Advertisement

ಮಳೆ ಕೊಯ್ಲು ಸಮರ್ಪಕ ಬಳಕೆ

09:40 PM Jul 31, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವೃದ್ಧಿಸುವ ದಿಸೆಯಲ್ಲಿ ಜಿಲ್ಲಾದ್ಯಂತ ಮಳೆ ಕೊಯ್ಲು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಜಿಲ್ಲೆಯ ಸರ್ಕಾರಿ ಕಚೇರಿ ಕಟ್ಟಡಗಳಿಗೆ ಮಳೆ ಕೊಯ್ಲು ಕಡ್ಡಾಯಗೊಳಿಸಲಾಗಿದೆ ಎಂದು ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ ತಿಳಿಸಿದರು.

Advertisement

100ಕ್ಕೂ ಹೆಚ್ಚು ಕಲ್ಯಾಣಿ ಸ್ವಚ್ಛತೆ: ಜಿಲ್ಲೆಯ ತಮ್ಮ ಸ್ವಕ್ಷೇತ್ರ ಹೊಸೂರಿನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಕಂದಾಯ ಇಲಾಖೆ ವತಿಯಿಂದ ಸ್ಥಳೀಯ ಗ್ರಾಪಂ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪುರಾತನ ಕಲ್ಯಾಣಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾದ್ಯಂತ ಇದುವರೆಗೂ 100 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸಲಾಗಿದ್ದು, 60 ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತಾ ಕಾರ್ಯವನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಪೂರ್ವಿಕರು ತಮ್ಮ ದೂರದೃಷ್ಟಿ ಚಿಂತನೆಯಿಂದ ಮಳೆ ನೀರು ಸದ್ಬಳಕೆ ಮಾಡಿಕೊಳ್ಳಲು ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಆ ಮೂಲಕ ದನಕರುಗಳಿಗೆ ಅಗತ್ಯ ಕುಡಿಯುವ ನೀರು, ಬಟ್ಟೆ ತೊಳೆಯಲು ಜನ ಕಲ್ಯಾಣಿಗಳಲ್ಲಿ ನೀರು ಬಳಕೆ ಮಾಡುತ್ತಿದ್ದರು. ಆದರೆ ಮನುಷ್ಯನ ಜೀವನ ಶೈಲಿ ಬದಲಾದಂತೆ ಕಲ್ಯಾಣಿಗಳು ಸಹ ನಿರ್ವಹಣೆ ಇಲ್ಲದೇ ಕಣ್ಮರೆಯಾಗಿವೆ ಎಂದರು.

ಪುನಶ್ಚೇತನ ವೇಗವಾಗಿ ನಡೆಯಲಿ: ಪ್ರತಿ ವರ್ಷ ಬೀಳುವ ಮಳೆ ನೀರು ಕೂಡ ಸಂಗ್ರಹವಾಗದೇ ಪೋಲಾಗುತ್ತಿದೆ. ಜಲಮೂಲಗಳನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಜಿಲ್ಲೆಯ ಅಂತರ್ಜಲ ವೃದ್ಧಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪೂರ್ವಜರು ಸ್ಥಾಪಿಸಿರುವ ಕೆರೆ, ಕುಂಟೆ ಹಾಗೂ ಕಲ್ಯಾಣಿಗಳ ಪುನಶ್ಚೇತನ ಕಾರ್ಯ ಜಿಲ್ಲೆಯಲ್ಲಿ ವೇಗವಾಗಿ ನಡೆಯಬೇಕಿದೆ.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಜಿಲ್ಲೆಯಲ್ಲಿ ಗ್ರಾಪಂಗಳಲ್ಲಿ ದಶಕಗಳಿಂದ ಅಭಿವೃದ್ಧಿಗೊಳ್ಳದೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲ್ಯಾಣಿಗಳನ್ನು ಅಭಿಯಾನದ ಮೂಲಕ ಪುನಶ್ಚೇತನಕ್ಕೆ ಮುಂದಾಗಿದ್ದು, ಈಗಾಗಲೇ 100 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರಿಂದ ಜಲ್ಲೆಯ ಅಂತರ್ಜಲ ಮಟ್ಟ ಸಾಕಷ್ಟು ವೃದ್ಧಿಯಾಗಲಿದ್ದು, ಈಗಾಗಲೇ ಪುನಶ್ಚೇತನಗೊಂಡಿರುವ ಕಲ್ಯಾಣಿಗಳಲ್ಲಿ ಸಾಕಷ್ಟು ಮಳೆ ನೀರು ಸಂಗ್ರಹವಾಗಿ ಸುತ್ತಮುತ್ತಲಿನ ರೈತರ ಕೊಳವೆ ಬಾವಿಗಳು ಕಾರ್ಯಾರಂಭವಾಗುತ್ತಿವೆ ಎಂದರು.

