Advertisement

ಆಸ್ತಿ ಮಾಲಕತ್ವದ ದಾಖಲೆ: ಒಂದು ಕಾರ್ಡ್‌ –ಲಾಭ ಹಲವು

10:36 AM Nov 14, 2018 | |

ಮಹಾನಗರ : ಇದೇ ಮೊದಲ ಬಾರಿಗೆ ಮಂಗಳೂರು ಸಹಿತ ರಾಜ್ಯದ ಒಟ್ಟು ನಾಲ್ಕು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಕಾರವು ನಗರ ಆಸ್ತಿ ಮಾಲಕತ್ವದ ದಾಖಲೆ (ಅರ್ಬನ್‌ ಪ್ರಾಪರ್ಟಿ ಓನರ್‌ ಶಿಪ್‌ ರೆಕಾರ್ಡ್‌-ಯುಪಿಒಆರ್‌) ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ. ಅಂದರೆ, ನಗರದಲ್ಲಿ ಆಸ್ತಿ ಅಥವಾ ಭೂಮಿ ಹೊಂದಿರುವ ಮಾಲಕರಿಗೆ ತಮ್ಮ ಆಸ್ತಿ ದಾಖಲೆ ವಿವರ ಒಳಗೊಂಡಿರುವ ಪ್ರತ್ಯೇಕವಾದ ಕಾರ್ಡ್‌ ನೀಡುವುದೇ ಪ್ರಾಪರ್ಟಿ ಕಾರ್ಡ್‌ ವ್ಯವಸ್ಥೆ.

Advertisement

ನಗರ ಆಸ್ತಿ ಮಾಲಕತ್ವದ ದಾಖಲೆ (ಯುಪಿಒಆರ್‌) ಯ ಈ ಕಾರ್ಡ್‌ನಲ್ಲಿ ಮಾಲಕತ್ವದ ಭೂಮಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಗಳನ್ನು ಒಳಗೊಂಡಿರುವ ಮಹತ್ವದ ಮತ್ತು ಬಹು ಉಪಯೋಗಿ ದಾಖಲೆ ವಿವರ ಅಡಗಿರುತ್ತದೆ. ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಶ್ರಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ವ್ಯವಸ್ಥೆ ನಗರ ಆಸ್ತಿಗಳ ನಕ್ಷೆ ಮತ್ತು ಹಕ್ಕು ದಾಖಲೆಗಳನ್ನು ಒಳಗೊಂಡಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಿ. 1ರಿಂದ ನಗರ ಅಸ್ತಿಗಳಿಗೆ ಸಂಬಂಧಪಟ್ಟು ಪ್ರಾಪರ್ಟಿ ಕಾರ್ಡ್‌ನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 32 ಕಂದಾಯ ಗ್ರಾಮಗಳಲ್ಲಿ ಆಸ್ತಿ ಮಾಲಕರು ಈ ಪ್ರಾಪರ್ಟಿ ಕಾರ್ಡ್‌ ಹೊಂದುವುದು ಇನ್ನು ಮುಂದೆ ಕಡ್ಡಾಯವಾಗಿರುತ್ತದೆ.

ರಾಜ್ಯದಲ್ಲಿ ಮೈಸೂರು, ಶಿವಮೊಗ್ಗ, ಬಳ್ಳಾರಿ ಹಾಗೂ ಹುಬ್ಬಳ್ಳಿ- ಧಾರವಾಡಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಸರಕಾರ ಅನುಷ್ಠಾನಗೊಳಿಸಿತ್ತು. ಮೈಸೂರಿನಲ್ಲಿ ಈ ಯೋಜನೆ ಸಂಪೂರ್ಣಗೊಂಡಿದ್ದು ಶಿವಮೊಗ್ಗದಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ. ಮಂಗಳೂರಿನಲ್ಲಿ 2012ರ ಎಪ್ರಿಲ್‌ನಲ್ಲಿ ಯೋಜನೆ ಪ್ರಾರಂಭವಾಗಿದ್ದು ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದೊಂದಿಗೆ ಅನುಷ್ಠಾನ ಮಾಡಲಾಗುತ್ತಿದೆ.

