ಬೆಂಗಳೂರು: ಸರ್ ಸಿ.ವಿ. ರಾಮನ್‌ನಗರ ವಿಧಾನಸಭಾ ಕ್ಷೇತ್ರವನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸಮಸ್ಯೆ ಮುಕ್ತ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಎಸ್. ರಘು ಭರವಸೆ ನೀಡಿದರು.
ಅವರು ಮಂಗಳವಾರ ಕ್ಷೇತ್ರದ ನ್ಯೂತಿಪ್ಪಸಂದ್ರ, ಹನುಮಾನ್‌ನಗರ ಹಾಗೂ ಸುತ್ತಮುತ್ತಲ ಬಡಾವಣೆಗಳಲ್ಲಿ ಮತಯಾಚನೆ ಮಾಡಿದರು. ಅವರ ಜೊತೆಯಲ್ಲಿ ಅಪಾರ ಸಂಖ್ಯೆಯಲ್ಲಿ ನಾಗರಿಕರು, ಕಾರ್ಯಕರ್ತರು, ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗಿನಿಂದಲೇ ಆರಂಭಿಸಿದ ಮತಯಾಚನೆ ವೇಳೆ ನಾಗರಿಕರೊಂದಿಗೆ ಸಂವಾದ ನಡೆಸಿದ ರಘು ಕಳೆದ 10 ವರ್ಷಗಳಲ್ಲಿ ಕ್ಷೇತ್ರದ ಮೂಲಸೌಕರ್ಯಗಳನ್ನು ಹಾಗೂ ಆಧುನಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸಿರುವ ಬಗ್ಗೆ ವಿವರಿಸಿದರು. ಕ್ಷೇತ್ರಾದ್ಯಂತ ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ,
ಹೊಸದಾಗಿ ಪೈಪ್‌ಲೈನ್‌ಗಳ ಅಳವಡಿಕೆ, ಉದ್ಯಾನವನಗಳ ಆಧುನೀಕರಣ, ರಸ್ತೆ ಅಗಲೀಕರಣ, ಆಧುನಿಕ ರಸ್ತೆಗಳ ನಿರ್ಮಾಣ ಮುಂತಾದ ವಿಷಯಗಳನ್ನು ಜನರೊಡನೆ ಹಂಚಿಕೊಂಡರು. ಮೇ 12ರಂದು ಪ್ರತಿಯೊಬ್ಬರು ಮತ ಚಲಾವಣೆ ಮಾಡುವಂತೆ ವಿನಂತಿಸಿದರು. ಹ್ಯಾಟ್ರಿಕ್ ಗೆಲುವು ತಂದುಕೊಡಬೇಕೆಂದು ಮನವಿ ಮಾಡಿಕೊಂಡರು.
ನ್ಯೂತಿಪ್ಪಸಂದ್ರ ಬಡಾವಣೆ, ಅಂಚೆ ಕಚೇರಿ ಸಮೀಪದ ಹನುಮಾನ್‌ನಗರ ಮುಂತಾದೆಡೆಗಳಲ್ಲಿ ಸಾವಿರಾರು ಕಾರ್ಯಕರ್ತರು, ಪಾಲಿಕೆ ಮಾಜಿ ಸದಸ್ಯ ಎಂ. ಕೃಷ್ಣ, ರಾಜಾರೆಡ್ಡಿ, ದೇವರಾಜ್, ಆನಂದಗೌಡ, ರಾಮಕುಮಾರ್, ಸುನೀಲ್ ಮುಂತಾದ ಮುಖಂಡರು ಪಾದಯಾತ್ರೆಯಲ್ಲಿ ರಘು ಅವರಿಗೆ ಸಾಥ್ ನೀಡಿದರು.