Advertisement

ಅಧಿಕಾರಿಗಳ ಚಳಿ ಬಿಡಿಸಿದ ಶಾಸಕದ್ವಯರು

08:26 PM Dec 24, 2019 | Lakshmi GovindaRaj |

ನಂಜನಗೂಡು: ಮಿನಿ ವಿಧಾನಸೌಧದ ಆವರಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕರಾದ ಬಿ.ಹರ್ಷವರ್ಧನ್‌ ಮತ್ತು ಡಾ. ಯತೀಂದ್ರ ಸಿದ್ದರಾಮಯ್ಯ, ಅಧಿಕಾರಿಗಳ ಚಳಿಬಿಡಿಸಿದರು. ಸಭೆಯಲ್ಲಿ ಹೆದ್ದಾರಿ ಸುಂಕ, ನೋಂದಣಿ ಕಚೇರಿ ಭ್ರಷ್ಟಾಚಾರ ಹಾಗೂ ತಾಲೂಕು ಮಧ್ಯವರ್ತಿಗಳ ಹಾವಳಿ ಕುರಿತು ಕಾವೇರಿದ ಚರ್ಚೆ ನಡೆಯಿತು.

Advertisement

ರಸ್ತೆ ಸರಿಪಡಿಸಿ ಸುಂಕ ತೆಗದುಕೊಳ್ಳಿ: ಸಭೆ ಆರಂಭವಾಗುತ್ತಿದ್ದಂತೆಯೇ, ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಮನಸ್ಸಿಗೆ ಬಂದಂತೆ ಸುಂಕ ವಸೂಲಿ ಮಾಡುತ್ತಿರುವುದನ್ನು ಶಾಸಕ ಹರ್ಷವರ್ಧನ್‌ ಪ್ರಸ್ತಾಪಿಸಿ, ಮೊದಲು ಗುಣಮಟ್ಟದ ರಸ್ತೆ ನಿರ್ಮಿಸಿ, ಸುಂಕ ವಸೂಲಿ ಮಾಡಬೇಕು. ಅಲ್ಲದೆ ನೀವು ಈಗ ನಿರ್ಮಿಸಿರುವ ರಸ್ತೆಗೆ ಪ್ಯಾಚ್‌ ವರ್ಕ್‌ ಮಾಡಿದ್ದೀರಿ. ರಸ್ತೆಯುದ್ದಕ್ಕೂ ವಿದ್ಯುತ್‌ ಕಂಬಗಳಿವೆ.

ಆದರೆ ಅವುಗಳ ದೀಪಗಳು ಬೆಳಗಲೇ ಇಲ್ಲ. ಹೀಗಿದ್ದೂ ಸುಂಕ ವಿಧಿಸಿದ್ದು ಸರಿಯೇ? ರಸ್ತೆ ಉಬ್ಬು ತಗ್ಗು ಸರಿಪಡಿಸಿದ ನಂತರವೇ ಸುಂಕದ ಪ್ರಶ್ನೆ. ಅಲ್ಲಿಯವರೆಗೂ ಸುಂಕ ಪಡೆಯುವುದನ್ನು ನಿಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿಯುದ್ದಕ್ಕೂ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಹೋಟೆಲ್‌ ಮತ್ತು ಡಾಭಾಗಳಿಗೆ ಕಟ್ಟಡ ನೋಂದಣಿ ಮಾಡುವ ಮುಂಚೇಯೇ ಜಾಗೃತಿ ವಹಿಸಬೇಕು ಅಧಿಕಾರಿಗಳಿಗೆ ತಿಳಿಸಿದರು.

ಪರಿಹಾರ ಹಣದಲ್ಲೂ ಭ್ರಷ್ಟಾಚಾರ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ.ಬಿಡುಗಡೆಯಾಗಿದೆ. ಆದರೆ ಹಣ ಅರ್ಹ ಫ‌ಲಾನುಭಗಳಿಗೆ ಸಿಗದೇ ಅನರ್ಹರಿಗೆ ತಲುಪಿದೆ. ಮೂಲ ಮಾಲೀಕರಿಗೆ ಸಿಗಬೇಕಾದ ಪರಿಹಾರ ಅನೇಕ ಕಡೆ ಬಾಡಿಗೆದಾರರ ಪಾಲಾಗಿದೆ. ಜತೆಗೆ ಕಂದಾಯ ಅಧಿಕಾರಿಗಳ ಲೋಪವಿದೆ ಎಂದು ಗಂಭೀರ ಆರೋಪ ಮಾಡಿದರು.

