ಸುಳ್ಯ: ಚೆನ್ನಾವರ ಗೌರಿ ಹೊಳೆಗೆ 20 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆಂದು ಗುದ್ದಲಿಪೂಜೆ ನಡೆಸಿ, ಒಂದು ವರ್ಷ ಕಳೆದಿದೆ. ಆದಾಗ್ಯೂ ಕಾಮಗಾರಿ ಆರಂಭವೇ ಆಗಿಲ್ಲ. ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಲು ಉದ್ದೇಶಿಸಿದ ಈ ಅಣೆಕಟ್ಟಿಗೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಶಾಸಕ ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸುವುದಾಗಿ ಎಂಜಿನಿಯರ್ ಭರವಸೆ ನೀಡಿದ್ದರು. ಒಂದು ವರ್ಷ ಸಂದರೂ, ಅಲ್ಲಿ ಕಾಮಗಾರಿ ಆರಂಭದ ಲಕ್ಷಣವೂ ಕಂಡಿಲ್ಲ.
Advertisement
ಹಳತು, ಹೊಸತು ಇಲ್ಲಇದೇ ಹೊಳೆಯ ಕೆಳಭಾಗದ ಅಡ್ಯತ ಕಂಡದ ಬಳಿ ನಿರ್ಮಿಸಿದ್ದ ಕಿಂಡಿ ಅಣೆಕಟ್ಟು 10 ವರ್ಷಗಳ ಹಿಂದೆ ಕುಸಿದು ಬಿದ್ದಿತ್ತು. ಆ ಕಟ್ಟು ವ್ಯವಸ್ಥಿತವಾಗಿದ್ದ ಸಂದರ್ಭದಲ್ಲಿ ಸಂಗ್ರಹಗೊಳ್ಳುತ್ತಿದ್ದ ನೀರು, ಚೆನ್ನಾವರ ತನಕ ಪ್ರಯೋಜನಕ್ಕೆ ಸಿಗುತಿತ್ತು. ಕುಸಿದ ಅನಂತರ ಅದರ ದುರಸ್ತಿಗೆ ನೂರಾರು ಬಾರಿ ಮನವಿ ಸಲ್ಲಿಸಿದ್ದರೂ ಅನುದಾನದ ಕೊರತೆ ಕಾಡಿತ್ತು. ಹಾಗಾಗಿ ಹಳೆ ಅಣೆಕಟ್ಟು ಬದಲಿಯಾಗಿ, ಚೆನ್ನಾವರ ಪರಿಸರದ ಜನರ ಅನುಕೂಲಕ್ಕಾಗಿ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಲು ಗುದ್ದಲಿ ಪೂಜೆ ನಡೆಯಿತು. ಈಗ, ಇತ್ತ ಹಳೆ ಕಿಂಡಿ ಅಣೆಕಟ್ಟು ದುರಸ್ತಿಯೂ ಇಲ್ಲ, ಇತ್ತ ಹೊಸ ಅಣೆಕಟ್ಟು ನಿರ್ಮಾಣವು ಇಲ್ಲದ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.
