸಂಗ್ರಹಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಈ ಹಿಂದೆಯೇ ಮೇಯರ್‌ ಗಂಗಾಂಬಿಕೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಜತೆಗೆ ಹೆಚ್ಚಿನ ತೆರಿಗೆ ಸಂಗ್ರಹಿಸುವಂತಹ ಅಧಿಕಾರಿಗಳಿಗೆ ಪ್ರಶಸ್ತಿ ನೀಡುವುದಾಗಿಯೂ ತಿಳಿಸಿದ್ದರು.

ಆದರೆ, ವಾರ್ಡ್‌ ಮಟ್ಟದ ಅಧಿಕಾರಿಗಳು ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪಾಲಿಕೆ ಮತ್ತೂಮ್ಮೆ ಹಿಂದೆ ಬೀಳುವಂತಾಗಿದೆ. ಪಾಲಿಕೆಯು ರಾಜ್ಯ ಸರ್ಕಾರದಿಂದ ಬರುವ ಅನುದಾನವನ್ನು ನೆಚ್ಚಿಕೊಂಡು ಬಜೆಟ್‌ ಮಂಡನೆ ಮಾಡುತ್ತಿರುವುದರಿಂದ ಪಾಲಿಕೆಯ ಮೇಲೆ ಆರ್ಥಿಕ ಹೊರೆ ಬೀಳುತ್ತಿದ್ದು,

ಪಾಲಿಕೆಯ ಅಧಿಕಾರಿಗಳು ಸಹ ಆಸ್ತಿ ತೆರಿಗೆ ಗುರಿಯನ್ನು ಅವಾಸ್ತವಿಕವಾಗಿ ನಿಗದಿಪಡಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಅದರಂತೆ 2018-19ನೇ ಸಾಲಿನಲ್ಲಿ ಪಾಲಿಕೆಗೆ 2600 ಕೋಟಿ ರೂ. ಸಂಗ್ರಹವಾಗದಿದ್ದರೂ, 2019-20ನೇ ಸಾಲಿನಲ್ಲಿ 3,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿರುವುದು ಅವಾಸ್ತವಿಕ ಎಂಬುದು ಪ್ರತಿಪಕ್ಷ ಬಿಜೆಪಿಯ ಆರೋಪವಾಗಿದೆ.

Advertisement

ಆಸ್ತಿ ಸಂಖ್ಯೆ ಹೆಚ್ಚಳ: ವರ್ಷದಿಂದ ವರ್ಷಕ್ಕೆ ತೆರಿಗೆ ವ್ಯಾಪ್ತಿಗೆ ಬರುವ ಆಸ್ತಿಗಳ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಪಾಲಿಕೆಯ ವ್ಯಾಪ್ತಿಯಲ್ಲಿ 19 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದಿವೆ.

2017-18 ನೇ ಸಾಲಿನಲ್ಲಿ 1.58 ಲಕ್ಷ ಆಸ್ತಿಗಳು ಹಾಗೂ 2018-19ರಲ್ಲಿ 80 ಸಾವಿರ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದಿದ್ದು, ಅವುಗಳಿಗೆ ತೆರಿಗೆ ನಿಗದಿಪಡಿಸಿ ಸಂಗ್ರಹಕ್ಕೆ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ ತೋರಿರುವುದು ಒಂದೆಡೆಯಾದರೆ, ಕೆಲವೆಡೆಗಳಲ್ಲಿ ಬೃಹತ್‌ ಕಟ್ಟಡ ಮಾಲೀಕರೊಂದಿಗೆ ಶಾಮೀಲಾಗಿ ಪಾಲಿಕೆಗೆ ವಂಚಿಸುವುದು ಕಂಡುಬರುತ್ತಿದೆ.

ಏಪ್ರಿಲ್‌ ನಂತರ ಶೇ.5 ರಿಯಾಯಿತಿ ಅನುಮಾನ: ಏ.1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಏ.1ರಿಂದ 30ರೊಳಗೆ ಆಸ್ತಿಗೆ ತೆರಿಗೆ ಪಾವತಿಸುವವರಿಗೆ ಪಾಲಿಕೆಯಿಂದ ಶೇ.5ರಷ್ಟು ರಿಯಾಯಿತಿ ದೊರೆಯಲಿದೆ.

ಜತೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 25ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಆ ಹಿನ್ನೆಲೆಯಲ್ಲಿ ತೆರಿಗೆ ರಿಯಾಯಿತಿ ಅವಧಿ ವಿಸ್ತರಣೆಯಾಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಶೇ.5ರಷ್ಟು ರಿಯಾಯಿತಿ ಪಡೆಯಬಯಸುವವರು ಏ.30ರೊಳಗೆ ತೆರಿಗೆ ಪಾವತಿಸುವುದು ಉತ್ತಮ.

ಐದು ವರ್ಷಗಳ ತೆರಿಗೆ ಸಂಗ್ರಹ ವಿವರ
ವರ್ಷ ಗುರಿ ಸಂಗ್ರಹ (ಕೋಟಿ ರೂ.ಗಳಲ್ಲಿ )
-2014-15 2,900 1,810
-2015-16 2,456 1,900
-2016-17 2,300 2,156
-2017-18 2,600 2,165
-2018-19 3,100 2,539

Advertisement

Udayavani is now on Telegram. Click here to join our channel and stay updated with the latest news.

Next