Advertisement
ಪ್ರಸ್ತುತ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವನ್ನು ರಾಜ್ಯ ಸರಕಾರ ಮುಂದಿನ ಆದೇಶದವರೆಗೆ ಮುಂದೂಡಿಕೆ ಮಾಡಿದೆ. ಆದರೆ ಮುಂದಕ್ಕೆ ಇದು ಕಡ್ಡಾಯವಾಗಲಿದೆಯೇ ಅಥವಾ ಕೈಬಿಡಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಕೂಡ ಸ್ಪಷ್ಟ ನಿಲುವು ಸರಕಾರದ ಕಡೆಯಿಂದ ವ್ಯಕ್ತವಾಗದಿರುವ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಇನ್ನೂ ಗೊಂದಲದಲ್ಲಿದ್ದಾರೆ. ಪ್ರಸ್ತುತ ಪ್ರಾಪರ್ಟಿ ಕಾರ್ಡ್ ಮಾಡುವ ಪ್ರಕ್ರಿಯೆ ಮುಂದುವರಿದಿದೆಯಾದರೂ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸಮಸ್ಯೆಗಳ ಗೂಡಾಗಿದೆ.
ಸರಕಾರದ ನಿರಾಸಕ್ತಿ ಹಾಗೂ ಕಾರ್ಯ ನಿರ್ವಹಣೆಯ ಮೇಲಿನ ನಿಗಾ ಕೊರತೆಯಿಂದಾಗಿ ಇಡೀ ಪ್ರಾಪರ್ಟಿ ಕಾರ್ಡ್ ವ್ಯವಸ್ಥೆಯ ಅನುಷ್ಠಾನದಲ್ಲಿ ಬಹಳಷ್ಟು ಅವ್ಯವಸ್ಥೆಗಳು ತಲೆದೋರಿವೆ. ಪ್ರಾಪರ್ಟಿ ಕಾರ್ಡ್ ವ್ಯಾಪ್ತಿಗೆ 36 ಗ್ರಾಮಗಳು ಬರುತ್ತಿದ್ದು 30 ಸೆಕ್ಟರ್‌ಗಳಿವೆ. ಅಳತೆ ಹಾಗೂ ಪರಿಶೀಲನೆಗೆ ಸುಮಾರು 30 ಸರ್ವೇಯರ್‌ಗಳು ಅವಶ್ಯವಿದ್ದು ಪ್ರಸ್ತುತ ಇಲ್ಲಿರುವುದು 10 ಸರ್ವೇಯರ್‌ಗಳು. ಸುಮಾರು 40 ಕಂಪ್ಯೂಟರ್‌ಗಳು ಅವಶ್ಯವಿದ್ದು, 20 ಕಂಪ್ಯೂಟರ್‌ಗಳು ಮಾತ್ರ ಇವೆ. ಈ ಹಿಂದೆ ಇಲ್ಲಿದ್ದ ಸಾರ್ವಜನಿಕ ಮಾಹಿತಿ ಕೇಂದ್ರ ಇದೀಗ ಮಾಯ ವಾಗಿದ್ದು, ಸಾರ್ವಜನಿಕರು ಕಾರ್ಡ್ ಬಗ್ಗೆ ಮಾಹಿತಿ, ವಿಚಾರಣೆ ಬಗ್ಗೆ ಮೇಜುಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಮೂಲ ಸೌಲಭ್ಯ ಕೊರತೆ
ಕಚೇರಿಗೆ ದೂರವಾಣಿ ಸಂಪರ್ಕ ಇಲ್ಲದ ಕಾರಣ ಸಾರ್ವಜನಿಕರು ಸಿಬಂದಿ ವೈಯುಕ್ತಿಕ ಮೊಬೈಲ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾದ ಸ್ಥಿತಿ ಇದೆ. ಇದಲ್ಲದೆ ಸಾರ್ವಜನಿಕರಿಂದ ಸಂಗ್ರಹಿಸಿದ ದಾಖಲೆ ಪತ್ರಗಳ ಸಂಗ್ರಹ ವ್ಯವಸ್ಥೆ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಪ್ರಸ್ತುತ ಇರುವ ದಾಖಲೆ ಸಂಗ್ರಹ ಕೊಠಡಿಯಲ್ಲಿ ದಾಖಲೆ ಪತ್ರಗಳನ್ನು ಡಂಪ್ ಮಾಡಲಾಗಿದೆ. ವ್ಯವಸ್ಥಿತವಾಗಿ ಸೆಕ್ಟರ್‌ವಾರು ಜೋಡಿಸಿದ ಕಾರಣ ಪ್ರಾಪರ್ಟಿ ಕಾರ್ಡ್ ತಯಾರಿ ಸಂದರ್ಭದಲ್ಲಿ ಈ ದಾಖಲೆ ಪತ್ರಗಳನ್ನು ಹುಡುಕುವುದೇ ದುಸ್ತರವಾಗಿದ್ದು ಸಾರ್ವಜನಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇನ್ನೊಂದೆಡೆ ಸರ್ವರ್ ಸಮಸ್ಯೆಯಿಂದಾಗಿ ಪ್ರಾಪರ್ಟಿ ಕಾರ್ಡ್‌ಗಳ ಸಿದ್ಧಪಡಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ನಡುವೆ ಕೆಲವು ಮಧ್ಯವರ್ತಿಗಳು ಹಾವಳಿ ಯಿಂದಾಗಿ ನೇರವಾಗಿ ಕಚೇರಿಯಲ್ಲಿ ಕಾರ್ಡ್ ಮಾಡಿಸುವರು ಸಮಸ್ಯೆ ಎದುರಿಸಬೇಕಾಗಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ.
