ಬೆಂಗಳೂರು : ಕನ್ನಡ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದು, ಇಂದು ಭೂಮಿ ಪೂಜೆ ಕೂಡ ನೆರವೇರಿದೆ.
ಬೆಂಗಳೂರು ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದ ಸಮೀಪ ಉತ್ರಿ ಎಂಬಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಈ ಫಿಲ್ಮ್ ಸಿಟಿ ತಲೆ ಎತ್ತಲಿದೆ. ಇದಕ್ಕಾಗಿ 175 ಕೋಟಿ ರೂ. ಬಂಡವಾಳ ಹೂಡುತ್ತಿದ್ದಾರೆ ನಿರ್ಮಾಪಕರು.
ಒಂದು ವರ್ಷದಲ್ಲಿ ಫಿಲಂ ಸಿಟಿ ನಿರ್ಮಾಣವನ್ನು ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ವಿದೇಶದಿಂದ ತಂತ್ರಜ್ಞರನ್ನು ಕರೆತರಲಾಗುತ್ತಿದೆ. ಬೃಹತ್, ಅದ್ದೂರಿ, ಸಕಲ ಸೌಕರ್ಯೋಪೇತ, ಆಧುನಿತ ತಂತ್ರಜ್ಞಾನದಿಂದ ಕೂಡಿದ ಫಿಲಂಸಿಟಿ ಇದಾಗಿರಲಿದೆ.
ಹೆಬ್ಬುಲಿ ಸಿನಿಮಾ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಉಮಾಪತಿ ಇದುವರೆಗೆ ಮೂರು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಅವರ ಕೊನೆಯ ಚಿತ್ರದ ದರ್ಶನ್ ನಟನೆಯ ರಾಬರ್ಟ್. ಈ ಚಿತ್ರವೂ ಬಿಗ್ ಹಿಟ್ ಆಯಿತು. ಸದ್ಯಕ್ಕೆ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟಿಸುತ್ತಿರುವ ಮದಗಜ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ಕನ್ನಡ ಚಿತ್ರರಂಗಕ್ಕೊಂದು ಫಿಲ್ಮ ಸಿಟಿ ಬೇಕೆನ್ನುವುದು ಹಲವು ವರ್ಷಗಳ ಕನಸಾಗಿತ್ತು. ಅದು ಇದೀಗ ಉಮಾಪತಿ ಶ್ರೀನಿವಾಸ್ ಅವರಿಂದ ಸಾಕಾರಗೊಳ್ಳುತ್ತಿದೆ.