Advertisement
ಅಂತರಂಗದ ದೀಪಕ್ಕೆ ನಾನಾ ಮೂಲೆಗಳಿಂದ ವಿಶ್ವಸಾಹಿತ್ಯದ ತೈಲದ ಪೂರೈಕೆ, ಜೊತೆಗೆ ಆ ಅಧ್ಯಯನದೊಂದಿಗೆ ತಮ್ಮ ಜೀವನಾನುಭವವನ್ನು ಮೇಳೈಸುವ ಆತ್ಮಾನುಸಂಧಾನ ರಾಯರ ಮಾತಿಗೆ ಆ ಕಣ್ತಂಪಿನ ಬೆಳಕಿನ ಶಕ್ತಿಯನ್ನು ನೀಡಿದ್ದವೆಂದು ನಾನು ಈವತ್ತೂ ನಂಬುತ್ತೇನೆ. ಎಲ್‌ಎಸ್‌ಎಸ್ ತಮ್ಮ ಬದುಕಿನ ಉತ್ತರಾರ್ಧದಲ್ಲಿ ಹೀಗೆ ಹೃದಯಕ್ಕೆ ತಾಗುವಂತೆ ಮಾತಾಡುತ್ತಿದ್ದರು. ನಾನು ಹೋದಾಗಲ್ಲೆಲ್ಲ ಅವರ ಕೋಣೆಯಲ್ಲಿ ಅಭ್ಯಾಸದ ಕುರ್ಚಿಯಲ್ಲಿ ಕೂತು ಏನೋ ಬರೆಯುವ-ಓದುವ ಶೇಷಗಿರಿರಾಯರನ್ನೇ ನಾನು ನೋಡಿದ್ದು. ಒಂದು ಬನಿಯನ್ನು, ಬಿಳಿಯ ಲುಂಗಿ ಅವರ ಸಾಮಾನ್ಯ ಉಡುಪು. ಕೋಣೆಯ ತುಂಬ ಪೇರಿಸಿಟ್ಟ ಪುಸ್ತಕಗಳು. ಸಾಹಿತ್ಯ, ವಿಮರ್ಶೆ, ಚರಿತ್ರೆ, ತತ್ವಶಾಸ್ತ್ರ- ಹೀಗೆ ಎಷ್ಟು ವೈವಿಧ್ಯಮಯವಾದ ಗ್ರಂಥಗಳು! ಅವರ ಕೋಣೆಯನ್ನು ಪ್ರವೇಶಿಸಬೇಕಾದರೆ ಮೈಯೆಲ್ಲ ಕಣ್ಣಾಗಿರಬೇಕು.
Related Articles
Advertisement
ಈಚೆಗೆ ನನ್ನ ಬಳಿ ಬಂದ ತರುಣ ಲೇಖಕರೊಬ್ಬರು “”ಹೆಸರು ಮಾಡಬೇಕೆಂದರೆ ಎಷ್ಟು ಬರೆಯಬೇಕು” ಎಂಬ ವಿಲಕ್ಷಣ ಪ್ರಶ್ನೆ ಮುಂದಿಟ್ಟರು. “”ಎಲ್‌ಎಸ್‌ಎಸ್ ಬರೆದಷ್ಟನ್ನು ನೀವು ಓದಿದರೆ ಸಾಕು. ಆನಂತರ ನೀವು ಬರೆಯುವ ಒಂದೇ ಪುಸ್ತಕ ನಿಮ್ಮ ಹೆಸರನ್ನು ಬೆಳಕಿಗೆ ತರಬಲ್ಲದು” ಎನ್ನುತ್ತ ನಾನು ನಕ್ಕೆ. ಎಲ್‌ಎಸ್‌ಎಸ್ ಕೋಪಗೊಂಡಿದ್ದು , ಉದ್ರಿಕ್ತರಾಗಿದ್ದು ನಾನು ನೋಡಿಲ್ಲ. ಸದಾ ಸಮಾಧಾನ. ನೊಂದು ಬಂದವರಿಗೆ ಸಾಂತ್ವನ. ನನ್ನ ಶ್ರೀಮತಿ ತೀರಿಕೊಂಡಾಗ ಮನೆಗೆ ಬಂದರು. ಒಂದೂ ಮಾತಾಡಲಿಲ್ಲ. ಬಹಳ ಹೊತ್ತು ನನ್ನ ಕೈ ಹಿಡಿದು ಕೂತಿದ್ದರು. ಹಾಗೆ ಅವರು ಕೈ ಒತ್ತಿ ಹಿಡಿದು ಕೂತಿದ್ದು ನನಗೆ ಕೊಟ್ಟ ಸಮಾಧಾನ ಅಷ್ಟಿಷ್ಟಲ್ಲ.
ನನ್ನ ಎಷ್ಟೊಂದು ಮುಗಿಲು ಸಾನೆಟ್ ಸಂಗ್ರಹ ಪ್ರಕಟವಾದಾಗ ಕನ್ನಡದ ಪ್ರಭಾವಿ ಲೇಖಕರೊಬ್ಬರು ಪತ್ರಿಕೆಯಲ್ಲಿ ಅದನ್ನು ಉಧ್ವಸ್ತಗೊಳಿಸುವಂಥ ವಿಮರ್ಶೆ ಬರೆದಾಗ ಎರಡೇ ದಿನಗಳಲ್ಲಿ ಶೇಷಗಿರಿರಾಯರ ಪತ್ರ ಬಂತು. “ಆ ವಿಮರ್ಶೆ ನಿಮ್ಮ ಕೃತಿಗೆ ನ್ಯಾಯ ಕೊಡುವಲ್ಲಿ ಸೋತಿದೆ. ನಾನು ಈಚೆಗೆ ಓದಿದ ಅತ್ಯುತ್ತಮ ಕವಿತಾಸಂಗ್ರಹಗಳಲ್ಲಿ ಎಷ್ಟೊಂದು ಮುಗಿಲು ಒಂದು. ನೀವು ಹತಾಶರಾಗದೆ ಯಾವತ್ತಿನ ಉತ್ಸಾಹದಿಂದ ಮುಂದುವರೆಯಿರಿ’ ಎಂದು ಧೈರ್ಯ-ಆತ್ಮವಿಶ್ವಾಸ ಕುದುರಿಸುವ ದೀರ್ಘ ಪತ್ರ ಬರೆದಿದ್ದರು! ಒಬ್ಬ ಲೇಖಕನ ಬದುಕಿನಲ್ಲಿ ಇಂಥವೆಲ್ಲ ಮರೆಯಲಾಗದ ಕ್ಷಣಗಳು.
ಕೇಡಿನ ಕಲ್ಪನೆ ಮತ್ತು ಸಾವಿನ ನಿಗೂಢತೆ ಎಲ್‌ಎಸ್‌ಎಸ್ ಅವರನ್ನು ಸದಾ ಕಾಡುವ ಸಂಗತಿಗಳಾಗಿದ್ದವು. ತನ್ನ ಮನಸ್ಸಲ್ಲಿ ಕಿಂಚಿತ್ ದುಷ್ಟತನವಿದ್ದರೂ ದುಷ್ಟತನವನ್ನು ಎದುರಿಸಲಾಗದು ಎನ್ನುತ್ತ ಎಲ್‌ಎಸ್‌ಎಸ್ ಒಮ್ಮೆ ನನಗೆ ಪ್ರಮಿಥ್ಯೂಸ್ ಎಂಬ ಗ್ರೀಕ್ ದೇವತೆಯ ಕಥೆ ಹೇಳಿದ್ದರು. ಈ ಪ್ರಮಿಥ್ಯೂಸನನ್ನು ಕುರಿತು ಇಂಗ್ಲಿಷ್ ಕವಿ ಶೆಲ್ಲಿ ಒಂದು ನಾಟಕ ಬರೆದಿದ್ದಾರೆ. ಪ್ರಮಿಥ್ಯೂಸ್ ಆನ್ ಬೌಂಡ್ ಎನ್ನುವುದು ಆ ನಾಟಕದ ಹೆಸರು. ಆ ನಾಟಕದಲ್ಲಿ ಬರುವಂತೆ ದೇವತೆಗಳ ಸರ್ವಪ್ರಭುವಾದ ಸ್ಯೂಸ್ ದುಷ್ಟ ಬುದ್ಧಿಯ ದಬ್ಟಾಳಿಕೆ ಅರಸ. ಪ್ರಮಿಥ್ಯೂಸ್, ಸ್ಯೂಸನ ಇಚ್ಛೆಗೆ ವಿರುದ್ಧವಾಗಿ ಮಾನವನಿಗೆ ಅಗ್ನಿಯನ್ನು ತಂದುಕೊಡುತ್ತಾನೆ. ಇದರಿಂದ ಕ್ರುದ್ಧನಾದ ಸ್ಯೂಸ್, ಪ್ರಮಿಥ್ಯೂಸನನ್ನು ಒಂದು ಬಂಡೆಗೆ ಕಟ್ಟಿಹಾಕುತ್ತಾನೆ. ಪ್ರತಿದಿನವೂ ಸ್ಯೂಸನಿಗೆ ಪ್ರಿಯವಾಗಿದ್ದ ಹಕ್ಕಿಯೊಂದು ಹಾರಿ ಬಂದು ಪ್ರಮಿಥ್ಯೂಸನ ಕರುಳನ್ನು ಬಗಿದು ತಿನ್ನುತ್ತದೆ. ಮರು