ಹಾಸನ: ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವ ಕಾಂಗ್ರೆಸ್ ಭರವಸೆ ಚುನಾವಣ ಗಿಮಿಕ್. ಈಗಾಗಲೇ 48 ಸಾವಿರ ಕೋಟಿ ರೂ. ನಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ಉಚಿತವಾಗಿ ವಿದ್ಯುತ್ ನೀಡಿದರೆ ದಿವಾಳಿಯಾಗಲಿವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ಎಸ್ಕಾಂಗಳಿಗೆ ವರ್ಷಕ್ಕೆ ಆಗುವ ನಷ್ಟವೆಷ್ಟು ? ಅದನ್ನು ತುಂಬಿಕೊಡಲು ಸರಕಾರಕ್ಕೆಷ್ಟು ಆರ್ಥಿಕ ಹೊರೆಯಾಗುತ್ತದೆ ಎಂಬುದನ್ನು ಕಾಂಗ್ರೆಸ್ ಮುಖಂಡರು ಲೆಕ್ಕ ಹಾಕಿದ್ದಾರೆಯೇ? ಚುನಾವಣೆ ವೇಳೆ ಉಚಿತ ವಿದ್ಯುತ್ ಭರವಸೆ ನೀಡುತ್ತಿರುವ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಯಾಗಿದ್ದಾಗ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರೇ ಇಂಧನ ಸಚಿವರಾಗಿದ್ದಾಗ ಯಾಕೆ ಉಚಿತವಾಗಿ ವಿದ್ಯುತ್ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಏನೇ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ -ಬಿಜೆಪಿ ನಡುವೆ ಒಳ ಒಪ್ಪಂದ ಪ್ರತಿ ಚುನಾವಣೆಯಲ್ಲೂ ನಡೆದುಕೊಂಡೇ ಬಂದಿದೆ. ಕಾಂಗ್ರೆಸ್ ಮುಖಂಡರು ಬಿಜೆಪಿಯವರ ಜತೆ ಒಳ ಒಪ್ಪಂದ ಮಾಡಿಕೊಂಡು ಸತತ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ನಾಯಕ ಮುನಿಯಪ್ಪ ಅವರನ್ನು ಸೋಲಿಸಿದರು ಎಂದು ಆರೋಪಿಸಿದರು.
ಜ.17ರ ವರೆಗೆ ಶನಿಕಾಟವಿದೆ
ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇ ಗೌಡರು ಜೆಡಿಎಸ್ ಬಿಡುವು ದಾಗಿ ಎಲ್ಲೂ ಹೇಳಿಲ್ಲ. ಅವರಿಗೆ ಜ.17ರ ವರೆಗೆ ಶನಿಕಾಟವಿದೆ. ಅನಂತರ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ಶಿವಲಿಂಗೇಗೌಡರು ಜೆಡಿಎಸ್‌ನಲ್ಲೇ ಜಿ.ಪಂ. ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದವರು. ಅವರಿಗೆ ನಾಲ್ಕು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ನೀಡದೆ. 15 ವರ್ಷ ಸತತವಾಗಿ ಶಾಸಕರಾಗಿದ್ದಾರೆ. ಈ ಬಾರಿಯೂ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಗೆಲ್ಲುತ್ತಾರೆ. ಅದನ್ನೂ ಮೀರಿ ಪಕ್ಷ ಬಿಟ್ಟು ಹೋದರೆ ಅವರಿಗೆ ಶುಭವಾಗಲಿ. ದೇವೇಗೌಡರನ್ನು ಬಿಟ್ಟು ಹೋದ ಮಾಜಿ ಸಂಸದ ಜವರೇಗೌಡ, ಮಾಜಿ ಶಾಸಕರಾದ ಪುಟ್ಟೇಗೌಡ, ವಿಶ್ವನಾಥ್ ಏನಾಗಿದ್ದಾರೆ ನೆನಪಿಸಿಕೊಳ್ಳಲಿ ಎಂದು ಮಾಜಿ ಸಚಿವ ರೇವಣ್ಣ ಎಚ್ಚ ರಿಕೆ ನೀಡಿ ದರು.