ನೀಳಕಾಯ, ಕುರುಚಲು ಗಡ್ಡ, ಕಣ್ಣಲ್ಲೇ ಮಿಂಚು ಹರಿಸುವ ವ್ಯಕ್ತಿತ್ವ.. ಖಳ ನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ದೇಹದಾರ್ಡ್ಯತೆ. ಇದು ರಾಜ್ ದೀಪಕ್ ಶೆಟ್ಟಿ ಎಂಬ ಕಲಾವಿದನ ಕಂಡಾಗ ಉಂಟಾಗುವ ಭಾವ.
ಈ ಹಿಂದೆ ಹಲವು ಕನ್ನಡ, ತೆಲುಗು ಚಿತ್ರಗಳಲ್ಲಿ ನಟಿಸಿದ್ದ ರಾಜ್ ದೀಪಕ್ ಶೆಟ್ಟಿ ಇದೀಗ ಟೋಬಿ ಚಿತ್ರದ ಮೂಲಕ ಸಿನಿಪ್ರೇಮಿಗಳ ಎದುರು ಬರುತ್ತಿದ್ದಾರೆ. ಟ್ರೇಲರ್ ನಲ್ಲಿ ಕೇವಲ ಒಂದು ಡೈಲಾಗ್ ಮತ್ತು ಲುಕ್ ನಿಂದಲೇ ತನ್ನ ಪಾತ್ರದ ವಿಶಾಲತೆಯ ಸುಳಿವು ಕೊಟ್ಟಿದ್ದಾರೆ ರಾಜ್ ದೀಪಕ್.
44 ವರ್ಷದ ರಾಜ್ ದೀಪಕ್ ಶೆಟ್ಟಿ ಜನಿಸಿದ್ದು ಮಂಗಳೂರಿನಲ್ಲಿ. ಕುಡ್ಲದ ಮಿಲಾಗ್ರಿಸ್ ಮತ್ತು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ರಾಜ್ ದೀಪಕ್ ಬದುಕು ಕಟ್ಟಿಕೊಂಡಿದ್ದು ಬಣ್ಣದ ಜಗತ್ತಿನಲ್ಲಿ. ಕನ್ನಡ ಸೀರಿಯಲ್ ಗಳ ಮೂಲಕ ಕ್ಯಾಮರಾ ಎದುರಿಸಿದ ಅವರು ಕಾದಂಬರಿ, ಪ್ರೀತಿ ಇಲ್ಲದ ಮೇಲೆ, ನಿಗೂಢ, ಬಂದೆ ಬರುವ ಕಾಲ, ಮುತ್ತಿನ ತೆನೆ, ಲವ ಲವಿಕೆ, ನಿಹಾರಿಕಾ ಮುಂತಾದ ಧಾರವಾಹಿಗಳ ಮೂಲಕ ಕನ್ನಡಿಗರ ಮನೆ-ಮನಗಳಲ್ಲಿ ಜಾಗ ಪಡೆದವರು.
ಲವ ಲವಿಕೆ ಧಾರವಾಹಿಯಲ್ಲಿ ರಾಜ್ ದೀಪಕ್ ಶೆಟ್ಟಿ ಅವರ ನಟನೆ ಕಂಡ ನಿರ್ದೇಶಕ ಚೇತನ್ ಕುಮಾರ್ ಅವರು ಮೊದಲ ಬಾರಿಗೆ ಕಿರುತೆರೆಯಿಂದ ಬೆಳ್ಳಿತೆರೆಗೆ ಕರೆ ತಂದರು. ಧ್ರುವ ಸರ್ಜಾ ಮುಖ್ಯಪಾತ್ರದಲ್ಲಿ ನಟಿಸಿದ್ದ ‘ಭರ್ಜರಿ’ ಸಿನಿಮಾದಲ್ಲಿ ರಾಜ್ ದೀಪಕ್ ಮೊದಲ ಬಾರಿ ಖಡಕ್ ವಿಲನ್ ಆಗಿ ಮಿಂಚಿದರು. ಚಿತ್ರವು ಸೂಪರ್ ಹಿಟ್ ಆಗುತ್ತಿದ್ದಂತೆ ರಾಜ್ ದೀಪಕ್ ಶೆಟ್ಟಿ ಅವರಿಗೆ ಚಿತ್ರರಂಗದಿಂದ ಅವಕಾಶಗಳು ಬರಲಾರಂಭಿಸಿತು.
