Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 12ರಂದು ನಗರದ 27 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುವ ಹಿನ್ನೆಲೆಯಲ್ಲಿ 48 ಗಂಟೆಗಳ ಮೊದಲು ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ. ಇದರೊಂದಿಗೆ ಗುರುವಾರ ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಎಣಿಕೆ ದಿನವಾದ ಮೇ 15ರಂದು ಮುಂಜಾನೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದರು.
Related Articles
Advertisement
ಮೊಬೈಲ್ ಬಳಸುವಂತಿಲ್ಲ: ಮತದಾನದ ದಿನಂದರು ಮತದಾರರು ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ, ಮತಗಟ್ಟೆ ನಡೆದುಕೊಂಡು ಬಂದು ಮತದಾನ ಮಾಡಬೇಕು. ಜತೆಗೆ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್, ಕಾರ್ಡ್‌ಲೆಸ್ ಪೋನ್ ಬಳಕೆ ಹಾಗೂ ಮತಗಟ್ಟೆ ಬಳಿ ಪೂಜೆ, ತೆಂಗಿನಕಾಯಿ ಒಡೆಯುವುದು, ಅಗರಬತ್ತಿ ಹಚ್ಚುವುದು ಸಹ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮತಗಟ್ಟೆ ಬಳಿ ಸಹಾಯ ಕೇಂದ್ರ: ಚುನಾವಣಾಧಿಕಾರಿಗಳು ಈಗಾಗಲೇ ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್ ಹಾಗೂ ಗೈಡ್‌ಗಳನ್ನು ವಿತರಿಸಿದ್ದಾರೆ. ಈಗಾಗಲೇ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ವಿತರಣೆ ಶೇ.95ರಷ್ಟು ಆಗಿದ್ದು, ಸ್ಲಿಪ್ ದೊರೆಯದಿರುವ ಮತದಾರರು ಮತದಾನದ ದಿನ ಮತಗಟ್ಟೆಗೆ ಹೋಗಿ ಅಲ್ಲಿರುವ ಸಹಾಯ ಕೇಂದ್ರದಲ್ಲಿ ಪಡೆಯಬಹುದಾಗಿದೆ ಎಂದರು.
6.8 ಕೋಟಿ ನಗದು ವಶ: ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ಒಟ್ಟು 6.8 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದ್ದು, 11.699 ಲೀ. ಮದ್ಯ ವಶಪಡಿಸಿಕೊಂಡು 39,540 ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ 5.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
14 ಮಂದಿ ವಿರುದ್ಧ ಎಫ್ಐಆರ್ ದಾಖಲು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫ್ಲಾಟ್‌ನಲ್ಲಿ ಸಿಕ್ಕಿರುವ ಗುರುತಿನ ಚೀಟಿ ಪ್ರಕರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನನಾಯ್ಡು ಸೇರಿ 14 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಎಂಸಿಸಿ ತಂಡವು ಪರಿಶೀಲನೆ ನಡೆಸಿದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಿದೆ. 9,564 ಗುರುತಿನ ಚೀಟಿ, 6,300 ಮತದಾರರ ನೋಂದಣಿ ಅರ್ಜಿಗಳು, 20 ಸಾವಿರ ಮತದಾರರ ಸ್ಲಿಪ್‌ಗ್ಳು ಪತ್ತೆಯಾಗಿವೆ. ಆ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಹೇಶ್ವರ್ ರಾವ್ ತಿಳಿಸಿದರು.