ಏನಿದು ಪ್ರಾಪರ್ಟಿ ಕಾರ್ಡ್‌?
ನಗರ ಆಸ್ತಿ ಮಾಲಕತ್ವದ ದಾಖಲೆ ಎಂದು ಕರೆಯಲ್ಪಡುವ ಪ್ರಾಪರ್ಟಿ ಕಾರ್ಡ್‌ ಕಂಪ್ಯೂಟರೀಕೃತ ದಾಖಲೆ ಪತ್ರ. ಆಸ್ತಿಯ ಸ್ವರೂಪ, ಆಸ್ತಿ ದಾಖಲೆಗಳು, ಋಣಭಾರ ಸೇರಿದಂತೆ ಇತರ ಬಾಧ್ಯತೆಗಳು, ಆಸ್ತಿ ನಕ್ಷೆ ವಿವರಗಳನ್ನು ಒಳಗೊಂಡಿರುತ್ತದೆ. ನಗರದ ಹೆಸರು, ವಾರ್ಡ್‌ನ ಹೆಸರು ಹಾಗೂ ವಾರ್ಡ್‌ ಸಂಖ್ಯೆ, ಮಾಲಕನ ಹೆಸರು ಇರುತ್ತದೆ. ಪ್ರತಿಯೊಂದು ಆಸ್ತಿಗೂ ಪ್ರತ್ಯೇಕ ಯುಪಿಒಆರ್‌ ಸಂಖ್ಯೆ ಹಾಗೂ ಬಾರ್‌ಕೋಡ್‌ ಇರುತ್ತದೆ. ಕರ್ನಾಟಕ ಭೂಕಂದಾಯ ನಿಯಮಗಳು 1966ರ ನಿಯಮ (83)(2)ಅಧ್ಯಾಯ 12ರ ಮೇರೆಗೆ ಇದನ್ನು ಆಸ್ತಿ ಮಾಲಕರಿಗೆ ನೀಡಲಾಗುತ್ತಿದೆ.

Advertisement

ಕಾರ್ಡ್‌ ಸಿದ್ಧಪಡಿಸುವ ಪ್ರಕ್ರಿಯೆ
ಆರಂಭದಲ್ಲಿ ಎಲ್ಲ ಆಸ್ತಿ ಮಾಲಕರಿಗೆ ನೋಟಿಸ್‌ ನೀಡಲಾಗುತ್ತಿದೆ. ಆಸ್ತಿಗಳನ್ನು ಗುರುತಿಸುವುದು, ಅಳತೆ ಹಾಗೂ ನಕ್ಷೆ ತಯಾರಿಸುವುದು, ಆಸ್ತಿಗಳ ಛಾಯಾಚಿತ್ರ ತೆಗೆಯುವುದು, ಮಾಲಕತ್ವದ ದಾಖಲೆಗಳ ಸಂಗ್ರಹಣೆ, ಪರಿಶೀಲನೆ, ಸ್ಕ್ಯಾನಿಂಗ್ ಮತ್ತು ಅಂಕಿ-ಅಂಶಗಳ ದಾಖಲೀಕರಣ ಮಾಡಿದ ಬಳಿಕ ಇಲಾಖೆಯಿಂದ ಮಾಲಕತ್ವದ ತನಿಖಾ ಪ್ರಕ್ರಿಯೆ ನಡೆದು ಕರಡು ಪ್ರಾಪರ್ಟಿ ಕಾರ್ಡ್‌ ತಯಾರಿಸಿ ವಿತರಿಸಲಾಗುತ್ತಿದೆ. ಮಾಲಕರು ಅದನ್ನು ಪರಿಶೀಲಿಸಿ ಏನಾದರೂ ತಿದ್ದುಪಡಿಗಳಿದ್ದರೆ 30 ದಿನಗಳೊಳಗೆ ದಾಖಲೆಗಳನ್ನು ಒದಗಿಸಿ ಸರಿಪಡಿಸಿಕೊಳ್ಳಬೇಕು. ಒಂದು ವೇಳೆ ಆಸ್ತಿ ಕುರಿತು ಏನಾದರೂ ತಕರಾರು ಇದ್ದಲ್ಲಿ ಅವುಗಳ ವಿಚಾರಣೆ ನಡೆಯುತ್ತದೆ. ಓರ್ವ ಅಧೀಕ್ಷಕ, 3 ಮಂದಿ ತಹಶೀಲ್ದಾರರು ಸೇರಿ ಒಟ್ಟು 4 ಮಂದಿ ವಿಚಾರಣಾಧಿಕಾರಿಗಳು ಈ ವಿಚಾರಣೆ ತಂಡದಲ್ಲಿ ಇರುತ್ತಾರೆ. ಆಸ್ತಿ ವಿವರ ದಾಖಲಿಸಿಕೊಳ್ಳುವಾಗ, ಮಾಲಕರ 10 ಬೆರಳುಗಳ ಬಯೋಮೆಟ್ರಿಕ್‌ ಫಿಂಗರ್ ಪ್ರಿಂಟ್‌ ಸಂಗ್ರಹಿಸಲಾಗುತ್ತದೆ. 

