Advertisement

ಸವಾಲಿನೊಂದಿಗೆ ಯಕ್ಷಗಾನ ಅಕಾಡೆಮಿ ಸಾರಥ್ಯ

06:53 PM Mar 21, 2018 | Karthik A |

ಕನ್ನಡ ಸಂಸ್ಕೃತದ ಮೇರು ವಿದ್ವಾಂಸ ಪ್ರೊ. ಎಂ.ಎ.ಹೆಗಡೆ ದಂಟ್ಕಲ್‌ ಅವರಿಗೆ ಬಯಸದೇ ಬಂದ ಭಾಗ್ಯ ಯಕ್ಷಗಾನ ಅಕಾಡೆಮಿ ಸಾರಥ್ಯ. ಉಳಿದ ನೇಮಕಗೊಂಡ ಕಲಾವಿದ ಸದಸ್ಯರ ಜೊತೆ ಯಕ್ಷಗಾನ ಅಕಾಡೆಮಿಗೆ ಒಂದು ಭೂಮಿಕೆ ಸಿದ್ದಗೊಳಿಸಬೇಕಾಗಿದೆ. ಅದರ ಜೊತೆಗೇ ಕಸೆ ಸೀರೆ, ತಾಳ, ಚರ್ಮ ವಾದ್ಯಗಳ ನಿರ್ಮಾಣಕ್ಕೆ ಉತ್ತೇಜನ ಸೇರಿದಂತೆ ಯಕ್ಷಗಾನಕ್ಕೆ ಅಕಾಡೆಮಿಕ್‌ ಮಾನ್ಯತೆಯ ಶಾಸ್ತ್ರೀಯ ಸ್ಥಾನ ಲಭಿಸುವಂತೆ ಮಾಡಬೇಕಾದ ಗುರುತರ ಜವಬ್ದಾರಿ ಕೂಡ ಇದೆ. ಇದನ್ನು ನಿಭಾಯಿಸುವಲ್ಲಿ ಪ್ರೊ. ಎಂ.ಎ.ಹೆಗಡೆ ಅವರ ಸಮರ್ಥರು. ಅವರಿಗೆ ನಾಡದ್ದು 30ರಂದು ಸಿದ್ದಾಪುರದಲ್ಲಿ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನ ನೀಡುವ ಶ್ರೀ ಅನಂತ ಪ್ರಶಸ್ತಿ ಕೂಡ ಪ್ರದಾನ ಆಗುತ್ತಿದೆ. ಈ ಹಿನ್ನಲೆಯಲ್ಲಿ ಅವರ ಬದುಕು ಬರಹ ಹಾಗೂ ಯಕ್ಷಗಾನ ಕ್ಷೇತ್ರದ ಸಮಸ್ಯೆಗಳ ಕ್ಷ-ಕಿರಣದ ಬರಹ ಕಟ್ಟಿಕೊಡಲಾಗಿದೆ.

Advertisement

ಶಿರಸಿ: ಏಳು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಸಂಸ್ಕೃತ ಹಾಗೂ ಕನ್ನಡ ವಿದ್ವಾಂಸ, ಯಕ್ಷಗಾನ ಕವಿ, ಕಲಾವಿದ ಪ್ರೊ.ಎಂ.ಎ. ಹೆಗಡೆ ದಂಟ್ಕಲ್‌ ಆಯ್ಕೆ ಜೊತೆ ನೂತನ ಅಕಾಡೆಮಿಯ ಜವಾಬ್ದಾರಿ ಹಾಗೂ ಸವಾಲಿನ ನಡುವಿನ ಸಾರಥ್ಯ ಕೂಡಿದೆ. ಜಾನಪದ, ಯಕ್ಷಗಾನ, ಬಯಲಾಟ ಅಕಾಡೆಮಿಯು ಯಕ್ಷಗಾನ ಹಾಗೂ ಬಯಲಾಟ ಅಕಾಡೆಮಿಯಾಗಿತ್ತು. ಇದೀಗ ಯಕ್ಷಗಾನ ಹಾಗೂ ಬಯಲಾಟ ಪ್ರತ್ಯೇಕ ಆಕಾಡೆಮಿಯಾಗಿದೆ. ಈ ನೂತನ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ದಂಟ್ಕಲ್‌ ಆಯ್ಕೆ ಆಗಿದ್ದಾರೆ. ಯಕ್ಷಗಾನ ಬಯಲಾಟ ಅಕಾಡೆಮಿಗೆ ಈವರೆಗೆ ಉತ್ತರ ಕನ್ನಡದವರಿಗೆ ಸಿಗದ ಅಧ್ಯಕ್ಷ ಸ್ಥಾನ ಕೂಡ ಸಿಕ್ಕಿದೆ.


