Advertisement
ಪ್ರೊ. ಮುಜಾಫರ್ ಅಸ್ಸಾದಿ 1994 ರಲ್ಲಿ ಮೈಸೂರು ವಿವಿ ಸೇರುವ ಮುನ್ನ 3 ವರ್ಷಗಳ ಕಾಲ ಗೋವಾ ವಿವಿಯಲ್ಲಿದ್ದರು. ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ರೀಡರ್ ಆಗಿ ಸೇರಿದರು. ವಿಶ್ವವಿದ್ಯಾನಿಲಯದ ನಿಯಮಾವಳಿಗಳಲ್ಲಿರುವ ಅವಕಾಶವನ್ನು ಬಳಸಿಕೊಂಡು 3 ವರ್ಷಗಳ ನಂತರ ಅಂದರೆ 1997ರಲ್ಲಿ ಗೋವಾ ವಿವಿಯ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ನಂತರ ಮೈಸೂರು ವಿವಿಯಲ್ಲಿ ತಮ್ಮ ಸೇವೆ ಮುಂದುವರಿಸಿದರು. ಪ್ರೊ. ಮುಜಾಫರ್ ಅಸ್ಸಾದಿ ಅಂದು ಗೋವಾ ವಿ ವಿ ಗೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸಿರುವ ಪತ್ರ ಜೂನ್ 5 ರಂದು ಅವರಿಗೆ ಬಂದಿದೆ.
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಎಷ್ಟು ಲೋಪವಿದೆ ಎಂಬುದನ್ನು ಇದು ತೋರಿಸುತ್ತದೆ. ಇದು ಆಧುನಿಕ ತಬರನ ಕಥೆ ಎಂದು ಪ್ರೊ ಅಸ್ಸಾದಿ ಪ್ರತಿಕ್ರಿಯಿಸಿದರು. ಪ್ರೊ. ಅಸ್ಸಾದಿ ಅವರು ಈ ವರ್ಷ ನಿವೃತ್ತರಾಗಲಿದ್ದಾರೆ. ಪಿಂಚಣಿ ಇತ್ಯರ್ಥಕ್ಕಾಗಿ ಈ ಹಿಂದೆ ಅವರು ಕಾರ್ಯನಿರ್ವಹಿಸಿದ ಗೋವಾ ವಿ ವಿ ಗೆ ಮೈಸೂರು ವಿವಿ ಇತ್ತೀಚೆಗೆ ಪತ್ರ ಬರೆದ ನಂತರ ಗೋವಾ ವಿವಿ ತನ್ನ ಲೋಪದಿಂದ ಎಚ್ಚೆತ್ತು ಕೊಂಡಿದೆ. 1997ರಲ್ಲಿಯೇ ರಾಜೀನಾಮೆ ಪತ್ರ ಅಂಗೀಕರಿಸಲಾಗಿದೆ ಎಂದು ಈಗ ಪ್ರೊ. ಅಸ್ಸಾದಿ ಅವರಿಗೆ ತಿಳಿಸಿದೆ. ಗೋವಾ ವಿ ವಿ ಯಲ್ಲಿ ತಾವು ಕಾರ್ಯನಿರ್ವಹಿಸಿದ ಬಗ್ಗೆ ತಮ್ಮ ಸೇವಾ ರಿಜಿಸ್ಟರ್ ಕೂಡ ಇನ್ನು ಮೈಸೂರು ವಿ ವಿ ಗೆ ಬಂದಿಲ್ಲ ಎಂದು ಪ್ರೊ. ಮುಜಾಫರ್ ಅಸ್ಸಾದಿ ತಿಳಿಸಿದರು.