ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಶನಿವಾರ ಜಿಲ್ಲೆಯ ವಿವಿಧ ಭಾಗದಲ್ಲಿ ಪ್ರಚಾರ ನಡೆಸಿದರು.
ಹುಬ್ಬಳ್ಳಿಯ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು, ಅಂಜುಮನ್ ಹೈಸ್ಕೂಲ್, ಫಾತಿಮಾ ಪ್ರೌಢಶಾಲೆ, ಸೇಂಟ್ ಮೈಕಲ್ ಹೈಸ್ಕೂಲ್, ಸೇಂಟ್ ಮೇರಿಸ್ ಹೈಸ್ಕೂಲ್, ಜೆ.ಕೆ.ಕನ್ನಡ ಮಾಧ್ಯಮ ಹೈಸ್ಕೂಲ್, ನಿರ್ಮಲಾ ಟಕ್ಕರ್ ಇಂಗ್ಲಿಷ್ ಮೀಡಿಯಂ ಶಾಲೆ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಗುರಿಕಾರ, ಸಮಸ್ಯೆಗಳನ್ನು ಜೀವಂತವಾಗಿ ಇರಿಸಿಕೊಂಡು ಕೇವಲ ಭರವಸೆಯ ಮೇಲೆ ಶಿಕ್ಷಕರ ಬದುಕು ಸಾಗಿಸುವ ವ್ಯವಸ್ಥೆಗೆ ಪೂರ್ಣ ವಿರಾಮ ಹಾಕಿ ಶಿಕ್ಷಕರಿಂದ ಶಿಕ್ಷಕರಿಗಾಗಿ ಶಿಕ್ಷಕರಿಗೋಸ್ಕರ ಎಂಬ ಘೋಷವಾಕ್ಯದೊಂದಿಗೆ ನಾನು ಸದಾ ನಿಮ್ಮ ಪರವಾಗಿ ಕೆಲಸ ಮಾಡಲು ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಗೆಲುವು ಸಾಧಿಸುವಂತೆ ಮಾಡಬೇಕು. ಈಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗೆ ಶಿಕ್ಷಕರ ಕೈಯಲ್ಲಿದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಸರಕಾರ ತೋರಿದ ಆತುರ, ಉತ್ಸಾಹವನ್ನು ಅನುದಾನಿತ, ಸರಕಾರಿ, ಅನುದಾನರಹಿತ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ತೋರದೇ ಇರುವುದು ಬೇಸರದ ಸಂಗತಿ. 1995ರಿಂದ ಇಲ್ಲಿಯ ವರೆಗೆ ಆರಂಭವಾದ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸದೇ ಇರುವುದು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಅನುಮತಿ ನೀಡದೇ ಇರುವುದು ಹೀಗೆ ಹತ್ತಾರು ಸಮಸ್ಯೆಗಳಿದ್ದರೂ ಯಾವುದೇ ಪರಿಹಾರ ದೊರೆಯದಿರುವುದು ವಿಷಾದನೀಯ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕೆಂದರೆ ಬದಲಾವಣೆ ಒಂದೇ ದಾರಿ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆ ಮಾಡುವ ಮೂಲಕ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು. ರವಿಕುಮಾರ ಜಮಖಂಡಿ, ಮಂಜುನಾಥ ಕಿತ್ತೂರ, ಎಸ್.ಕೆ. ರಾಮದುರ್ಗ, ಆನಂದ ಕುಲಕರ್ಣಿ, ಸತೀಶ ಗಿರಿಯಣ್ಣವರ, ಪ್ರವೀಣ ಅದರಗುಂಚಿ ಸೇರಿದಂತೆ ನೂರಾರು ಬೆಂಬಲಿಗರು ಇದ್ದರು.