ಪ್ರೊ.ಎಂ.ಎ. ಹೆಗಡೆ ದಂಟ್ಕಲ್‌ ಯಕ್ಷಗಾನ ಹಾಗೂ ಸಂಸ್ಕೃತ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯ. ಜಿಲ್ಲೆಯ ಸಿದ್ದಾಪುರ ತಾಲೂಕಿನ ದಂಟಕಲ್ಲಿನಲ್ಲಿ 1948ರಲ್ಲಿ ಜನಿಸಿದವರು. ಅಣ್ಣಪ್ಪ ಹೆಗಡೆ ಹಾಗೂ ಕಾಮಾಕ್ಷಿಯರ ಹಿರಿಯ ಮಗ. ಪ್ರಾಥಮಿಕ ಶಿಕ್ಷಣವನ್ನು ಕರ್ಜಗಿ ಕೋಡ್ಸರ ಹಾಗೂ ಕಿಬ್ಬಳ್ಳಿ ಶಾಲೆಗಳಲ್ಲಿ, ಮಾಧ್ಯಮಿಕ ಶಿಕ್ಷಣ ಹೆಗ್ಗರಣಿಯಲ್ಲಿ ಪೂರೈಸಿ ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಕವಿವಿಯಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಹಾಗೂ ಪಿ.ಸಿ. ಜಾಬಿನ್‌ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ 1973ರಿಂದ ಸಿದ್ದಾಪುರದ ಮಹಾತ್ಮ ಗಾಂಧಿ ಶತಾಬ್ಧಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2006ರಲ್ಲಿ ನಿವೃತ್ತರಾಗಿ ಸದ್ಯ ಶಿರಸಿಯಲ್ಲಿ ನೆಲೆಸಿದ್ದಾರೆ.


ಅಲಂಕಾರ ತತ್ವ, ಹಿಂದೂ ಸಂಸ್ಕಾರಗಳು, ಪ್ರಮಾಣ ಪರಿಚಯ, ಭಾರತೀಯ ದರ್ಶನಗಳು ಮತ್ತು ಭಾಷೆ, ಸೌಂದರ್ಯ ಲಹರಿ ಮತ್ತು ಸಮಾಜ, ಕೆರೆಮನೆ ಶಂಭು ಹೆಗಡೆ, ಮರೆಯಲಾಗದ ಮಹಾಬಲ, ಉತ್ತರ ಕನ್ನಡ ಜಿಲ್ಲೆಯ ಪ್ರಸಂಗ ಸಾಹಿತ್ಯ ಮುಂತಾದ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ಬಿ.ಕೆ. ಮತಿಲಾಲ್‌ ಅವರ ಶಬ್ದ ಮತ್ತು ಜಗತ್ತು, ಮಧುಸೂದನ ಸರಸ್ವತಿಯವರ ಭಗವದ್ಭಕ್ತಿರಸಾಯನಂ, ಸಿದ್ಧಾಂತ ಬಿಂದು, ಗೀತಾ ಗೂಢಾರ್ಥ ದೀಪಿಕಾ, ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಚತುಃಸೂತ್ರೀ ಭಾಗದ ಅನುವಾದ ಮತ್ತು ವ್ಯಾಖ್ಯಾನವಾದ ಪರಮಾನಂದ ಸುಧಾ, ಆನಂದವರ್ಧನನ ಧ್ವನ್ಯಾಲೋಕ ಮತ್ತು ಲೋಚನ, ನಂದಿಕೇಶ್ವರನ ಅಭಿನಯ ದರ್ಪಣವೇ ಮುಂತಾದ ಕೃತಿಗಳು ಈಗಾಗಲೇ ಪ್ರಕಟವಾಗಿವೆ. ಪ್ರತ್ಯಭಿಜ್ಞಾವಿಮರ್ಶಿನಿಯ ಅನುವಾದ ನಡೆಯುತ್ತಿದೆ. ಸಂಸ್ಕೃತ ಸಾಹಿತ್ಯ, ಭಾಷೆ, ತಣ್ತೀಶಾಸ್ತ್ರಗಳಿಗೆ ಸಂಬಂಧಿಸಿದ ಅನೇಕ ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಸೀತಾವಿಯೋಗ, ತ್ರಿಶಂಕು ಚರಿತ್ರೆ, ರಾಜಾಕರಂಧಮ, ವಿಜಯೀವಿಶ್ರುತ, ಧರ್ಮದುರಂತ, ವಜ್ರಕಿರೀಟವೇ ಸೇರಿದಂತೆ ಯಕ್ಷಗಾನಕ್ಕೆ 25ಕ್ಕೂ ಅಧಿಕ ಕೃತಿ ನೀಡಿದ್ದಾರೆ. ತಾಳಮದ್ದಲೆಯ ಕಲಾವಿದರೂ ಹೌದು. ಇವರ ಸಿದ್ಧಾಂತಬಿಂದು ಕೃತಿಗೆ ಸಂಸ್ಕೃತ ವಿವಿಯಿಂದ ಪ್ರೊ.ಎಂ.ಹಿರಿಯಣ್ಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಭಾರತೀಯ ದರ್ಶನಗಳು ಮತ್ತು ಭಾಷೆ ಕೃತಿಗೆ ಪ್ರಶಸ್ತಿ ಲಭಿಸಿದೆ. ಯಕ್ಷಗಾನ ಸೇವೆಗಾಗಿ ಶೇಣಿ ಪುರಸ್ಕಾರ, ಚಿಟ್ಟಾಣಿ ಪ್ರಶಸ್ತಿ, ಸದಾನಂದ ಪ್ರಶಸ್ತಿ ಬಂದಿವೆ. ಮಾ.30ರಂದು ಶ್ರೀ ಅನಂತ ಪ್ರಶಸ್ತಿ ಕೂಡ ಪ್ರದಾನವಾಗಲಿದೆ.

