ಬೆಂಗಳೂರು: ವಿವಿಧ ನಿಗಮ ಮತ್ತು ಮಂಡಳಿಗಳಿಗೆ ನ.18 ಮತ್ತು 19ರಂದು ನಡೆಯಲಿರುವ ನೇರ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪತ್ರ ಬರೆದು ಮನವಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದ್ದಾರೆ.
ಅಭ್ಯರ್ಥಿಗಳ ಸೂಕ್ತ ತಪಾಸಣೆಗಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲೂ 25 ವಿದ್ಯಾರ್ಥಿಗಳ ಗುಂಪಿಗೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಮೆಟಲ್ ಡಿಟೆಕ್ಟರ್ ಮತ್ತು ಪೊಲೀಸ್ ಇಲಾಖೆಗೆ ಸೂಕ್ತವೆನಿಸುವ ಇತರೆ ಉಪಕರಣಗಳನ್ನು ಬಳಸಿ ತಪಾಸಣೆಗೆ ಒಳಪಡಿಸಬೇಕು. ಪರೀಕ್ಷೆ ನಡೆಯುವ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಯಾವುದೇ ಕಾರು, ಮಿನಿ ಬಸ್, ವಾಹನಗಳನ್ನು ನಿಲ್ಲಿಸದಂತೆ ನಿರ್ಬಂಧ ಹಾಕಬೇಕು. ಪರೀಕ್ಷಾ ಕೇಂದ್ರದ ಸುತ್ತ ಇರುವ ಹೋಟೆಲ್, ಪೇಯಿಂಗ್ ಗೆಸ್ಟ್, ವಸತಿ ನಿಲಯಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವ ವ್ಯಕ್ತಿಗಳನ್ನು ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ಕಂಡು ಬಂದಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಕಮಿಷನರ್ /ಪೊಲೀಸ್ ವರಿಷ್ಠಾಧಿಕಾರಿಯವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆಯಿರಿ: ಪರೀಕ್ಷೆಗಳಿಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈಗಾಗಲೇ ಲಿಂಕ್ ನೀಡಲಾಗಿದೆ. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವ ಕಾರಣ ಒಂದಕ್ಕಿಂತ ಹೆಚ್ಚು ಪ್ರವೇಶ ಪತ್ರಗಳು ಬಿಡುಗಡೆಯಾಗಿರುತ್ತದೆ. ಇಂತಹ ಅಭ್ಯರ್ಥಿಗಳು ಮಾತ್ರ ಯಾವುದಾದರು ಒಂದು ಪರೀûಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು. ಪರೀಕ್ಷಾ ದಿನದಂದು ಎರಡೂ ಪ್ರವೇಶ ಪತ್ರಗಳನ್ನು ಕೊಠಡಿಯ ಮೇಲ್ವಿಚಾರಕರಿಗೆ ಸಲ್ಲಿಸಬೇಕು ಎಂದು ಕೆಇಎಯ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಲಿಪಿಕಾರರ ಸೇವೆ ಪಡೆಯಲು ನಿಯಮ: ದೃಷ್ಟಿಮಾಂದ್ಯತೆ, ಚಲನವಲನ ವೈಕಲ್ಯ, ಮಿದುಳಿನ ಪಾರ್ಶ್ವವಾಯು, ಅಂಗ ಊನತೆ ಮತ್ತು ಇತರೆ ವರ್ಗಗಳ ಎದ್ದು ಕಾಣುವಂತಹ ಅಂಗಊನತೆ ಹೊಂದಿರುವ ಅಭ್ಯರ್ಥಿಗಳಿಗೆ ಲಿಪಿಕಾರರ ಸೌಲಭ್ಯಗಳನ್ನು ಹೊಂದಲು ಅರ್ಹತೆ ಇರುತ್ತದೆ. ಇಂತಹ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸ್ವತಃ ಲಿಪಿಕಾರರನ್ನು ಕರೆತರಬಹುದು ಮತ್ತು ಅಂತಹ ಲಿಪಿಕಾರರ ವಿದ್ಯಾರ್ಹತೆಯು ಪದವಿಗಿಂತ ಕಡಿಮೆ ಇರಬೇಕು. ಅಸಮರ್ಥತೆ ಹೊಂದಿರುವ ಬಗ್ಗೆ ಪ್ರಮಾಣ ಪತ್ರವನ್ನು ಹಾಗೂ ತನ್ನದೇ ಆದ ಲಿಪಿಕಾರರ ಸೇವೆ ಪಡೆಯಲು ಮುಚ್ಚಳಿಕೆ ಪತ್ರವನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.