Advertisement

ನೆಲಕಚ್ಚಿದ ಕುಕ್ಕುಟೋದ್ಯಮ, ಸಂಕಷ್ಟದಲ್ಲಿ ಸಾಕಾಣಿಕೆದಾರರು!

06:00 AM Apr 11, 2018 | |

ಶಿರ್ವ: ಕರಾವಳಿಯಲ್ಲಿ ಕೋಳಿ ಸಾಕಾಣಿಕೆಯೂ ಒಂದು ಜೀವನೋಪಾಯದ ದಾರಿಯಾಗಿದೆ. ಆದರೆ  ನಾಯಿಕೊಡೆಗಳಂತೆ ಬೆಳೆಯುತ್ತಿರುವ ಇಂಟಿಗ್ರೇಷನ್‌ ಫಾರ್ಮ್ ಹಾವಳಿಯಿಂದಾಗಿ ಉತ್ಪಾದನೆ ಅಧಿಕಗೊಂಡು ಬೇಡಿಕೆ ಕಡಿಮೆಯಾಗಿದ್ದು, ಕೋಳಿಫಾರಂ ಇಟ್ಟುಕೊಂಡ ರೈತರು ನಷ್ಟದ ಹಾದಿಯಲ್ಲಿದ್ದಾರೆ.  

Advertisement

ಬೇಡಿಕೆಗಿಂತ ಉತ್ಪಾದನೆ ಜಾಸ್ತಿ
ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಉತ್ತರಕನ್ನಡದಲ್ಲಿ ಒಟ್ಟು ಸುಮಾರು 1,100 ಕೋಳಿ ಫಾರ್ಮ್ಗಳಿವೆ. ಅವುಗಳಲ್ಲಿ ಸುಮಾರು 600ರಷ್ಟು ಇಂಟಿಗ್ರೇಷನ್‌ ಫಾರ್ಮ್ಗಳಿದ್ದು, ಉಳಿದವು ಸ್ವಂತ ಫಾರ್ಮ್ಗಳಾಗಿವೆ. ಇಂಟಿಗ್ರೇಷನ್‌ ಫಾರ್ಮ್ ಹೆಚ್ಚಾಗಿರುವುದರಿಂದ ಕೋಳಿ ಉತ್ಪಾದನೆ ಜಾಸ್ತಿಯಾಗಿ ಬೇಡಿಕೆ ಕಡಿಮೆಯಾಗಿದ್ದು ಹೆಚ್ಚಿನ ರೈತರು ಸಾಲ ಬಾಧೆಯಿಂದಾಗಿ ಮನೆ ಮಠ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.  

ವಾಸ್ತವ ಸ್ಥಿತಿ ಏನು? 
ಕೆಲವು ವರ್ಷಗಳ ಹಿಂದೆ ಓರ್ವ ರೈತ ವರ್ಷಕ್ಕೆ  5 ಬ್ಯಾಚ್‌ನಲ್ಲಿ ಕೋಳಿ ಉತ್ಪಾದಿಸುತ್ತಿದ್ದು 2ರಲ್ಲಿ ನಷ್ಟ ಹೊಂದಿದರೂ 3 ಬ್ಯಾಚುಗಳಲ್ಲಿ ಲಾಭಗಳಿಸಿ ಸಮತೋಲನವಿರುತ್ತಿತ್ತು. ಅದರೆ ಪ‌ಸ್ತುತ ಒಂದೆರಡು ಬ್ಯಾಚ್‌ ಲಾಭ ಬಂದು ಉಳಿದ ಬ್ಯಾಚ್‌ಗಳಲ್ಲಿ ನಷ್ಟವಾಗಿ ರೈತರ ಸಾಲದ ಹೊರೆ ಹೆಚ್ಚುತ್ತಿದೆ. ಹೊಸತಾಗಿ ಫಾರ್ಮ್ ಪ್ರಾರಂಭಿಸುವವರಿಗೆ ಒಂದೆರಡು ವರ್ಷ ಲಾಭವಾದರೂ ಕ್ರಮೇಣ ಬ್ಯಾಕ್ಟೀರಿಯಾ, ವೈರಸ್‌ಗಳಿಂದಾಗಿ ನಷ್ಟದ ಹೊಡೆತ ಬೀಳುತ್ತದೆ. ಜತೆಗೆ ಕಟ್ಟಡವೂ ಬೇರಾವುದೇ ಕೆಲಸಕ್ಕೂ ಪ್ರಯೋಜನಕಾರಿಯಲ್ಲ. ಮೊದಮೊದಲು ಸಣ್ಣ ರೈತರನ್ನು ಪ್ರೇರೇಪಿಸುತ್ತಿದ್ದ ಕೆಲವೊಂದು ಇಂಟಿಗ್ರೇಷನ್‌ ಫಾರ್ಮ್ನವರು ಮಾರುಕಟ್ಟೆ ಅಸಮತೋಲನದಿಂದಾಗಿ ಇದೀಗ ಬ್ಯಾಚ್‌ ಕಡಿಮೆಗೊಳಿಸಿ ಸಣ್ಣ ರೈತರಿಗೆ ಹಣ ನೀಡಲು ಸತಾಯಿಸುತ್ತಿದ್ದಾರೆ. ಒಂದೆರಡು ತಿಂಗಳ ಹಿಂದೆ ಮರಿಯ ಬೆಲೆ 48 ರೂ. ಇದ್ದು  ಅದು ಬೆಳೆದು ಮಾರುಕಟ್ಟೆಗೆ ಬರುವಾಗ ರಖಂ ಬೆಲೆ ಕೆ.ಜಿ.ಗೆ 45 ಆಗಿದೆ. ಇನ್ನು ಕೋಳಿ ಮಾಂಸಕ್ಕೆ ಸೀಸನ್‌ನಲ್ಲಿ ಬೇಡಿಕೆ ಬರುವಾಗ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾದರೂ ಶೇ. 30 ಕೋಳಿಗಳು ಬಿಸಿಲಿನ ಬೇಗೆಗೆ ಸಾಯುವುದರಿಂದ ರೈತರಿಗೆ ಯಾವುದೇ ಪ್ರಯೋಜನ ವಿಲ್ಲದಂತಾಗಿದೆ.