Advertisement


ಸವಾಲು ಏನು?

ಯಕ್ಷಗಾನದಲ್ಲಿ ಅನೇಕ ಸವಾಲುಗಳಿವೆ. ಯಕ್ಷಗಾನ ಪ್ರದರ್ಶನಗಳು ನೈತಿಕ ಮೌಲ್ಯ ಬಿತ್ತಬೇಕು. ಆದರೆ, ಹೊಸ ಪ್ರಸಂಗಗಳು ದಾಂಗಡಿ ಇಡುತ್ತಿದೆ. ಭಾಷೆ, ನರ್ತನ, ಭಾವಾಭಿನಯಗಳೆಲ್ಲ ಮಾಯವಾಗುತ್ತಿದೆ ಎಂಬ ಆರೋಪಗಳೂ ಬಂದಿವೆ. ಯಕ್ಷಗಾನದಲ್ಲಿ ಆಗಬೇಕಾದ್ದು ಸಾಕಷ್ಟಿದೆ. ಯಕ್ಷಗಾನ ಕಲಿಯುವ ಮಕ್ಕಳಿಗೆ ಇಂಥದ್ದೇ ಪಠ್ಯ ಎಂಬುದು ಇನ್ನೂ ಇಲ್ಲ. ಯಕ್ಷಗಾನ ಕಲಾವಿದರಿಗೆ ನೆರವಾಗುವ ಯೋಜನೆಗಳೂ ಸರ್ಕಾರದಿಂದ ಇದ್ದರೂ ತಲುಪುತ್ತಿಲ್ಲ. ಕಲಾವಿದರ ಗುರುತಿನ ಚೀಟಿಗಳು, ಶಿಷ್ಯವೇತನಗಳೂ ಸಿಗುತ್ತಿಲ್ಲ. ಯಕ್ಷಗಾನ ಪ್ರದರ್ಶನಗಳಿಗೆ ಅಕಾಡೆಮಿ ಪ್ರೋತ್ಸಾಹಿಸುವ ಮೊತ್ತ ಕೂಡ ಕಡಿಮೆಯೇ ಇದೆ. ಸ್ವತಃ ಯಕ್ಷಗಾನ ಅಕಾಡೆಮಿ ಹಿರಿಯ ಕಲಾವಿದರನ್ನು ಇಟ್ಟುಕೊಂಡು ಒಂದು ಸ್ಪಷ್ಟ ತರಬೇತಿ ಶಿಬಿರ ನಡೆಸಬೇಕು. ಇದು ಶಾಸ್ತ್ರೀಯ ಕಲೆ ಎಂಬುದನ್ನು ದೃಢೀಕರಿಸುವ ಕಾರ್ಯ ಆಗಬೇಕು. ಹಳೆಯ ಭಾಗವತರ, ನರ್ತನ ಶೈಲಿಯ ದಾಖಲೀಕರಣ ಆಗಬೇಕು. ಯಕ್ಷಗಾನ ಅಕಾಡೆಮಿ ನೀಡುವ ಪ್ರಶಸ್ತಿಗಳನ್ನೂ ‘ಅರ್ಹ’ರಿಗೆ ನೀಡುವ ಕಾರ್ಯವಾಗಬೇಕು. ಯಕ್ಷಗಾನ ಸಾಹಿತ್ಯಗಳು ಇನ್ನೂ ಹಸ್ತಪ್ರತಿಯಲ್ಲೇ ಇವೆ. ಎಷ್ಟೋ ಪ್ರಸಂಗಗಳ ಪ್ರತಿಗಳೇ ಸಿಗುತ್ತಿಲ್ಲ. ಇದಕ್ಕೂ ನೆರವಾಗುವ ಕಾರ್ಯ ಆಗಬೇಕು.

