ಬೆಂಗಳೂರು: ಬೆಳ್ಳಿತೆರೆಯ ಪೋಷಕ ನಟಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ನಿರ್ಮಾಪಕನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿನಗರದ ಡಿ ಗ್ರೂಪ್ ಲೇಔಟ್ ನಿವಾಸಿ ಹರ್ಷವರ್ಧನ್ ಅಲಿಯಾಸ್ ವಿಜಯ್ ಭಾರ್ಗವ್ (42) ಬಂಧಿತ.
41 ವರ್ಷದ ನಟಿ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸ್ಯಾಂಡಲ್‌ವುಡ್‌ನ ಹತ್ತಾರು ಸಿನಿಮಾಗಳು ಮತ್ತು ಧಾರವಾಹಿಗಳಲ್ಲಿ ನಟಿಸುತ್ತಿರುವ 41 ವರ್ಷದ ನಟಿಗೆ ಆರೋಪಿ, ಎರಡು ವರ್ಷಗಳ ಹಿಂದೆ ಮದುವೆಯಾಗುವುದಾಗಿ ನಂಬಿಸಿ, ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಮದುವೆಯಾಗುವಂತೆ ಮನವಿ ಮಾಡಿದಾಗ, ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿಂದಿಸಿದ್ದಾನೆ. ಅಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದಾನೆ.
ಈ ಕುರಿತು ಸಂತ್ರಸ್ತೆ ಜ.27ರಂದು ದೂರು ನೀಡಿದ್ದರು. ಈ ಸಂಬಂಧ ಆರೋಪಿ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.