‘ಭರ್ಜರಿ’ ಚಿತ್ರೀಕರಣ ನಡೆಯುತ್ತಿದ್ದಂತೆ ‘ಟೈಗರ್’ ಮತ್ತು ‘ಶ್ರೀಕಂಠ’ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ನಂತರ ‘ವಾಸು ನಾನು ಪಕ್ಕ ಕಮರ್ಷಿಯಲ್’, ‘ಪ್ರಯಾಣಿಕರ ಗಮನಕ್ಕೆ’, ‘ಭರಾಟೆ’, ‘ಬಜಾರ್’, ‘ಪೊಗರು’, ‘ಆದಿ ಲಕ್ಷ್ಮೀ ಪುರಾಣ’ ಮುಂತಾದ ಹಿಟ್ ಚಿತ್ರಗಳಲ್ಲಿ ಕನ್ನಡ ಸಿನಿ ಪ್ರಿಯರ ಪ್ರೀತಿ ಪಡೆದಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ಇರುವಾಗಲೇ ರಾಜ್ ದೀಪಕ್ ಶೆಟ್ಟಿ ಅವರ ಹೆಸರು ಗಡಿ ಮೀರಿ ತೆಲುಗಿನತ್ತ ಸಾಗಿತ್ತು. ಟಾಲಿವುಡ್ ನಲ್ಲಿ ಹಿಟ್ ಆದ ‘ಇಸ್ಮಾರ್ಟ್ ಶಂಕರ್’, ವಿಕ್ಟರಿ ವೆಂಕಟೇಶ್ ಅವರ ‘ನಾರಪ್ಪ’, ವಿರಾಟ ಪರ್ವಂ, ತಮಿಳಿನ ‘ಬ್ಯಾಟರಿ’ ಚಿತ್ರದಲ್ಲಿ ರಾಜ್ ದೀಪಕ್ ಶೆಟ್ಟಿ ನಟಿಸಿದ್ದಾರೆ.
ಸದ್ಯ ‘ಟೋಬಿ’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಎದುರು ಮಿಂಚಿರುವ ರಾಜ್ ದೀಪಕ್ ಶೆಟ್ಟಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ”ಚಿತ್ರದಲ್ಲಿ ಆನಂದ ಎಂಬ ಎದುರಾಳಿ ನಟನಾಗಿ ನಟಿಸುತ್ತಿದ್ದೇನೆ. ನಾನು ಇಲ್ಲಿಯವರೆಗೆ ನಟಿಸಿದ ಅತ್ಯುತ್ತಮ ಪಾತ್ರಗಳಲ್ಲಿ ಇದು ಒಂದು. ಅತ್ಯಂತ ಸೂಕ್ಷ್ಮವಾದ ಆದರೆ ಕ್ರೂರ ಪಾತ್ರ. ನಾನು ಬೇರೆ ಸಿನಿಮಾಗಳಲ್ಲಿ ಮಾಡಿದ ಸಾಮಾನ್ಯ ವಿಲನ್ ಪಾತ್ರಗಳಂತಿಲ್ಲ. ಟ್ರೇಲರ್ ಗೆ ಸಿಕ್ಕ ಪ್ರತಿಕ್ರಿಯೆಯಿಂದ ಸಂತಸವಾಗಿದೆ. ಸಿನಿಮಾ ರಿಲೀಸ್ ಗಾಗಿ ಜನ ಕಾಯುತ್ತಿದ್ದಾರೆ. ಈ ಚಿತ್ರ ಖಂಡಿತಾ ಇಡೀ ತಂಡಕ್ಕೆ ಅವಕಾಶದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ” ಎನ್ನುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಬೇರೆ ಭಾಷೆಯಿಂದ ಬಂದ ಖಳ ನಟರು ಮಿಂಚುತ್ತಿರುವ ಸಮಯದಲ್ಲಿ ರಾಜ್ ದೀಪಕ್ ಶೆಟ್ಟಿ ಅವರು ನಮ್ಮವರೇ ಆಗಿ ಕಾಣಿಸುತ್ತಿದ್ದಾರೆ. ಯಾವುದೇ ವಿಲನ್ ಗಳಿಗೆ ಕಡಿಮೆ ಇಲ್ಲದಂತೆ ಕಾಣುವ ಕುಡ್ಲದ ಕುವರ ಭಾರತೀಯ ಸಿನಿಮಾದಲ್ಲಿ ತನ್ನದೇ ಛಾಪು ಮೂಡಿಸುವತ್ತ ಸಾಗುತ್ತಿದ್ದಾರೆ.