Advertisement

ಮಲ್ಟಿ ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಒತ್ತು: ನರೇಗಾ ಯೋಜನೆ ಜಿಲ್ಲಾ ಸಹಾಯಕ ನಿರ್ದೇಶಕ ಮುನಿರಾಜು ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗಾಗಿ ವಿಶೇಷ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ರೈತರ ಹೊಲಗಳಲ್ಲಿ ಬದು ನಿರ್ಮಾಣ, ಮಲ್ಟಿ ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ. ಜಲಮರುಪೂರಣ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲಾಡಳಿತ ಸರ್ಕಾರದಿಂದ ಯಾವುದೇ ರೀತಿ ಅನುದಾನ ಪಡೆಯದೇ ಗ್ರಾಪಂ ನೌಕರರ ಸಹಯೋಗದೊಂದಿಗೆ ಗ್ರಾಮಗಳಲ್ಲಿ ಪಾಳು ಬಿದ್ದಿರುವ ಕಲ್ಯಾಣಿಗಳನ್ನು ಪುನಶ್ಚೇನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಕಲ್ಯಾಣಿ ಸ್ವಚ್ಛತೆಗೆ ಜಿಪಂ ಅಧ್ಯಕ್ಷರ ಸಾಥ್‌: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಪಾಳು ಬಿದ್ದಿದ್ದ ಪುರಾತನ ಕಲ್ಯಾಣಿ ಸ್ವಚ್ಛತಾ ಕಾರ್ಯವನ್ನು ಸ್ಥಳೀಯ ಗ್ರಾಪಂ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಲ್ಲಾಸದಿಂದ ಭಾಗವಹಿಸಿದ್ದರು. ಜಿಪಂ ಅಧ್ಯಕ್ಷ ಹೆಚ್‌.ವಿ.ಮಂಜುನಾಥ ಸಹ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಕಲ್ಯಾಣಿ ಸ್ವಚ್ಛಗೊಳಿಸಿದರು. ಬೆಳಗ್ಗ 8 ಗಂಟೆಗೆ ಆರಂಭಗೊಂಡ ಅಭಿಯಾನ ಮಧ್ಯಾಹ್ನದವರೆಗೂ ನಡೆಯಿತು.

ಕಲ್ಯಾಣಿ, ಕೆರೆ, ಕುಂಟೆ ಮತ್ತಿತರ ಜಲಮೂಲಗಳನ್ನು ಸಂರಕ್ಷಿಸದೇ ಜಿಲ್ಲೆಯ ಅಂತರ್ಜಲ ವೃದ್ಧಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಅಂತರ್ಜಲ ಕುಸಿತಕ್ಕೆ ಮಳೆ ನೀರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳದಿರುವುದು ಕೂಡ ಮುಖ್ಯ ಕಾರಣ. ಹೀಗಾಗಿ ಈ ವರ್ಷ ಜಿಲ್ಲೆಯಲ್ಲಿ ಮಳೆ ಕೊಯ್ಲು ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಪಂ ನಿರ್ಧರಿಸಿದ್ದು, ಸರ್ಕಾರಿ ಕಟ್ಟಡಗಳಿಗೆ ಮಳೆ ಕೊಯ್ಲು ಕಡ್ಡಾಯಗೊಳಿಸಿದೆ.
-ಎಚ್‌.ವಿ.ಮಂಜುನಾಥ, ಜಿಪಂ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next