Advertisement

ಅನುದಾನ ಪೂರ್ಣ ಬಳಸಲು ತೇಲ್ಕೂರ ತಾಕೀತು

12:40 PM Feb 18, 2022 | Team Udayavani |

ಸೇಡಂ: ಗ್ರಾಮೀಣ ಭಾಗದ ಅನೇಕ ಗ್ರಾಮಗಳ ರಸ್ತೆಗಳ ಮೇಲೆ ಚರಂಡಿ ನೀರು ಹರಿಯುತ್ತಿದೆ. ಕಂಪ್ಯೂಟರ್‌ ಆಪರೇಟರ್‌ಗಳ ಮೇಲೆ ಆರೋಪಗಳು ಕೇಳಿ ಬರುತ್ತಿವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಸಡ್ಡೆಯಿಂದ ಬಜೆಟ್‌ ವಾಪಸ್‌ ಹೋಗುತ್ತಿದೆ. ನೈರ್ಮಲ್ಯಕ್ಕೆ ಒತ್ತು ನೀಡಲಾಗುತ್ತಿಲ್ಲ.

Advertisement

ಇವು ಪಟ್ಟಣದ ತಾಪಂ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ಅಸಮಾಧಾನಕ್ಕೆ ಕಾರಣವಾದ ವಿಷಯಗಳು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಪಿಡಿಒಗಳು, ನೋಡಲ್‌ ಅಧಿಕಾರಿಗಳು, ಕಂಪ್ಯೂಟರ್‌ ಆಪರೇಟರ್‌ ಗಳು ಭಾಗಿಯಾಗಿದ್ದರು. ಆದರೆ ಬಹುತೇಕರ ನಿಷ್ಕಾಳಜಿ ಬಗ್ಗೆ ಶಾಸಕ ತೇಲ್ಕೂರ ಸಿಡಿಮಿಡಿಗೊಂಡಿದ್ದರು. ಅಲ್ಲದೇ ಕೆಲಹೊತ್ತು ತರಾಟೆ ತೆಗೆದುಕೊಂಡರು. ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.

14 ಮತ್ತು 15ನೇ ಹಣಕಾಸು ಯೋಜನೆ ಸದ್ಬಳಕೆಯಾಗುತ್ತಿಲ್ಲ. ಈ ಬಾರಿ 14ನೇ ಹಣಕಾಸು ಯೋಜನೆಯ ಸಂಪೂರ್ಣ ಅನುದಾನ ಬಳಕೆಯಾಗಬೇಕು. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರೆಯಬೇಕು. ಏಪ್ರಿಲ್‌ 1ರ ನಂತರ ಗ್ರಾಮಗಳಿಗೆ ತೆರಳುತ್ತಿದ್ದು, ಅಲ್ಲಿಯ ವರೆಗೆ ಯಾವ ಗ್ರಾಮದ ರಸ್ತೆಯಲ್ಲೂ ಚರಂಡಿ ನೀರು ಹರಿಯದಂತೆ ಎಚ್ಚರವಹಿಸಬೇಕು. ಕೂಡಲೇ ಇಂಗುಗುಂಡಿ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ಮನೆ ಹಂಚಿಕೆಗೆ ಹೆಚ್ಚಿನ ವೇಗ ನೀಡಬೇಕಾಗಿದೆ. ನಿಗದಿತ ಸಮಯದಲ್ಲಿ ಸಬೂಬು ಹೇಳದೇ ಮನೆ ಹಂಚಿಕೆ ಮುಗಿಯಬೇಕು. ವಸತಿ ಯೋಜನೆಯಡಿ 980 ಮನೆಗಳು ತಾಲೂಕಿಗೆ ನೀಡಲಾಗಿದೆ. ಜನರ ಸಮಸ್ಯೆ ಪರಿಹರಿಸಿದಾಗಲೇ ಜನಪ್ರತಿನಿಧಿಗೆ ಬೆಲೆ ಬರಲು ಸಾಧ್ಯ ಎಂದರು. ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಗುರುನಾಥ ಶೆಟಗಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next