ಒಂದು ಲಕ್ಷ ಪರಿಹಾರದ ಬದಲು ಸರ್ಕಾರ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ. ಆದರೆ ಹಣ ನೀಡುವಾಗ ಆರ್‌ಐ ಹಾಗೂ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಬೇಟಿ ನೀಡಿ ಹಣ ಪಡೆದು ಅರ್ಹರಿಗೆ ಅನ್ಯಾಯವೆಸಗಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದೆ. ಅರ್ಹರಿಗೆ ಅನ್ಯಾಯವಾದರೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಾಸಕರು ಎಚ್ಚರಿಕೆ ನೀಡಿದರು.

Advertisement

ಹುರ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಬಾಲಕನ ಮೇಲೆ ಶಿಕ್ಷಕರಿಂದ ಹಲ್ಲೆ ನಡೆದ ಪ್ರಕರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಶಾಸಕರು ಬಿಇಒರನ್ನು ಪ್ರಶ್ನಿಸಿದಾಗ, ಅಧಿಕಾರಿ ರಾಜು ಹಲ್ಲೆಗೊಳಗಾದ ವಿದ್ಯಾರ್ಥಿ ಮನೆಗೆ ಪರಿಹಾರ ಕೊಡಿಸುವುದಾಗಿ ಹೇಳಿದ್ದೇನೆ. ಅದಕ್ಕೆ ಶಾಸಕರು ಇಪ್ಪತೈದು ಸಾವಿರ ಪರಿಹಾರ ಕೊಡಿಸಬೇಕು. ಆ ಶಾಲೆ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ತಿಳಿಸಿದರು.

302 ಕೊಠಡಿಗಳು ಶಿಥಿಲ: ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ 302 ಕೊಠಡಿಗಳು ಶೀಥಿಲವಾಗಿವೆ. ಈ ಬಾರಿ ಕೇವಲ 131 ಕೊಠಡಿಗಳಿಗೆ ಮಾತ್ರ ಸರ್ಕಾರ, 2.63 ಲಕ್ಷ ರೂ ಮಾತ್ರ ಬಿಡುಗಡೆ ಮಾಡಿದೆ. ಆದರೆ ಉಳಿದ ಕೊಠಡಿಗಳ ಗತಿ ಏನು ಎಂಬುದು ತಿಳಿದಿಲ್ಲ ಎಂದದ್ದು ಯಾರಿಗೂ ಕೇಳಿಸಲಿಲ್ಲ.

ಚಿರತೆಗಳ ದಾಳಿಗೆ ಪರಿಹಾರವಿಲ್ಲ: ತಾಲೂಕಿನ ಕೌಲಂದೆ ಹೋಬಳಿಯ ಕೋಣನೂರು ಸುತ್ತಮತ್ತ ಚಿರತೆ ಹಾವಳಿ ಹೆಚ್ಚಾಗಿದೆ. ಚಿರತೆ ದಾಳಿಗೆ ಪರಿಹಾರವನ್ನೇ ಇಲಾಖೆ ನೀಡುತ್ತಿಲ್ಲ ಎಂದ ಬಳಿಕ, ಶಾಸಕರು ತಕ್ಷಣ ಪರಿಹಾರ ನೀಡಿ ಸೂಚಿಸಿದರು. ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ ದಲ್ಲಾಳಿಗಳ ಕಾರುಬಾರು ಜೋರಿದ್ದು, ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಜಿಪಂ ಸದಸ್ಯರಾ ದಯಾನಂದ ಮೂರ್ತಿ, ಮಂಗಳಾ ಸೋಮಶೇಖರ್‌, ಲತಾ ಸಿದ್ಧ ಶೆಟ್ಟಿ, ಗುರುಸ್ವಾಮಿ, ಸದಾನಂದ, ಪುಷ್ಪಾ ನಾಗೇಶ್‌, ರಾಜ್‌ ಎಲ್ಲರೂ ಒಟ್ಟಾಗಿ ಅಬ್ಬರಿಸಿದಾಗ ಶಾಸಕದ್ವಯರು ಮಧ್ಯ ಪ್ರವೇಶಿಸಿ, ಪಲಾನುಭವಿಗಳ ಆಯ್ಕೆ ಮಾಡುವಾಗ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಸೂಚಿಸಿದರು.

ತಾಪಂ ಅಧ್ಯಕ್ಷ ಬಿ.ಎಸ್‌.ಮಹದೇವಪ್ಪ, ಉಪಾಧ್ಯಕ್ಷ ಗೋಂದರಾಜನ್‌, ತಾಪಂ ಇಒ ಶ್ರೀಕಂಠೇರಾಜೇ ಅರಸ್‌, ಅರಣ್ಯಾಧಿಕಾರಿಗಳಾದ ನವೀನ್‌, ಪರಮೇಶ್‌, ನಗರಸಭೆ ಆಯುಕ್ತ ಕರಿಬಸವಯ್ಯ, ಸಮಾಜ ಕಲ್ಯಾಣ ಅಧಿಕಾರಿ ಎ.ಎನ್‌, ಜನಾರ್ಧನ್‌, ಗ್ರಾ.ಕು.ನೀರು, ಇಲಾಖೆ ಅಧಿಕಾರಿ ಚರಿತಾ, ಕೆಎಸ್‌ಆರ್‌ಟಿಸಿ ಮಹದೇವಪ್ಪ, ಜಿಪಂ, ಎಇಇ ಸತ್ಯನಾರಯಣ್‌, ತಾಪಂ ಮ್ಯಾನೇಜರ್‌ ನಂಜುಂಡಸ್ವಾಮಿ, ಮತ್ತೀತರರು ಬಾಗಿಯಾಗಿದ್ದರು.

ಕೊಠಡಿಗಳ ಕೊರತೆಯೇ?: ನಂಜನಗೂಡಿನಲ್ಲಿ ಕೆಲವು ಕಚೇರಿಗಳು ದುಬಾರಿ ಬಾಡಿಗೆಗೆ ಖಾಸಗಿ ಮನೆಗಳಿಗೆ ಸ್ಥಳಾಂತರವಾಗಿವೆ ಏಕೆ? ಕಾರಣವೇನು ಎಂದು ಶಾಸಕ ಹರ್ಷವರ್ಧನ್‌ ಪ್ರಶ್ನಿಸಿದಾಗ ಅಧಿಕಾರಿಗಳು, ನಮಗೆ ಮಿನಿ ವಿಧಾನಸೌಧದಲ್ಲಿ ಕೊಠಡಿಗಳ ಕೊರಯಿದೆ ಎಂದರು. ಆಗ ಆಶ್ಚರ್ಯ ವ್ಯಕ್ತಪಡಿಸಿದ ಶಾಸಕರು, ಇಷ್ಟು ವಿಶಾಲವಾದ ಕಟ್ಟಡದಲ್ಲೂ ಕೊರತೆಯೇ? ನನ್ನ ಗಮನಕ್ಕೆ ತನ್ನಿ ನಾನು ಸರಿಪಡಿಸಿ ಕೊಡುತ್ತೇನೆ ಎಂದರು.

ತಬ್ಬಿಬ್ಬಾದ ಅಧಿಕಾರಿ ನಂದಿನಿ: ಉಪ-ನೋಂದಣಿ ಕಚೇರಿ ಬಗ್ಗೆ ಜಿಪಂ, ಸದಸ್ಯ ಎಚ್‌.ಎಸ್‌. ದಯಾನಂದಮೂರ್ತಿ ಮಾತನಾಡಿ, ಕಚೇರಿಯಲ್ಲಿ ಹಣವಿಲ್ಲದೇ ಕೆಲಸವಾಗುವುದಿಲ್ಲ ಎಂದು ಭ್ರಷ್ಟಾಚಾರದ ಕುರಿತು ಅಧಿಕಾರಿ ನಂದಿನಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿ ನಂದಿನಿ, ತಮ್ಮ ಕಾರ್ಯಾಲಯದ ಮೇಲೆ ಬಂದಿರುವ ಆರೋಪಗಳಿಗೆ ಉತ್ತರಿಸಲಾಗದೇ ತಬ್ಬಿಬ್ಬಾದರು.

ಶಾಸಕ ಹರ್ಷವರ್ಧನ್‌ ಮಧ್ಯ ಪ್ರವೇಶಿಸಿ ಸಿಸಿ ಕ್ಯಾಮರಗಳಿಲ್ಲವೇ? ಎಂದು ಪ್ರಶ್ನಿಸಿದರೆ, ಅಧಿಕಾರಿಗಳು ಇಲ್ಲಾ ಎಂದು ಉತ್ತರಿಸಿದರು. ತಕ್ಷಣವೇ ಸಿಸಿ ಕ್ಯಾಮರಾ ಅಳವಡಿಸಿ, ಮುಂದಿನ ಸಭೆಯಲ್ಲಿ ನಿಮ್ಮ ಕಚೇರಿಯ ಭ್ರಷ್ಟಾಚಾರದ ಬಗ್ಗೆ ಚೆರ್ಚೆಯಾಗದಂತೆ ಪಾರದರ್ಶಕ ಆಡಳಿತ ನಡೆಸಿ ಎಂದು ನಂದಿನಿಯವರಿಗೆ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next