Advertisement

ಶಿಕ್ಷಣದ ಖಾಸಗೀಕರಣಕ್ಕೆ ಉತ್ತೇಜನ

12:01 AM Jul 06, 2019 | Lakshmi GovindaRaj |

ಕೇಂದ್ರ ಸರ್ಕಾರದ ಆಯವ್ಯಯವನ್ನು ಪರಾಮರ್ಶಿಸಿದರೆ ನಿರಾಶದಾಯಕ ವಾಗಿರುವುದು ಮಾತ್ರವಲ್ಲದೆ, ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ಭೂಮಿಕೆಯನ್ನು ಒದಗಿಸುತ್ತದೆ.
2011ರ ಜನಗಣತಿ ಪ್ರಕಾರ, ಭಾರತದ ಒಟ್ಟು ಜನ ಸಂಖ್ಯೆಯಲ್ಲಿ ಹುಟ್ಟಿನಿಂದ 18 ವರ್ಷದ ಮಕ್ಕಳ ಶೇಕಡಾವಾರು ಪ್ರಮಾಣ 38.99. ಅಂದರೆ ಸರಿಸುಮಾರು 1/3 ಭಾಗ.

Advertisement

ಭಾರತದಲ್ಲಿ ಮಕ್ಕಳ ಮೂಲಭೂತ ಹಕ್ಕಾದ ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿ ಮಾರ್ಚ್‌ 2019ರಲ್ಲಿ ರಾಷ್ಟ್ರೀಯ ಶಿಕ್ಷಣ ಹಕ್ಕು ವೇದಿಕೆ ಬಿಡುಗಡೆ ಮಾಡಿದ ವರದಿಯಲ್ಲಿ ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವ ಕೆಲವು ಮುಖ್ಯಾಂಶಗಳು ಪ್ರಸ್ತಾಪವಾಗಿವೆ.

ಶಾಲೆಯಲ್ಲಿ ಇರಲೇಬೇಕಾದ 10 ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಸುಮಾರು ಒಂದು ದಶಕದಲ್ಲಿ ನಾವು ಸಾಧಿಸಿದ ಪ್ರಗತಿ ಕೇವಲ ಶೇ.12.7. ಅಂದರೆ, 100 ಶಾಲೆಗಳ ಪೈಕಿ ಎಲ್ಲಾ 10 ಮೂಲಭೂತ ಸೌಕರ್ಯಗಳುಳ್ಳ ಶಾಲೆಗಳ ಸಂಖ್ಯೆ ಕೇವಲ 12. ದೇಶದಲ್ಲಿ ಒಟ್ಟು ಖಾಲಿ ಇರುವ ಶಿಕ್ಷಕರ ಸಂಖ್ಯೆ 10.1 ಲಕ್ಷ.

ಕೆಲಸ ನಿರ್ವಹಿಸುತ್ತಿರುವ ಒಟ್ಟು ಶಿಕ್ಷಕರ ಸಂಖ್ಯೆಯಲ್ಲಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪ್ರಮಾಣ ಶೇ.13.1. ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ ದಶಕವೇ ಕಳೆದರೂ ಇನ್ನೂ 60 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬ ಅಂಶ ಲೋಕಸಭೆಯಲ್ಲಿ ಪ್ರಸ್ತಾಪವಾಗಿತ್ತು.

ಈ ಎಲ್ಲಾ ಅಂಶಗಳನ್ನು ಸೂಕ್ಷವಾಗಿ ಗಮನಿಸಿದರೆ, ಗುಣಾತ್ಮಕ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಕನಿಷ್ಠ ಶೇ.10ನ್ನು ಶಿಕ್ಷಣಕ್ಕೆ ಮೀಸಲಿಡಬೇಕಿತ್ತು. ಕರಡು ಶಿಕ್ಷಣ ನೀತಿ ಕೂಡ ಆಯವ್ಯಯದಲ್ಲಿ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿತ್ತು .

