ಬೆಂಗಳೂರು: ನೋಟು ಅಮಾನ್ಯಿಕರಣದಿಂದ ಕಪ್ಪು ಹಣಕ್ಕೆ ಕಡಿವಾಣ ಹಾಕಲಾಗಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ದೇಶದ ಇ-ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಪ್ರಾಧ್ಯಾಪಕರ ಪರಿಷತ್ತಿನಿಂದ ಮಂಗಳವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಉಪನ್ಯಾಸಕರಿಗೆ ಸನ್ಮಾನ ಮತ್ತು ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಫಲವಾಗಿಯೇ ಇಂದು ದೇಶದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ವ್ಯಾಪಕವಾಗಿ ಬೆಳೆದಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿದೆ. ಇದರ ಜತೆಗೆ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸುವ ಅಗತ್ಯವಿದೆ. ಕೃಷಿ ಆಧಾರಿತ ವಾಣಿಜ್ಯೋದ್ಯಮಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ ಮಾತನಾಡಿ, ವಾಣಿಜ್ಯ ವಿಭಾಗದಲ್ಲಿ ಪಠ್ಯಕ್ರಮ ಮತ್ತು ಜ್ಞಾನಾಧಾರಿತ ವಿಷಯದ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ವಿಭಾಗದೊಳಗೆ ಅಧಿಕಾರಕ್ಕಾಗಿ ಗುದ್ದಾಟ ಮಾಡಿಕೊಳ್ಳುವುದು ಸರಿಯಲ್ಲ. ಇದು ಬದಲಾವಣೆಯ ಯುಗ ಯಾರು ಯಾವ ವಿಷಯ ಬೇಕಾದರೂ ಬೋಧಿಸಬಹುದು. ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರದ ಅಧಿಕಾರಕ್ಕಾಗಿ ಅಂತರ್ ವಿಭಾಗೀಯ ಜಗಳ ನಿಲ್ಲಬೇಕು ಎಂದು ಹೇಳಿದರು.
ಫೈಬರ್ ಮತ್ತು ಎಕಾನಮಿಕ್ ವಾರ್ ಯುಗದಲ್ಲಿ ನಾವಿದ್ದೇವೆ. ರಾಬಟ್ ಮತ್ತು ಡ್ರೋಣ್‌ಗಳೊಂದಿಗೆ ಸ್ಪರ್ಧೆ ಮಾಡಬೇಕಿದೆ. ಉತ್ತಮ ವಿಚಾರಕ್ಕಾಗಿ ಬದಲಾವಣೆ ಬಯಸಬೇಕು. ವಾಣಿಜ್ಯ ವಿಭಾಗದಲ್ಲಿ ಎಲ್ಲವೂ ಸೇರಿಕೊಂಡಿದ್ದು, ಅದರ ಸದುಪಯೋಗ ವಿದ್ಯಾರ್ಥಿಗಳಿಗೆ ಆಗಬೇಕು ಎಂದರು.
ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ. ಜಾಫೆಟ್ ಮಾತನಾಡಿ, ಶಿಕ್ಷಣವು ಜ್ಞಾನ ಮತ್ತು ಕೌಶಲತೆಯ ಸಮತೋಲನವಾಗಿದೆ. ನಾವು ಅಟೊಮೊಟೀವ್ ಯುಗದಲ್ಲಿ ಇದ್ದೇವೆ. ಕೌಶಲ್ಯದ ಜತೆಗೆ ಭವಿಷ್ಯದ ಸವಾಲು ಎದುರಿಸುವ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಬೇಕು. ಶಿಕ್ಷಣ ವ್ಯವಸ್ಥೆಯ ಮರುಪರಿಶೀಲನೆಯಾಗಬೇಕು. ಇದಕ್ಕೆ ಬೇಕಾದ ಪಠ್ಯಕ್ರಮ ಸಿದ್ಧಪಡಿಸಬೇಕು.
ಬೆಂಗಳೂರು ಕೇಂದ್ರ ವಿವಿಯಲ್ಲಿ ಪ್ರಸಕ್ತ ಸಾಲಿನಿಂದ ವಾಣಿಜ್ಯ ವಿಭಾಗದಲ್ಲಿ ಕೆಲವು ಹೊಸ ಕೋರ್ಸ್ ಆರಂಭಿಸಲಿದ್ದೇವೆ ಎಂಬ ಮಾಹಿತಿ ನೀಡಿದರು. ಬೆಂವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಪ್ರೊ.ಶಿವರಾಜ, ಪರಿಷತ್ತಿನ ಅಧ್ಯಕ್ಷ ಡಾ.ಸಿ.ಎಂ.ಈಶ್ವರ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.