ಯಕ್ಷಗಾನ ಸಾಹಿತ್ಯಗಳು ಇನ್ನೂ ಹಸ್ತಪ್ರತಿಯಲ್ಲೇ ಇವೆ. ಎಷ್ಟೋ ಪ್ರಸಂಗಗಳ ಪ್ರತಿಗಳೇ ಸಿಗುತ್ತಿಲ್ಲ. ಇದಕ್ಕೂ ನೆರವಾಗುವ ಕಾರ್ಯ ಆಗಬೇಕು. ಅಕಾಡೆಮಿಯೇ ಆಯ್ದ ಕೃತಿಗಳ ಪ್ರಕಾಶನ ಹಾಗೂ ಹಳೆಯ ಕೃತಿಗಳನ್ನು ದಾಖಲಿಸಿ ಅಗತ್ಯವುಳ್ಳವರಿಗೆ ನೀರಬೇಕು. ಮಾಡಿದಷ್ಟೂ ಮಾಡಬಹುದಾದ ಕಾರ್ಯ ನೂತನ ಅಕಾಡೆಮಿ ಹೆಗಲಿನಲ್ಲಿದೆ. ಮಾಡುವ ಕಾರ್ಯಗಳಿಗೆ ಸರಕಾರ ಕೂಡ ಉತ್ತೇಜಿಸುವ ಕಾರ್ಯ ಆಗಬೇಕು. ಯಕ್ಷಗಾನಕ್ಕೆ ಅಗತ್ಯವಾದ ಕಸೆ ಸೀರೆ ನಿರ್ಮಾಣ, ತಾಳ, ಮದ್ದಲೆ, ಚಂಡೆಗಳ ವಾದನಕ್ಕೆ ಅಗತ್ಯವಾದ ಪರಿಕರ, ವೇಷಭೂಷಣ ಸಿದ್ದತೆಗೆ ಬೇಕಾದ ಉತ್ತೇಜನಗಳೂ ಆಗಬೇಕಿದೆ.

ಎಂ.ಎ.ಹೆಗಡೆ ಅವರ ಆಯ್ಕೆ ಯೋಗ್ಯ ಆಯ್ಕೆ. ಅವರ ಅವಧಿಯಲ್ಲಿ ಹಲವು ಕಾರ್ಯಗಳು ನಡೆಯಲಿವೆ.
– ವಿ.ಉಮಾಕಾಂತ ಭಟ್ಟ, ಮೇಲುಕೋಟೆ

ದಂಟ್ಕಲ್‌ ಅವರ ಅವಧಿಯಲ್ಲಿ ಅನೇಕ ಮಾದರಿ ಕಾರ್ಯಗಳು ನಡೆಯಲಿವೆ. ಸರ್ವ ಸದಸ್ಯರಿಗೆ, ಅಧ್ಯಕ್ಷರಿಗೆ ಕೂಡ ಅಭಿನಂದನೆ ಹೇಳುತ್ತೇವೆ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ

ಯೋಗ್ಯವಾದ ಆಯ್ಕೆ. ಅಧ್ಯಕ್ಷರಾಗಲು ಸಮರ್ಥರಿರುವ ಹೆಗಡೆ ಅವರಿಗೆ ಅಭಿನಂದನೆಗಳು.
– ವಿ.ದತ್ತಮೂರ್ತಿ ಭಟ್ಟ

— ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next