ಬೆಳಿಗ್ಗೆಯ ವೇಳೆಗೆ ಪ್ರಮಿಥ್ಯೂಸನ ಕರುಳು ಮತ್ತೆ ಬೆಳೆಯುತ್ತದೆ. ಹದ್ದು ಪುನಃ ಕರುಳು ಕಿತ್ತು ತಿನ್ನುತ್ತದೆ. ಇದು ಸಹಸ್ರಾರು ವರ್ಷ ಅವಿರತವಾಗಿ ಸಾಗುತ್ತದೆ. ಮಹಾಕ್ರೂರಿಯಾದ ಸ್ಯೂಸನ ಅನ್ಯಾಯಕ್ಕೆ ಒಳಗಾಗಿದ್ದ ಇತರರು ಪ್ರಮಿಥ್ಯೂಸನ ಬಿಡುಗಡೆ ಎಂದು? ಎಂದು ಹಂಬಲಿಸುತ್ತಾರೆ. ಯಾವಾಗ ಪ್ರಮಿಥ್ಯೂಸನ ಹೃದಯದಲ್ಲಿ ಸ್ಯೂಸನ ಬಗ್ಗೆ ಕ್ರೋಧ-ದ್ವೇಷಗಳು ನಾಮಾವಶೇಷವಾಗುವುವೋ ಅಲ್ಲಿಯವರೆಗೆ ಪ್ರಮಿಥ್ಯೂಸನಿಗೆ ಬಿಡುಗಡೆಯಿಲ್ಲ.
ಕ್ರೋಧ-ದ್ವೇಷಗಳು ಮಾಯವಾದ ಮರುಗಳಿಗೆಯೇ ಸ್ಯೂಸ್ ತಾನಾಗಿ ಸಿಂಹಾಸನಪತಿತನಾಗುತ್ತಾನೆ. “ನಮ್ಮಲ್ಲಿಯೇ ಕೇಡು ಇರುವಾಗ ಇನ್ನೊಬ್ಬರಲ್ಲಿರುವ ಕೇಡನ್ನು ಎದುರಿಸುವುದು ಹೇಗೆ?’ ಎಂದು ಎಲ್‌ಎಸ್‌ಎಸ್ ಒಂದು ಕ್ಷಣ ಮೌನವಾಗಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೂತರು. ನನಗೆ ಆದಿಪುರಾಣದ ಭರತ-ಬಾಹುಬಲಿಯ ಕಥೆ ನೆನಪಾಗುತ್ತಿತ್ತು. ಎಂಥ ಪಾಪಿಗೂ ಕಡೆಗೆ ಕ್ಷಮೆಯುಂಟು ಎಂಬ ಆದರ್ಶ ಕಲ್ಪನೆಯನ್ನು ಎಲ್‌ಎಸ್‌ಎಸ್ ಆಳದಲ್ಲಿ ಒಪ್ಪಲಾರರು. ತಮ್ಮ ಮಾತಿಗೆ ಅನುಬಂಧವೆನ್ನುವಂತೆ ಒಮ್ಮೆ ಹೇಳಿದರು, “ನನ್ನ ಮಾತು ಪಾಪಿಯೂ ಉದ್ಧಾರವಾಗುತ್ತಾನೆ ಎನ್ನುವ ದರ್ಶನದ ನಿರಾಕರಣೆಯಲ್ಲ. ಅದು ನನ್ನಂಥವನಿಗೆ ಉದ್ಭವಿಸುವ ಸಂದೇಹಗಳ ವಿವರಣೆ’.
ತಮ್ಮ ಬದುಕನ್ನು ರೂಪಿಸಿದ ಸಾಹಿತ್ಯ ಒಂದು ತಕ್ಕಡಿಯಲ್ಲಿ , ಬದುಕು ಇನ್ನೊಂದು ತಕ್ಕಡಿಯಲ್ಲಿ. ಇವೆರಡರಲ್ಲಿ ಯಾವುದರ ತೂಕ ಹೆಚ್ಚು ಎಂದು ಕೇಳಿದರೆ ಎಲ್‌ಎಸ್‌ಎಸ್ ಏನು ಹೇಳುತ್ತಾರೆ? ಅವರು ವಿಶ್ವಾಸದಿಂದ ಹೇಳುತ್ತಾರೆ: ಸಾಹಿತ್ಯವು ಬಹಳ ದೊಡ್ಡದು; ಬದುಕಿನ ವರಗಳಲ್ಲಿ ಒಂದು. ಆದರೂ ಬದುಕು ಅದಕ್ಕಿಂತ ದೊಡ್ಡದು!