Related Articles
Advertisement
ದಿನವೊಂದಕ್ಕೆ ಸರಾಸರಿ 8ರಿಂದ 10 ಅರ್ಜಿಗಳು ಮಾತ್ರ ಬರುತ್ತಿವೆ. ಕಾರ್ಡ್ ಕಡ್ಡಾಯ ನಿಯಮದ ಅನುಷ್ಠಾನದಲ್ಲಿದ್ದ ಅವಧಿಯಲ್ಲಿ ದಿನವೊಂದಕ್ಕೆ ಸುಮಾರು 250 ಪ್ರಾಪರ್ಟಿ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದರೆ ಇದೀಗ ಇದರ ಸಂಖ್ಯೆ ದಿನೊಂದಕ್ಕೆ ಸರಾಸರಿ 25ಕ್ಕೆ ಕುಸಿದಿದೆ. ಮಂಗಳೂರು ನಗರದಲ್ಲಿ ಆಸ್ತಿಗಳ ಸಂಖ್ಯೆ 2 ಲಕ್ಷ ಇದ್ದು ಪ್ರಸ್ತುತ 67,000 ಕರಡು ಪ್ರಾಪರ್ಟಿಗಳನ್ನು ಸಿದ್ಧಪಡಿಸಲಾಗಿದ್ದು 50,000 ಕಾರ್ಡ್‌ಗಳು ಅಂತಿಮಗೊಂಡಿವೆ.
ಗೊಂದಲದ ಸ್ಥಿತಿಮಂಗಳೂರು ನಗರದಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವಾದ ಬಳಿಕ ಒಟ್ಟು ಇದು 4 ಬಾರಿ ಜಾರಿ ಮತ್ತು ಮುಂದೂಡಿಕೆ ಕಂಡಿದೆ. ಸರಕಾರ ಕಡ್ಡಾಯ ಮಾಡಿದ ಸಂದರ್ಭದಲ್ಲೆಲ್ಲ ಪ್ರಾಪರ್ಟಿ ಕಾರ್ಡ್ ಕಚೇರಿಯಲ್ಲಿ ಭಾರೀ ಜನಸಂದಣಿ ಕಂಡು ಬಂದಿತ್ತು. ಪರಿಣಾಮ ಮೂಲಸೌಕರ್ಯಗಳು ಕೊರತೆ ತಲೆದೋರಿ ಪ್ರಕ್ರಿಯೆಲ್ಲಿ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಗಿ ಬಂದಿತ್ತು. ಇದೇ ಕಾರಣಕ್ಕೆ ನಗರದಲ್ಲಿ ಆಸ್ತಿ ನೋಂದಣಿ ಸಂದರ್ಭದಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಗೊಳಿಸಿರುವುದಕ್ಕೆ ಮುಂದಿನ ಆದೇಶದವರೆಗೆ ವಿನಾಯತಿ ನೀಡಲಾಗಿದೆ ಎಂದು 2019 ರ ಅ. 11ಕ್ಕೆ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿಯವರು (ಭೂಮಿ, ಯುಪಿಓಆರ್ ಹಾಗೂ ಮುಜರಾಯಿ ಇಲಾಖಾ) ಎಂಬ ಆದೇಶವನ್ನು ಹೊರಡಿಸಿದ್ದರು. ಮುಂದೂಡಿಕೆ ಆದೇಶ ಹೊರಬಿದ್ದು ಸುಮಾರು ಒಂದೂವರೆ ವರ್ಷ ಕಳೆದಿದ್ದು ಮುಂದಿನ ಕ್ರಮಗಳ ಬಗ್ಗೆ ಸರಕಾರದ ಕಡೆಯಿಂದ ಯಾವುದೇ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಪ್ರಕ್ರಿಯೆಗೆ ವೇಗ ನೀಡಲಾಗುವುದು
ಸರಕಾರದ ವಿವಿಧ ಕಾರ್ಯಕ್ರಮಗಳು ಚಾಲನೆಯಲ್ಲಿರುವುದರಿಂದ ಸರ್ವೇಯರ್‌ಗಳು ಅವುಗಳಿಗೆ ನಿಯೋಜನೆಗೊಂಡಿದ್ದಾರೆ. ಅದುದರಿಂದ ಪ್ರಾಪರ್ಟಿ ಕಾರ್ಡ್ ಸರ್ವೇಗೆ ಸರ್ವೇಯರ್‌ಗಳ ಲಭ್ಯತೆ ಕಡಿಮೆ ಇದೆ. ಪ್ರಾಪರ್ಟಿ ಕಾರ್ಡ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಸುಮಾರು ಶೇ. 50ರಷ್ಟು ಕರಡು ಕಾರ್ಡ್‌ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರಕ್ರಿಯೆಗೆ ವೇಗ ನೀಡಿ ಜನರಿಗೆ ವ್ಯವಸ್ಥಿತವಾಗಿ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ.
– ನಿರಂಜನ್, ಭೂಮಾಪನ ಇಲಾಖೆಯ ಉಪನಿರ್ದೇಶಕರು