Advertisement

ನ್ಯಾಯಾಲಯದಲ್ಲಿ ಜನರಿಗೆ ಪ್ರವೇಶ ನಿಷೇಧ

02:48 PM Jan 18, 2022 | Team Udayavani |

ರಾಯಚೂರು: ಕೊರೊನಾ ಮೂರನೇ ಅಲೆ ಹೆಚ್ಚುತ್ತಿರುವ ಕಾರಣ ನ್ಯಾಯಾಲಯಗಳಲ್ಲಿ ಜನ ಸೇರದಂತೆ ಸ್ಟಾಡಂರ್ಡ್‌ ಆಪರೇಟಿಂಗ್‌ ಪ್ರೋಸಿಜರ್‌ (ಎಸ್‌ಒಪಿ) ಜಾರಿಗೊಳಿಸಿ ಹೈಕೋರ್ಟ್‌ ಆದೇಶ ಹೊರಡಿಸಿದ್ದರಿಂದ ಸೋಮವಾರದಿಂದ ಜನರಿಗೆ ಪ್ರವೇಶ ನಿರಾಕರಿಸಲಾಯಿತು. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ದೂರದೂರುಗಳಿಂದ ಬಂದ ಜನ ಪರದಾಡುವಂತಾಯಿತು.

Advertisement

ನಗರದ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ ಜನ ನ್ಯಾಯಾಲಯ ಹೊರಗೆ ನಿಂತು ತಮ್ಮ ವಕೀಲರನ್ನು ಕಾಯುತ್ತಿರುವ ದೃಶ್ಯ ಕಂಡುಬಂದಿತು. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಹೈಕೋರ್ಟ್‌ ಈ ಆದೇಶ ನೀಡಿದೆ. ವಕೀಲರು, ತುರ್ತು ವಿಚಾರಣೆ ಇರುವ ಕಕ್ಷಿದಾರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸೋಮವಾರ ಅನೇಕ ಪ್ರಕರಣಗಳ ವಿಚಾರಣೆಗೆ ದಿನಾಂಕ ನೀಡಿದ್ದರಿಂದ ನೂರಾರು ಜನ ಆಗಮಿಸಿದ್ದರು. ಆದರೆ, ಯಾರನ್ನು ನ್ಯಾಯಾಲಯ ಆವರಣದೊಳಗೆ ಬಿಡಲಿಲ್ಲ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಬಳಿಕ ನ್ಯಾಯಾಧೀಶರು, ವಕೀಲರು ಜನರಿಗೆ ತಿಳಿಹೇಳಿ ಕಳುಹಿಸಿದರು.

ಜಿಲ್ಲೆಯ ವಿವಿಧ ಹಳ್ಳಿಗಳಿಂದ, ಅಕ್ಕಪಕ್ಕದ ಜಿಲ್ಲೆಗಳಿಂದ ನಾನಾ ಉದ್ದೇಶಕ್ಕೆ ಜನ ಆಗಮಿಸಿದ್ದರು. ಬಂದ ದಾರಿ ಸುಂಕವಿಲ್ಲದಂತೆ ಮರಳಿ ಹೋಗುವಂತಾಯಿತು. ಜಿಲ್ಲಾ ನ್ಯಾಯಾಲಯ ಮುಂಭಾಗದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಟ್ರಾಫಿಕ್‌ ಸಮಸ್ಯೆ ಉಲ್ಬಣಿಸಿತು. ಪೊಲೀಸರು ಜನರನ್ನು ಚದುರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಕುರಿತು ಮಾಧ್ಯಮದವರ ಜತೆ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಹಾದೇವಪ್ಪ ಗಂಗಪ್ಪ, ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣಕ್ಕೆ ನ್ಯಾಯಾಲಯಗಳಲ್ಲಿ ಹೆಚ್ಚು ಜನ ಸೇರದಂತೆ ಹೈಕೋರ್ಟ್‌ ಆದೇಶ ನೀಡಿದೆ. ಕಕ್ಷಿದಾರರು ತಮ್ಮ ವಕೀಲರಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಆಗಮಿಸಬೇಕು. ಜನರಿಗೆ ಸರಿಯಾಗಿ ಮಾಹಿತಿ ಸಿಕ್ಕಿಲ್ಲದಕ್ಕೆ ಆಗಮಿಸಿದ್ದಾರೆ. ಇನ್ನು ಮುಂದೆ ಆನ್‌ಲೈನ್‌ನಲ್ಲಿ ಮಾಹಿತಿ ಪಡೆಯಬಹುದು ಎಂದರು.

ಪ್ರಕರಣಗಳ ಬಗ್ಗೆ, ನ್ಯಾಯಾಲಯದಲ್ಲಿ ಸಾಕ್ಷಿದಾರರ ವಿಚಾರಣೆ ಮಾಡಲು ಅನುಮತಿ ಇಲ್ಲ. ತೀರ ಅತಿಮುಖ್ಯವಾದ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲು ಅವಕಾಶವಿದ್ದು, ಸಂಬಂಧಿಸಿದವರಿಗೆ ಮಾತ್ರ ಪ್ರವೇಶ ಇರಲಿದೆ. ಅವರಿಗೆ ಕೊರೊನಾ ಪರೀಕ್ಷೆ ಮಾಡಿ ವರದಿ ನೆಗೆಟಿವ್‌ ಇದ್ದರೆ ಮಾತ್ರ ಪ್ರವೇಶ ನೀಡಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

Advertisement

ನ್ಯಾಯಾಲಯದಲ್ಲಿ ವಿಡಿಯೋ ಸಂವಾದ ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ಪ್ರಕರಣ ದಾಖಲಿಸಬೇಕಾದರೆ, ಕೋರ್ಟ್‌ ವ್ಯವಹಾರ ನಡೆಸಬೇಕಾದರೆ ಪ್ರತ್ಯೇಕ ಕೌಂಟರ್‌ ತೆರೆದಿದ್ದು, ಅಲ್ಲಿಯೇ ನೀಡಬೇಕು. ಜನರು ವಿನಾ ಕಾರಣ ನ್ಯಾಯಾಲಯಕ್ಕೆ ಬರಬಾರದು ಎಂದು ತಿಳಿಸಿದರು. ಒಂದನೇ, ಎರಡನೇ ಅಲೆ ವೇಳೆಯೂ ಕೋರ್ಟ್‌ಗೆ ಜನರ ಪ್ರವೇಶ ನಿರಾಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next