Advertisement

ಹಣಕಾಸು ಸಚಿವರು ಭಾರತದ ಉನ್ನತ ಶಿಕ್ಷಣವನ್ನು ಜಗತ್ತಿನಲ್ಲಿಯೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನಾಗಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ತರುವ ಬಗ್ಗೆ ಪ್ರಸ್ತಾಪಿಸಿ, ಈ ನೀತಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆ ಎರಡಲ್ಲೂ ಮಹತ್ವದ ಬದಲಾವಣೆ ತರಲಿದೆ ಎಂದರು.

ಆದರೆ, ಅಂತಹ ಬದಲಾವಣೆಗೆ ನ್ಯಾಯಸಮ್ಮತವಾಗಿ ಸಿಗಬೇಕಿದ್ದ ಹಣಕಾಸಿನ ವಿಷಯಕ್ಕೆ ಬಂದಾಗ ಶಿಕ್ಷಣ ಕ್ಷೇತ್ರದ ಯೋಜನೆಗಳಿಗೆ ಅವರು ಮೀಸಲಿಟ್ಟ ಹಣ ಅವರು ಆಯವ್ಯಯದ ಕಾಣೆRಯಲ್ಲಿ ಅವರೇ ಪ್ರಸ್ತಾಪಿಸಿದ ಅಂಶವನ್ನು ಹುಸಿಗೊಳಿಸಿದೆ.

ಮಹತ್ವದ ಯೋಜನೆಗಳಿಗೆ ಒದಗಿಸಲಾಗಿರುವ ಅನುದಾನದ ಪಟ್ಟಿಯಲ್ಲಿ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಮತ್ತು ರಾಷ್ಟ್ರೀಯ ಶಿಕ್ಷಣ ಮಿಷನ್‌ಗೆ ಸಿಕ್ಕಿರುವ ಒಟ್ಟು ಮೊತ್ತ 38547 ಕೋಟಿ ರೂಗಳು ಮಾತ್ರ.

ಮಹತ್ವದ ರಾಷ್ಟ್ರೀಯ ಯೋಜನೆಯಾದ ಮಧ್ಯಾಹ್ನದ ಬಿಸಿಯೂಟಕ್ಕೆ 11000 ಕೋಟಿ ಮೀಸಲಿಡಲಾಗಿದೆ. ಇದು ಕಳೆದಬಾರಿ ಮೀಸಲಿಟ್ಟಿದ್ದ (9949 ಕೋಟಿ)ಕ್ಕಿಂತ 1051 ಕೋಟಿ ರೂ ಹೆಚ್ಚಳವಾಗಿದೆ. ಶಿಕ್ಷಣ ಸಬಲೀಕರಣಕ್ಕಾಗಿ ಮೀಸಲಿಟ್ಟ ಹಣ ಕಳೆದ ಆಯವ್ಯಯದಲ್ಲಿ ಮೀಸಲಿಟ್ಟಿದ್ದ 2451 ಕೋಟಿಯಿಂದ 2363 ಕೋಟಿಗೆ ಇಳಿದಿದೆ.

ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದ ಹಣ ಕಳೆದ ಬಾರಿಯ 438 ಕೋಟಿಯಿಂದ 518 ಕೋಟಿಗೆ ಏರಿದೆ. ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಗೆ ನೀಡಬೇಕಾದ ಹಣ ಕಳೆದ ಪರಿಷ್ಕೃತ ಆಯವ್ಯದಲ್ಲಿ ಮೀಸಲಿಟ್ಟಿದ್ದ 2750 ಕೋಟಿಯಿಂದ 2100 ಕೋಟಿಗೆ ಇಳಿದಿದೆ.

ಒಟ್ಟಾರೆ, ಅಲ್ಲಿಷ್ಟು -ಇಲ್ಲಿಷ್ಟು ಏರಿಕೆ ಇಳಿಕೆ ಬಿಟ್ಟರೆ, ಇಂದಿನ ಆಯವ್ಯಯ ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಬೇಕಿದ್ದ ಶಿಕ್ಷಣ ಕ್ಷೇತ್ರದ ಹೂಡಿಕೆಗೆ ಸಂಬಂಧಿಸಿ ನಮ್ಮ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next