Advertisement

ಅನೈತಿಕ ಸಂಬಂಧ ಸಾಬೀತಿಗೆ 3ನೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಸಲ್ಲ: ಹೈಕೋರ್ಟ್‌

12:49 PM Dec 15, 2022 | Team Udayavani |

ಬೆಂಗಳೂರು: ಅನೈತಿಕ ಸಂಬಂಧದ ಅನುಮಾನ ಸಾಬೀತುಪಡಿಸಲು ಮೂರನೇ ವ್ಯಕ್ತಿಯ ಮೊಬೈಲ್‌ ಟವರ್‌ ಹಾಗೂ ಕರೆಗಳ ಮಾಹಿತಿ ಕೇಳುವ ಮೂಲಕ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದು ಆದೇಶಿಸಿದೆ. ಅನೈತಿಕ ಸಂಬಂಧ ಆರೋಪ ಪ್ರಕರಣದಲ್ಲಿ ತನ್ನ ಮೊಬೈಲ್‌ ಕರೆಗಳ ಮಾಹಿತಿ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ 3ನೇ ವ್ಯಕ್ತಿ (ಪ್ರಿಯಕರ) ಸಲ್ಲಿಸಿದ್ದ ಅರ್ಜಿ ಯನ್ನು ಮಾನ್ಯ ಮಾಡಿದ ನ್ಯಾಯ ಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

Advertisement

“ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನ ಸಾಬೀತಿಗೆ 3ನೇ ವ್ಯಕ್ತಿಯ ಮೊಬೈಲ್‌ ಟವರ್‌ ಹಾಗೂ ಕರೆಗಳ ಮಾಹಿತಿ ಕೇಳುವ ಮೂಲಕ ಖಾಸಗಿತನ ಧಕ್ಕೆ ತರುವುದು ಸರಿಯಲ್ಲ. ಕೌಟುಂಬಿಕ ವಿಚಾರಗಳಲ್ಲಿ 3ನೇ ವ್ಯಕ್ತಿಯ ವಿವರ ನೀಡುವಂತೆ ಆದೇಶಿಸುವ ಮೂಲಕ ಮೂಲಭೂತ ಹಕ್ಕು ಘಾಸಿಗೊಳಿಸಲಾಗದು’ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಮೊಬೈಲ್‌ ಟವರ್‌ ಮಾಹಿತಿ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.

ಈ ಪ್ರಕರಣದಲ್ಲಿ ಅರ್ಜಿದಾರರ ಮೊಬೈಲ್‌ ಟವರ್‌ ಮತ್ತು ಕರೆಗಳ ವಿವರಗಳನ್ನು ನೀಡುವಂತೆ ಆದೇಶಿಸಲಾಗಿದೆ. ಇದೇ ಮೊದಲ ಬಾರಿಗೆ ಅರ್ಜಿದಾರರನ್ನು ಪ್ರಕರಣದಲ್ಲಿ ಎಳೆಯಲಾಗಿದೆ, ಅದೂ ಅನೈತಿಕ ಸಂಬಂಧದ ಕಾರಣಕ್ಕೆ. ಈ ವಿಚಾರಣೆಯಲ್ಲಿ ಆತ ಮೂರನೇ ವ್ಯಕ್ತಿ. ಪತಿ ತನ್ನ ಪತ್ನಿ, ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆನ್ನುವ ಅನುಮಾನವನ್ನು ಸಾಬೀತುಪಡಿಸುವ ಸಲುವಾಗಿ ಆತನ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ, ಅದಕ್ಕೆ ಕಾನೂನಿನ ಮನ್ನಣೆ ನೀಡಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ
ಪತಿ ಪತ್ನಿ ನಡುವೆ 2018ರಲ್ಲಿ ಕೌಟುಂಬಿಕ ವ್ಯಾಜ್ಯವಿದ್ದು, ಇಬ್ಬರು ಪರಸ್ಪರ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದು, ಅದನ್ನು ಸಾಬೀತುಪಡಿಸಲು ಆತನ ಮೊಬೈಲ್‌ ಕರೆ ಮತ್ತು ಟವರ್‌ ವಿವರಗಳನ್ನು ನೀಡುವಂತೆ ಮೊಬೈಲ್‌ ಕಂಪನಿಗೆ ನಿರ್ದೇಶನ ನೀಡುವಂತೆ ಪತಿ ಅರ್ಜಿ ಹೂಡಿದ್ದರು. ಅದನ್ನು ಮಾನ್ಯ ಮಾಡಿದ್ದ ಕೌಟುಂಬಿಕ ನ್ಯಾಯಾಲಯ 2019ರ ಫೆ.23ರಂದು ಮೂರನೇ ವ್ಯಕ್ತಿಯ ಟವರ್‌ ಮಾಹಿತಿ ನೀಡುವಂತೆ ಮೊಬೈಲ್‌ ಕಂಪನಿಗೆ ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದ ಮೂರನೇ ವ್ಯಕ್ತಿ, ವಿಚ್ಚೇಧನ ಪ್ರಕರಣದಲ್ಲಿ ತಾನು ಪ್ರತಿವಾದಿಯಲ್ಲದಿದ್ದರೂ ಕೋರ್ಟ್‌ ಆದೇಶಿಸಿದೆ. ತನ್ನ ಮೊಬೈಲ್‌ ಟವರ್‌ ಮಾಹಿತಿಯಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next