ಸಾಮಾನ್ಯವಾಗಿ ಸಿನಿಮಾ ನಟಿಯರು ಮದುವೆ ಬಳಿಕ ಹೆಚ್ಚು ಸುದ್ದಿಯಾಗಲ್ಲ. ಎಲ್ಲೋ ಬೆರಳೆಣಿಕೆ ನಟಿಯರು ಮದುವೆ ನಂತರವೂ ಸಿನಿಮಾ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಅಂತಹವರ ಸಾಲಿಗೆ ಈಗ ಮೇಘನಾರಾಜ್ ಕೂಡ ಸೇರಿದ್ದಾರೆ. ಹೌದು, ಚಿರಂಜೀವಿ ಸರ್ಜಾ ಅವರನ್ನು ವಿವಾಹವಾದ ನಂತರ ಸಿನಿಮಾದಿಂದ ಮೇಘನಾ ದೂರ ಉಳಿಯುತ್ತಾರಾ ಎಂಬ ಪ್ರಶ್ನೆ ಎಲ್ಲರಿಗೂ ಇತ್ತು.
ಆದರೆ, ಮೇಘನಾರಾಜ್ ಅದೆಲ್ಲಾ ಏನೂ ಇಲ್ಲ, ನಾನು ಮದುವೆ ನಂತರವೂ ಹಾಡಬಲ್ಲೆ, ಸಿನಿಮಾದಲ್ಲೂ ನಟಿಸಬಲ್ಲೆ ಅಷ್ಟೇ ಅಲ್ಲ, ಈಗ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಳ್ಳಬಲ್ಲೆ ಎಂಬುದನ್ನು ಸಾರಿದ್ದಾರೆ. ಮೇಘನಾರಾಜ್ ಅವರೀಗ ಮೇಘನಾ ಸಿನಿಮಾಸ್ ಬ್ಯಾನರ್ ಮೂಲಕ ನಿರ್ಮಾಪಕಿಯಾಗಿದ್ದಾರೆ. ಸದ್ದಿಲ್ಲದೆಯೇ ಅವರೀಗ ಮಕ್ಕಳ ಚಿತ್ರಕ್ಕೆ ಕೈ ಹಾಕಿದ್ದಾರೆ.
ಅವರ ನಿರ್ಮಾಣದ ಚಿತ್ರಕ್ಕೆ “ಪುಟಾಣಿ ಪಂಟರ್ಸ್’ ಎಂದು ನಾಮಕರಣ ಮಾಡಲಾಗಿದೆ. ಚಿತ್ರವನ್ನು ಪವನ್‌ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಮೇಘನಾರಾಜ್ ಅವರೊಂದಿಗೆ ಸಹ ನಿರ್ಮಾಪಕರಾಗಿ ಅಶೋಕ್ ಸುಲೇಗಾಯ್, ಜೆ.ಆರ್.ಮೋಹನ್ ಕುಮಾರ್, ಧರ್ಮಶ್ರೀ ಮಂಜುನಾಥ್, ಗೋವಿಂದ ರಾಜುಲು ಮತ್ತು ಪ್ರವೀಣ್ ಕೂಡ ಸಾಥ್ ನೀಡುತ್ತಿದ್ದಾರೆ.
ಏಪ್ರಿಲ್ 24 (ಇಂದು) ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ “ಪುಟಾಣಿ ಪಂಟರ್ಸ್’ ಚಿತ್ರಕ್ಕೂ ಚಾಲನೆ ಸಿಗುತ್ತಿದೆ. ಅಂದಹಾಗೆ, ಬನಶಂಕರಿಯಲ್ಲಿರುವ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 9 ಕ್ಕೆ ಮುಹೂರ್ತ ನೆರವೇರಲಿದೆ. ಅರ್ಜುನ್ ಸರ್ಜಾ ಅವರು ಆರಂಭ ಫಲಕ ನೀಡಿದರೆ, ಧ್ರುವ ಸರ್ಜಾ ಕ್ಯಾಮೆರಾ ಚಾಲನೆ ನೀಡುತ್ತಿದ್ದಾರೆ.
ಚಿರಂಜೀವಿ ಸರ್ಜಾ ಹಾಗೂ ಮೇಘನಾ ಜ್ಯೋತಿ ಬೆಳಗಿಸಲಿದ್ದಾರೆ. ಚಿತ್ರಕ್ಕೆ ವಸಂತಕುಮಾರ್ ಎಲ್.ಎನ್ ಸಂಗೀತವಿದೆ. ಮೀರಾ ಅವರ ಸಾಹಿತ್ಯವಿದೆ. ಚಿತ್ರದಲ್ಲಿ ಸುಂದರ್‌ರಾಜ್, ಪ್ರಮೀಳಾ ಜೋಷಾಯ್, ಸ್ಪರ್ಶ ರೇಖಾ, ರಮೇಶ್ ಪಂಡಿತ್, ರಾಜೇಶ್ ನಟರಂಗ ಇದ್ದಾರೆ. ಮಾಸ್ಟರ್ ಹೇಮಂತ್, ಮಾಸ್ಟರ್ ಹರಿಪ್ರೀತಮ್, ಮಾಸ್ಟರ್ ಸುಚೆತ್, ಬೇಬಿ ದೀಕ್ಷಾ ಮತ್ತು ಬೇಬಿ ಶಿವಾನಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಮೇಘನಾರಾಜ್ ಅವರು ಸೃಜನ್ ಲೋಕೇಶ್ ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಈಗ ಅವರೇ ತಮ್ಮ ನಿರ್ಮಾಣದ ಚಿತ್ರಕ್ಕೆ ಮುಹೂರ್ತ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಹೊಸಬಗೆಯ ಚಿತ್ರ ಕಟ್ಟಿಕೊಡುವ ಉತ್ಸಾಹದಲ್ಲಿದ್ದಾರೆ.