ಈ ರೀತಿ ಆಸ್ತಿ ದಾಖಲೆ ಜತೆಗೆ ಅದರ ಮಾಲಕರ ಪ್ರತಿಯೊಂದು ವಿವರಗಳನ್ನು ಕೂಡ ದಾಖಲಿಸಿಕೊಂಡು ಸರಿಯಾದ ರೀತಿಯಲ್ಲಿ ಈ ಕಾರ್ಡ್‌ ಸಿದ್ಧಗೊಳ್ಳುತ್ತದೆ. ಎಲ್ಲ ಹಂತ ಪೂರ್ಣಗೊಂಡ ಅನಂತರ ಆಸ್ತಿ ಮಾಲಕರಿಂದ ನಿಗದಿತ ಶುಲ್ಕ ಪಡೆದು ಪ್ರಾಪರ್ಟಿ ಕಾರ್ಡ್‌ ವಿತರಿಸಲಾಗುತ್ತದೆ. ಈ ಕಾರ್ಡ್‌ ಮೇಲೆ ಆಸ್ತಿಯ ಸ್ವರೂಪ, ಆಸ್ತಿ ದಾಖಲೆಗಳು, ಋಣಭಾರ, ಇತರ ಬಾಧ್ಯತೆಗಳು, ಆಸ್ತಿ ನಕ್ಷೆ, ವಿಶೇಷ ಸಂಖ್ಯೆ ಹೊಂದಿರುತ್ತದೆ.

ಭೂವ್ಯವಹಾರ ಸುಲಭ
ಅಳತೆ, ಹಕ್ಕು ಮತ್ತು ಗಡಿಗಳನ್ನು ಒಳಗೊಂಡಂತೆ ನಕ್ಷೆ ತಯಾರಿಸಲಾಗುತ್ತದೆ. ಮೂಲ ದಾಖಲೆಗಳ ಪ್ರಕಾರವೇ ಮಾಹಿತಿಗಳು ದಾಖಲಾಗುತ್ತವೆ. ಭೂಮಿ ಹಾಗೂ ಕಾವೇರಿ ಆನ್‌ಲೈನ್‌ ವ್ಯವಸ್ಥೆಗೂ ಇದನ್ನು ಲಿಂಕ್‌ ಮಾಡಲಾಗುತ್ತಿದೆ. ಆಸ್ತಿದಾರರು ಸರಿಯಾದ ನಕ್ಷೆಯೊಂದಿಗೆ ಶಾಸನಬದ್ಧ ಆಸ್ತಿ ದಾಖಲೆಗಳನ್ನು ಪಡೆಯಬಹುದಾಗಿದೆ. ಆಸ್ತಿ ಹಕ್ಕುಗಳ ಸುಗಮ ವರ್ಗಾವಣೆ ಸಾಧ್ಯವಾಗುತ್ತದೆ. ಮಾರಾಟದ ಬಳಿಕ ಹಕ್ಕು ಬದಲಾವಣೆಯನ್ನು ತಂತ್ರಾಂಶದ ಮೂಲಕ ಶೀಘ್ರಗತಿಯಲ್ಲಿ ಕಾರ್ಯಗತಗೊಳ್ಳುತ್ತದೆ. ಖರೀದಿಸುವ ಆಸ್ತಿಯ ಋಣಭಾರ, ಬಾಧ್ಯತೆಗಳ ಬಗ್ಗೆ ಖರೀದಿದಾರರು ಈ ಕಾರ್ಡ್‌ ಮೂಲಕ ಸ್ವಷ್ಟವಾಗಿ ತಿಳಿದುಕೊಳ್ಳಬಹುದಾಗಿದೆ.

