ಬೆಂಗಳೂರು: ಸೆಂಟ್ರಲ್ ಕಾಲೇಜು ಆವರಣದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೋಧನೆ, ಇಲ್ಲಿಂದ 15 ಕಿ.ಮೀ ದೂರದಲ್ಲಿರುವ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪಾಠ. ಇದರ ಓಡಾಟದಲ್ಲೇ ಬೆಂವಿವಿ ಸ್ನಾತಕೋತ್ತರ ಪ್ರಾಧ್ಯಾಪಕರು ಪರದಾಡುವ ಸ್ಥಿತಿ ಬಂದೊದಗಿದೆ.
ಇದು ಒಂದು ದಿನದ ತರಗತಿಯ ಫಜೀತಿಯಲ್ಲ, 2018-19ರ ಶೈಕ್ಷಣಿಕ ವರ್ಷ ಪೂರ್ತಿ ಹೀಗೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪತ್ರಿಕೋದ್ಯಮ ಕೋರ್ಸ್ ನಡೆಸದಿರಲು ಬೆಂಗಳೂರು ಕೇಂದ್ರ ವಿವಿ ನಿರ್ಧರಿಸಿದೆ. 2017-18ರಲ್ಲಿ ಕೋರ್ಸ್‌ಗೆ ದಾಖಲಾಗಿ, ಈ ದ್ವಿತೀಯ ವರ್ಷದಲ್ಲಿ ಇರುವ ವಿದ್ಯಾರ್ಥಿಗಳಿಗೆ ತರಗತಿ ಎಂದಿನಂತೆ ಇರುತ್ತದೆ.
ಬೆಂಗಳೂರು ವಿವಿ ಪ್ರಸಕ್ತ ಸಾಲಿನಿಂದ ಹೊಸದಾಗಿ ಪತ್ರಿಕೋದ್ಯಮಕ್ಕೆ ಅರ್ಜಿ ಆಹ್ವಾನಿಸಿದೆ. ಪ್ರಥಮ ವರ್ಷಕ್ಕೆ 414 ಅರ್ಜಿ ಸಲ್ಲಿಕೆಯಾಗಿದೆ. 40 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತದೆ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೆಂಗಳೂರು ವಿವಿ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಬೆಂಗಳೂರು ಕೇಂದ್ರ ವಿವಿಯಿಂದ ನಿರ್ವಹಣೆ ಮಾಡಲಾಗುತ್ತದೆ.
ಎರಡು ಕಡೆ ಬೋಧನೆ: ಬೆಂಗಳೂರು ವಿವಿಯ ತ್ರಿವಿಭಜನೆಯಿಂದ ಈ ಸಮಸ್ಯೆ ಉದ್ಭವವಾಗಿದೆ. ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಪ್ರಾಧ್ಯಾಪಕರು ಮಾತ್ರ ಬದಲಾಗುವುದಿಲ್ಲ. ಬೆಂವಿವಿ ಹಾಗೂ ಬೆಂಗಳೂರು ಕೇಂದ್ರ ವಿವಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗಾವಣೆ ಕಾರ್ಯ ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿ ಪತ್ರಿಕೋದ್ಯಮ ವಿಭಾಗದ ಬೋಧಕರು ಜ್ಞಾನಭಾರತಿ ಹಾಗೂ ಸೆಂಟ್ರಲ್ ಕಾಲೇಜು ಎರಡು ಕಡೆಯೂ ಬೋಧನೆ ಮಾಡಬೇಕಾಗುತ್ತದೆ.
ಪ್ರಥಮ, ದ್ವಿತೀಯ ಬೇರೆ,ಬೇರೆ: ಸೆಂಟ್ರಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶ ಇಲ್ಲ. ಹಾಗೆಯೇ ಜ್ಞಾನಭಾರತೀಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ನಿತ್ಯ ನೋಡುವುದಕ್ಕೆ ಆಗುವುದಿಲ್ಲ. ಅತ್ತ ಉಪನ್ಯಾಸಕ ಪ್ರಾಧ್ಯಾಪಕರ ಗೋಳು ಒಂದೆಡೆಯಾದರೆ, ವಿದ್ಯಾರ್ಥಿಗಳ ಬವಣೆ ಇನ್ನೊಂದೆಡೆ ಹೇಳ ತೀರದಾಗಿದೆ.
ಮೂಲ ಸೌಕರ್ಯ, ಸಿಬ್ಬಂದಿ ಕೊರತೆಯಿಂದ ಪತ್ರಿಕೋದ್ಯಮ ಕೋರ್ಸ್ 2018-19ನೇ ಸಾಲಿನಲ್ಲಿ ಆರಂಭಿಸದೇ ಇರುವುದಕ್ಕೆ ಬೆಂಗಳೂರು ಕೇಂದ್ರ ವಿವಿ ಈಗಾಗಲೇ ನಿರ್ಧರಿಸಿದೆ. ವಾಣಿಜ್ಯ ವಿಭಾಗದ ಕೋರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ವಿವಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಜ್ಞಾನಭಾರತಿಯಲ್ಲಿ ಮೊದಲ ವರ್ಷದ ಪತ್ರಿಕೋದ್ಯಮ ಮಾತ್ರ ಇರುತ್ತದೆ. ಎರಡನೇ ವರ್ಷ ಸೆಂಟ್ರಲ್ ಕಾಲೇಜಿನಲ್ಲೇ ಮುಂದುವರಿಯಲಿದೆ. 414 ಅರ್ಜಿ ಬಂದಿದ್ದು, 40 ವಿದ್ಯಾರ್ಥಿಗಳಿಗೆ ಅವಕಾಶ ಇದೆ.
-ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂವಿವಿ