Advertisement
ವಿ.ವಿ.ಯ ಮೂರನೇ ಕುಲಪತಿಗಳಾಗಿದ್ದ ಅವರು ಮಂಗಳೂರು ವಿ.ವಿ.ಯನ್ನು ಕಟ್ಟಿ ಬೆಳೆಸಿದ ಕಾರ್ಯ ಅದ್ವಿತೀಯ. ಅತ್ಯುತ್ತಮ ವಾಗ್ಮಿಯಾಗಿ, ಶ್ರೇಷ್ಠ ವಿಜ್ಞಾನಿಯಾಗಿ, ಅತ್ಯುತ್ತಮ ಆಡಳಿತಗಾರ ರಾಗಿದ್ದ ಅವರು ಎಲ್ಲರನ್ನು ಜತೆಯಾಗಿ ಕರೆದು ಕೊಂಡು ಮುನ್ನಡೆಸಿದ ಮಹಾನ್ ಸಾಧಕ. ಗುರುತರ ಕೊಡುಗೆಗಳ ಮೂಲಕ ಅವರು ಮಂಗಳೂರು ವಿ.ವಿ. ಪಾಲಿಗೆ ಎಂದೆಂದಿಗೂ ಅಜರಾಮರ.
Related Articles
Advertisement
ಮಂಗಳೂರು ವಿ.ವಿ.ಯು ಕೈಗಾರಿಕೆಗಳ ಜತೆಗೆ ಸಂಬಂಧ ಬೆಸೆದುಕೊಂಡು ವಿದ್ಯಾರ್ಥಿಗಳಿಗೆ ನೆರವಾಗುವ ಪರಿಕಲ್ಪನೆಯನ್ನು ಪ್ರೊ|ಸವದತ್ತಿ ಅವರು ಜಾರಿಗೆ ತಂದಿದ್ದರು. ವಿದ್ಯಾರ್ಥಿಗಳ ಜತೆಗೆ ಸಂವಾದ, ಕೈಗಾರಿಕೆಗಳಿಗೆ ಶಿಕ್ಷಕರು ತೆರಳಿ ಅಧ್ಯಯನ ಮಾಡಲು ಉದ್ದೇಶಿಸಲಾಗಿತ್ತು. ಇಬ್ಬರ ಮಧ್ಯೆ ಒಡಂಬಡಿಕೆ ಮೂಡಿಸುವ ಮೊದಲ ಪ್ರಯತ್ನಕ್ಕೆ ಭದ್ರಬುನಾದಿ ಹಾಕುವ ಮೂಲಕ ಅನಂತರದ ದಿನಗಳಲ್ಲಿ ವಿ.ವಿ. ಸ್ಥಾನಮಾನವನ್ನು ಎತ್ತರಕ್ಕೇರಿಸಿದ್ದರು.
ದೇಶದ ಬಹುತೇಕ ವಿ.ವಿ.ಗಳ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಅವರು, ದೇಶದ ಎಲ್ಲ ಕುಲಪತಿಗಳನ್ನು ಸೇರಿಸಿಕೊಂಡು ವಿಚಾರಸಂಕಿರಣ ಸಂಘಟಿಸಿದ್ದರು. ಯುಜಿಸಿ ಸದಸ್ಯರಾಗಿದ್ದ ಕಾರಣದಿಂದ ಎಲ್ಲರ ಜತೆಗೆ ಬೆರೆಯುವ ಚಾಕಚಕ್ಯತೆ ಗುಣ ಅವರಲ್ಲಿತ್ತು. ಈ ಮೂಲಕ ಮಂಗಳೂರು ವಿ.ವಿ.ಯ ಕುಲಪತಿ ಕಚೇರಿಯ ಘನತೆ, ಗೌರವ ಎತ್ತಿಹಿಡಿದಿದ್ದರು.
ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ಅವರು ಸಮಾಜಶಾಸ್ತ್ರ, ವಾಣಿಜ್ಯ, ರಾಜಕೀಯ, ಆಡಳಿತ, ರಸಾಯನಶಾಸ್ತ್ರ, ಇತಿಹಾಸ.. ಹೀಗೆ ಯಾವುದೇ ವಿಚಾರದಲ್ಲಿ ನಿರರ್ಗಳ ಹಾಗೂ ಪಾಂಡಿತ್ಯ ಪೂರ್ಣವಾಗಿ ಇಂಗ್ಲಿಷ್, ಕನ್ನಡದಲ್ಲಿ ಮಾತನಾಡ ಬಲ್ಲ ಬಹುಮುಖ್ಯ ಕಲೆ ಅವರಲ್ಲಿತ್ತು. ವಿ.ವಿ.ಯಲ್ಲಿ ಅಧ್ಯಯನ ಪೀಠ ಹಾಗೂ ಅಧ್ಯಯನ ಕೇಂದ್ರವನ್ನು ಅವರ ಕಾಲದಲ್ಲಿ ಸ್ಥಾಪಿಸುವ ಮೂಲಕ ವಿ.ವಿ.ಗೆ ಹೊಸತನವನ್ನು ಪರಿಚಯಿಸಿದ್ದರು.
ಅವರು ನಿವೃತ್ತರಾದ ಅನಂತರ, ಪ್ರೊ| ಭೈರಪ್ಪ ಅವರು ಕುಲಪತಿಗಳಾಗಿದ್ದಾಗ ಹಾಗೂ ನಾನು ಕುಲಸಚಿವನಾಗಿದ್ದ ಸಮಯದಲ್ಲಿ ನಡೆದ “ವಿಷನ್ 2020-2030 ಡಾಕ್ಯುಮೆಂಟ್’ನ ಅಧ್ಯಕ್ಷರಾಗಿ ಅವರ ಕಾರ್ಯವೈಖರಿ ಮಾದರಿ ಹಾಗೂ ಅವಿ ಸ್ಮರಣೀಯ. ಅವರ ಒಕ್ಕಣೆಯ ಬರಹ ವಿ.ವಿ.ಯ ಮುಂದಿನ ಬೆಳವಣಿಗೆಗೆ ದಾರಿದೀಪದಂತಿದೆ. ವಿ.ವಿ ವಿದ್ಯಾರ್ಥಿಗಳು, ಶಿಕ್ಷಕರು ಗ್ರಾಮಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿ ಅವಲೋಕಿಸಿ ಸರಕಾರದ ಜತೆಗೆ ಕೊಂಡಿಯಾಗಿ ಕೆಲಸ ಮಾಡುವ ನೆಲೆಯಲ್ಲಿ “ವಿ.ವಿ. ಹಳ್ಳಿಗಳ ಕಡೆಗೆ’ ಎಂಬ ಪರಿಕಲ್ಪನೆಗೆ ಜೀವ ತುಂಬಿದವರು ಅವರು. ಅದನ್ನು ಅನುಷ್ಠಾನಿಸುವ ಕಾರ್ಯವನ್ನು ನಾವು ಪ್ರಾಮಾ ಣಿಕವಾಗಿ ನಡೆಸಿದ್ದೇವೆ.
ಅವರ 6 ವರ್ಷಗಳ ಅಧಿಕಾರಾವಧಿಯಲ್ಲಿ 120 ಸಂಯೋಜಿತ ಕಾಲೇಜುಗಳಿಗೆ ಕನಿಷ್ಠ ಒಂದು ಬಾರಿಯಾದರೂ ಭೇಟಿ ನೀಡುವ ಮೂಲಕ ಅಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಜತೆಗೆ ಸಂಬಂಧ ಬೆಸೆಯುವ ಪ್ರಯತ್ನ ನಡೆಸಿದ್ದರು.
ವಿ.ವಿ. ಕುಲಪತಿಗಳನ್ನು ರಾಜ್ಯಪಾಲರು ಬಹಿರಂಗವಾಗಿ ಶ್ಲಾಘಿಸುವುದು ಕಡಿಮೆ. ಆದರೆ ನೊಬೆಲ್ ಪುರಸ್ಕೃತ ಲಾರಿ ಪೋರ್ಟರ್ ಅವರನ್ನು ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಪ್ರೊ| ಎಂ.ಐ. ಸವದತ್ತಿ ಅವರು ಕರೆತಂದಿದ್ದರು. ಇದನ್ನು ಕಂಡ ಅಂದಿನ ರಾಜ್ಯಪಾಲರಾದ ಖುರ್ಷಿದ್ ಆಲಂ ಖಾನ್ ಅವರು ಮಾಧ್ಯಮದವರ ಜತೆಗೆ ಮಾತನಾಡಿ, “ನೊಬೆಲ್ ಪುರಸ್ಕೃತರನ್ನು ಘಟಿ ಕೋತ್ಸವಕ್ಕೆ ಕರೆತಂದು ಪ್ರೊ| ಸವದತ್ತಿ ಅವರು ಈ ಕಾರ್ಯಕ್ರಮದ ಘನತೆ ಇಮ್ಮಡಿಗೊಳಿಸಿದ್ದಾರೆ. ಕುಲಪತಿಯವರ ಆಡಳಿತಾತ್ಮಕ ಕಾರ್ಯವೈಖರಿ ಅದ್ಭುತ’ ಎಂದು ಕೊಂಡಾಡಿದ್ದರು.
ಪ್ರೊ|ಪಿ.ಎಸ್.ಯಡಪಡಿತ್ತಾಯ,
ಕುಲಪತಿಗಳು,
ಮಂಗಳೂರು ವಿ.ವಿ.