ಅಕ್ರಮಗಳಿಗೆ ತಡೆ
ಪ್ರಾಪರ್ಟಿ ಕಾರ್ಡ್‌ ಪ್ರತಿ ಆಸ್ತಿಯ ನಿಖರವಾದ ನಕ್ಷೆ, ಕ್ರಮಬದ್ಧವಾದ ಹಕ್ಕು ದಾಖಲೆಗಳನ್ನು ಹೊಂದಿದ್ದು ಯುಪಿಒಆರ್‌ ಜಾಲದಲ್ಲಿ (ಅರ್ಬನ್‌ ಪಾಪರ್ಟಿ ಡಾಟಾಬೇಸ್‌) ನೋಂದಣಿ ಆಗಿರುತ್ತವೆ. ಆಸ್ತಿ ನಿರ್ವಹಣೆ ವ್ಯವಸ್ಥೆಯು ನೋಂದಣಿ ಇಲಾಖೆ, ಕಾನೂನು ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ತ್ವರಿತ ಸಂಪರ್ಕ ಕಲ್ಪಿಸುತ್ತದೆ. ಆದುದರಿಂದ ಆಸ್ತಿಗಳ ಮಾರಾಟದ ಸಂದರ್ಭದಲ್ಲಿ ಪರಸ್ಪರರು ಮೋಸಹೋಗುವುದು ತಪ್ಪುತ್ತದೆ. ಬೋಗಸ್‌ ದಾಖಲೆ ಪತ್ರ ಗಳನ್ನು ನೀಡಿ ಆಸ್ತಿ ಮಾರಾಟ, ನೋಂದಣಿ ಸಾಧ್ಯವಾಗುವುದಿಲ್ಲ. ಅಕ್ರಮ ನೋಂದಣಿ ಕಾರ್ಯವನ್ನು ನಿಯಂತ್ರಿಸಬಹುದಾಗಿದೆ. ಬಯೋಮೆಟ್ರಿಕ್ಸ್‌ ಸಂದರ್ಭ ಆಸ್ತಿಯ ಮಾಲಕರು ಮಾತ್ರ ಫಿಂಗರ್ ಪ್ರಿಂಟ್‌ ನೀಡಬೇಕಾಗಿರುತ್ತದೆ. ಆದುದರಿಂದ ಪ್ರಾಪರ್ಟಿ ಆಸ್ತಿ ಮಾರಾಟ, ಹಕ್ಕು ಬದಲಾವಣೆ ಸಂದರ್ಭ ಅಕ್ರಮಗಳನ್ನು ತಡೆಯಬಹುದು.

ಪ್ರಕ್ರಿಯೆಗಳಿಗೆ ವೇಗ
ಅರ್ಬನ್‌ ಪ್ರಾಪರ್ಟಿ ಓನರ್‌ಶಿಪ್‌ ರೆಕಾರ್ಡ್‌ (ನಗರ ಆಸ್ತಿ ಮಾಲಕತ್ವದ ದಾಖಲೆ) ಸಂಪೂರ್ಣ ಆಸ್ತಿ ದಾಖಲೆ. ಇದನ್ನು ಭೂಮಿ, ಕಾವೇರಿಗೂ ಲಿಂಕ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಾಪರ್ಟಿ ಕಾರ್ಡ್‌ ನೀಡಿಕೆ ಪ್ರಕ್ರಿಯೆಗಳಿಗೆ ವೇಗ ನೀಡಲಾಗಿದೆ.
 - ಬಿ.ಕೆ.ಕುಸುಮಾಧರ್‌, ಪ್ರಾಪರ್ಟಿ ಕಾರ್ಡ್‌ ಯೋಜನಾಧಿಕಾರಿ 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next