ಹಳೆ ಅಣೆಕಟ್ಟು ಸಮರ್ಪಕವಾಗಿದ್ದ ಸಂದರ್ಭದಲ್ಲಿ ಪರಿಸರದ ಕೆಲವು ದಲಿತ ಕುಟುಂಬಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿತ್ತು. ಕೆಲವು ವರ್ಷಗಳಿಂದ ಕೆರೆ, ಬಾವಿ ಬತ್ತಿದ್ದು, ಅಣೆಕಟ್ಟು ನೀರು ಪಾಲಾದ ಅನಂತರ ಚೆನ್ನಾವರದ ದಲಿತ ಕುಟುಂಬಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ಅದು ಈಗಲೂ ಮುಂದುವರಿದಿದೆ. ಇಲ್ಲಿ ಹೊಸ ಅಣೆಕಟ್ಟ ನಿರ್ಮಾಣ ಅಥವಾ ಹಳೆ ಅಣೆಕಟ್ಟು ದುರಸ್ತಿ ನಡೆದಿದ್ದಲ್ಲಿ, ಅಂತರ್ಜಲದ ಪ್ರಮಾಣ ಏರಿಕೆಯಾಗಿ ಕುಡಿಯುವ ನೀರಿಗಾದರೂ ಅನುಕೂಲವಾಗುತ್ತಿತ್ತು ಅನ್ನುತ್ತಾರೆ ಸ್ಥಳೀಯ ನಿವಾಸಿ ರಾಮಚಂದ್ರ. ಗುದ್ದಲಿಗೆ ಗೆದ್ದಲು
ಪಾಲ್ತಾಡು – ಚೆನ್ನಾವರ – ಕುಂಡಡ್ಕ ರಸ್ತೆಯಲ್ಲಿ ಚೆನ್ನಾವರದಲ್ಲಿನ ಕಿರು ಸೇತುವೆಯ ಮೇಲ್ಭಾಗದಿಂದ ಅನತಿ ದೂರದಲ್ಲಿ ಅಣೆಕಟ್ಟು ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿತ್ತು. ಬೇಸಗೆ ಕಾಲದಲ್ಲಿ ನೂರಾರು ಮನೆ ಮಂದಿಯ, ಕೃಷಿ ಭೂಮಿಯ ನೀರಿನ ಬವಣೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ ತತ್‌ಕ್ಷಣ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದ ಇಲಾಖೆ ಅಧಿಕಾರಿಗಳು ಮತ್ತೆ ಸ್ಥಳಕ್ಕೆ ಬಂದಿಲ್ಲ. ಹಾಗಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಪೂರ್ಣ ಗೊಳ್ಳುವ ಭರವಸೆ ಉಳಿದಿಲ್ಲ.
Related Articles
ಗುದ್ದಲಿ ಪೂಜೆ ನಡೆದ ವರ್ಷ ಸಂದರೂ ಕಾಮಗಾರಿ ಆರಂಭಗೊಂಡಿಲ್ಲ ಅಂದರೆ ಏನರ್ಥ? ಇಲ್ಲಿ ಅನುದಾನ ಇದೆಯೋ ಇಲ್ಲವೂ ಅನ್ನುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು. ಇಲ್ಲಿ ಸ್ಥಳೀಯರಿಂದ ಮಣ್ಣಿನ ಕಟ್ಟ ಹಾಕಿ ನೀರು ನಿಲ್ಲಿಸುವ ಪ್ರಯತ್ನ ನಡೆದಿತ್ತು. ಹೊಸ ಅಣೆಕಟ್ಟು ನಿರ್ಮಿಸುವ ಇಲಾಖಾಧಿಕಾರಿಗಳ ಭರವಸೆ ಹುಸಿಯಾಗಿದೆ.
– ಕಾರ್ತಿಕ್ ರೈ ಕನ್ನೆಜಾಲು, ಸ್ಥಳೀಯ ನಿವಾಸಿ
Advertisement
ಬೆಲೆ ಇಲ್ಲವೇ?ಟೆಂಡರ್ ಪೂರ್ಣಗೊಂಡ ಅನಂತರ ಕಾಮಗಾರಿಗೆ ಗುದ್ದಲಿಪೂಜೆ ನಡೆಸಲಾಗುತ್ತದೆ. ಹಣ ಇಲ್ಲದೆ ಟೆಂಡರ್ ಕರೆಯುವುದಿಲ್ಲ. ಒಂದು ವರ್ಷ ಆದರೂ ಕಾಮಗಾರಿ ಆರಂಭವಾಗಿಲ್ಲ ಅಂದರೆ, ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬಿಡುಗಡೆಗೊಂಡ ಅನುದಾನ ಏನಾಯಿತು? ಶಂಕುಸ್ಥಾಪನೆಗೆ ಬೆಲೆ ಇಲ್ಲವೇ?
– ವೆಂಕಟರಮಣ ಕುಂಡಡ್ಕ, ಸ್ಥಳೀಯ ನಿವಾಸಿ