ಕೃಷಿಯೂ ಅಲ್ಲ, ಕೈಗಾರಿಕೆಯೂ ಅಲ್ಲ
ಕೋಳಿ ಸಾಕಾಣಿಕೆ ಅತ್ತ ಕೃಷಿಯೂ ಅಲ್ಲದೆ ಇತ್ತ ಕೈಗಾರಿಕೆಯೂ ಅಲ್ಲದೆ ಅಡಕತ್ತರಿಯಲ್ಲಿ ಸಿಲುಕಿಗೊಂಡಿದೆ. ಕೃಷಿಕರಿಗೆ ಸಿಗುವ ಬೆಳೆವಿಮೆ, ಕಡಿಮೆ ದರದಲ್ಲಿ ವಿದ್ಯುತ್‌, ಸಂಕಷ್ಟದಲ್ಲಿರವವರಿಗೆ ಸಾಲಮನ್ನಾ ಇತ್ಯಾದಿ ಯಾವ ಸವಲತ್ತೂ ಸಿಗುವುದಿಲ್ಲ. ಅಲ್ಲದೆ ಕೈಗಾರಿಕೆಗೆ ಸಿಗುವ ಸಬ್ಸಿಡಿಯೂ ಸಿಗುತ್ತಿಲ್ಲ. ಆದ್ದರಿಂದ ಸರಕಾರ ಕೋಳಿ ಸಾಕಣಿಕೆದಾರರ ಹಿತವನ್ನು ಕಾಯ್ದುಕೊಳ್ಳಬೇಕು.

ಏನಿದು ಇಂಟಿಗ್ರೇಷನ್‌ ಫಾರ್ಮ್?
ರೈತರು ತಮ್ಮ ಜಮೀನಿನಲ್ಲಿ  ಫಾರ್ಮ್ ಕಟ್ಟಿಕೊಂಡು ನಿರ್ವಹಣೆ ನೋಡಿಕೊಂಡರೆ ಸಾಕು. ಕೆಲವು ದೊಡ್ಡ ಕೋಳಿ ಫಾರ್ಮ್ನವರು ಮರಿ ಹಾಗೂ ಅವುಗಳಿಗೆ ಬೇಕಾಗುವ ಆಹಾರವನ್ನು ತಂದು ಹಾಕುತ್ತಾರೆ. ಬೆಳೆದ ಕೋಳಿ ಕೆ.ಜಿ.ಗೆ  5 ರೂ.ನಂತೆ ನೀಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತಾರೆ. ಹೆಚ್ಚಿನ ರೈತರು ಲಾಭದ ಆಸೆಯಿಂದ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಾಗ ಉತ್ಪಾದನೆ ಜಾಸ್ತಿಯಾಗಿ ಬೇಡಿಕೆ ಕಡಿಮೆಯಾಗುತ್ತದೆ.