ಬದುಕನ್ನು ಅದು ಇದ್ದಂತೇ ಒಪ್ಪಿಕೊಳ್ಳುವುದು… ಅದೇ ನನ್ನ ಬಾಳ ಗುರಿ ಎನ್ನುತ್ತಾರೆ ಎಲ್‌ಎಸ್‌ಎಸ್.ನಮ್ಮ ಸಂಸ್ಕೃತಿಯ ಸಮಾಜ ಋಣದ ಕಲ್ಪನೆ ಬಹುದೊಡ್ಡದು ಎನ್ನುತ್ತಾರೆ ಎಲ್‌ಎಸ್‌ಎಸ್. ಎಷ್ಟೊಂದನ್ನು ನಾನು ಬದುಕಿನಲ್ಲಿ ಪಡೆಯುತ್ತೇನೆ- ನನ್ನ ಪೂರ್ವಜರಿಂದ, ನಾನು ಕಾಣದ ದೇಶಗಳ ಮತ್ತು ನನ್ನ ದೇಶದ ವಿಜ್ಞಾnನಿಗಳು ಮತ್ತು ತಂತ್ರಜ್ಞಾನಿಗಳಿಂದ, ನನ್ನ ಹೆಂಡತಿ ಮಕ್ಕಳಿಂದ, ಸುತ್ತ ಇರುವವರಿಂದ! ನನಗೆ ಹೃದಯಾಘಾತವಾದಾಗ ನನ್ನನ್ನು ಉಳಿಸಿದ ಯಂತ್ರಗಳನ್ನು , ಔಷಧಿಗಳನ್ನು ಜಗತ್ತಿಗೆ ಕೊಡಲು ಎಷ್ಟು ಶತಮಾನಗಳ, ಎಷ್ಟು ದೇಶಗಳ, ಎಷ್ಟು ಮಂದಿ ವಿಜ್ಞಾನಿಗಳು, ತಂತ್ರಜ್ಞಾನಿಗಳು, ಯಂತ್ರ ನಿರ್ಮಾಪಕರು, ಕಟ್ಟಡಗಳನ್ನು ಕಟ್ಟುವವರು ಶ್ರಮಿಸಿದ್ದಾರೆ! ಪ್ರತಿಯಾಗಿ ನಾನೇನು ಕೊಡಬಲ್ಲೆ? ನಮ್ಮ ಸಂಸ್ಕೃತಿಯ ಈ ಋಣದ ಕಲ್ಪನೆ ನೈತಿಕವಾದದ್ದು; ಅಗತ್ಯವಾದದ್ದು. ಯೂಜಿಸ್ ಹ್ಯಾಮಿಲ್ಟನ್ ಬರೆದ ನಾಲಕ್ಕು ಸಾಲುಗಳನ್ನು ಎಲ್‌ಎಸ್‌ಎಸ್ ತಮ್ಮ ಆತ್ಮಕಥನದ ಕೊನೆಗೆ ಉಲ್ಲೇಖೀಸುತ್ತಾರೆ:
ಗಾಳಿಯಂದದಿ ನಾವು
ಹೋದ ಮೇಲೂ
ವನ ಮಧುರವಾಗುವುವು
ಇಂದಿನಂತೇ!
(ಅನುವಾದ: ವಿಸೀ)
ನಗರಗಳಲ್ಲೂ ಇರುಳಾಗಿಯೇ ಆಗುತ್ತದೆ. ಶೇಷಗಿರಿರಾಯರನ್ನು ನೋಡಿ ಅವರ ಮೌನ ಸಂದೇಶವನ್ನು, ಅಶ್ರುತ ವಾಣಿಯನ್ನು ಎದೆಯಲ್ಲಿ ಆವಾಹಿಸಿಕೊಂಡು, ನಾನು ಹೊರಗೆ ಬಂದಾಗ ಮೇಲಿಂದ ನನ್ನ ಕರ್ತವ್ಯ ನಾನು ಬಿಡಲಾರೆ ಎಂಬಂತೆ ಕತ್ತಲೆ ಇಳಿಯುತ್ತಿತ್ತು. ಸಾಲು ದೀಪಗಳು ಯಾಕೋ ಇನ್ನೂ ಹತ್ತಿರಲಿಲ್ಲ. ಬೆಳಕು ಹೋಗಿ ಹೊಸಬೆಳಕಿನ್ನೂ ಬಾರದಿರುವ ಸಂಧಿಕ್ಷಣ ನನ್ನ ಎದೆಯಲ್ಲಿ ವಿವರಿಸಲಾಗದ ದಿಗಿಲು ಹುಟ್ಟಿಸುತ್ತಿರುವಾಗ ಕ್ಷಿತಿಜದ ಅಂಚಲ್ಲಿ ಒಂದು ಒಂಟಿ ನಕ್ಷತ್ರ ಫಳಕ್ಕನೆ ಹೊಳೆಯಿತು. – ಎಚ್. ಎಸ್. ವೆಂಕಟೇಶಮೂರ್ತಿ ಫೊಟೊ : ಎ. ಎನ್. ಮುಕುಂದ್