Advertisement

ಆಗಬೇಕಾದ್ದೇನು?
ಕೋಳಿ ಮರಿ ಪೂರೈಕೆ ಮಾಡುವ ಹ್ಯಾಚರೀಸ್‌ನವರಿಗೆ ಬೇಡಿಕೆಯ ಬಗ್ಗೆ ಮಾಹಿತಿ ತಿಳಿದಿರುತ್ತದೆ. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಬೇಡಿಕೆಗೆ ತಕ್ಕಂತೆ ಮರಿ ಪೂರೈಸಿ ಉತ್ಪಾದನೆ ಜಾಸ್ತಿಯಾಗದಂತೆ ನೋಡಿಕೊಳ್ಳಬೇಕು. ಪ್ರತೀ ತಿಂಗಳು ಬೇಡಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಮರಿಗಳನ್ನು ಪೂರೈಸಿ ಬೇಡಿಕೆ-ಉತ್ಪಾದನೆ-ಮಾರುಕಟ್ಟೆಯ ನಡುವೆ ಸಮತೋಲನ ಕಾಯ್ದುಕೊಂಡು ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ.

ಲೆಕ್ಕ  ತಪ್ಪಿದ್ದು  ಇಲ್ಲಿಯೇ…!
ಮೂರು-ನಾಲ್ಕು ವರ್ಷಗಳ ಹಿಂದೆ ಈ ಸಮಯದಲ್ಲೇ ರೈತರು ಕೋಳಿ ಫಾರ್ಮ್ ಗಳಿಗೆ ಮರಿ ಹಾಕುವುದನ್ನು ನಿಲ್ಲಿಸಿ ಬೇಡಿಕೆ ಮತ್ತು ಉತ್ಪಾದನೆ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿದ್ದರು. ಫಾರ್ಮ್ಗಳಿಗೆ ಮರಿ ನೀಡುವ ಹ್ಯಾಚರೀಸ್‌ಗಳು ಕೂಡ ಮರಿ ಉತ್ಪಾದನೆ ಕಡಿಮೆ ಮಾಡುತ್ತಿದ್ದರು. ಆದರೆ ಇಂಟಿಗ್ರೇಷನ್‌ಫಾರ್ಮ್ ಪದ್ಧತಿ ಬಂದ ಮೇಲೆ ಲಂಗುಲಗಾಮಿಲ್ಲದೆ ಉತ್ಪಾದನೆ ಜಾಸ್ತಿಯಾಗಿದೆ. ಮರಿ ಪೂರೈಸುತ್ತಿರುವ ಹ್ಯಾಚರೀಸ್‌ನವರಿಗೂ ದರ ಮತ್ತು ಉತ್ಪಾ ದನೆಯ ಮೇಲಿನ ಹಿಡಿತ ಕೈತಪ್ಪಿ ಹೋಗಿದೆ.

ಸರಕಾರ ರೈತರ ಹಿತ ಕಾಯಬೇಕು
ಉತ್ಪಾದನೆ ಜಾಸ್ತಿಯಾಗಿ ಬೇಡಿಕೆ ಕಡಿಮೆಯಾಗುವುದರ ಜತೆಗೆ ಕೆಲವೊಂದು ದೃಶ್ಯ ಮಾಧ್ಯಮಗಳಲ್ಲಿ ಆಧಾರ ರಹಿತ ವರದಿಗಳು ಬಿತ್ತರವಾಗಿ ಜನರಿಗೆ ತಪ್ಪುಕಲ್ಪನೆ ಮೂಡುವಂತಾಗಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳಿಂದಾಗಿ ಕೋಳಿ ಸಾಕಾಣಿಕೆದಾರರು ಸಾಲ ಬಾಧೆಯಿಂದ ಸಂಕಷ್ಟದಲ್ಲಿದ್ದು ಸರಕಾರ ರೈತರ ಹಿತವನ್ನು ಕಾಯಬೇಕಾಗಿದೆ.
ಸಚ್ಚಿದಾನಂದ ಹೆಗ್ಡೆ,   ಅಖೀಲಾ ಪೌಲ್ಟ್ರಿ ಫಾರ್ಮ್ಸ್, ಶಿರ್ವ

ಸತೀಶ್ಚಂದ್ರ ಶೆಟ್ಟಿ , ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next