Advertisement

ಉದಯವಾಣಿ ವರದಿ ಫಲಶೃತಿ: ಹತ್ತಿ ಖರೀದಿದಾರರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ

08:27 PM Nov 09, 2020 | Mithun PG |

ಯಾದಗಿರಿ:  ಜಿಲ್ಲೆಯ ಹತ್ತಿ ಕೇಂದ್ರಗಳಲ್ಲಿನ ರೈತರಿಗೆ ದರದಲ್ಲಿ ಮೋಸ, ಸೂಟ್ ನೆಪದಲ್ಲಿ ರೈತರ ಕೆಲ ಕೆಜಿ ಹತ್ತಿಯನ್ನು ಕಸಿಯುತ್ತಿದ್ದ ದಲ್ಲಾಳಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಬಿಸಿ ಮುಟ್ಟಿಸಿದ್ದಾರೆ.

Advertisement

ಜಿಲ್ಲೆಯ ವಿವಿಧ ಕಡೆಗಳಲ್ಲಿ ರಸ್ತೆಯುದ್ದಕ್ಕೂ ತೆರೆದಿರುವ ಹತ್ತಿ ಕೇಂದ್ರಗಳು ರೈತರಿಂದ ಹತ್ತಿ ಖರೀದಿಸುತ್ತಿದ್ದು, ಮೊದಲೇ ಪ್ರವಾಹ, ಅತಿವೃಷ್ಟಿಯಿಂದ ತೊಂದರೆಗೀಡಾಗಿದ್ದ ರೈತರ ಗಾಯದ ಮೇಲೆ ಬರೆ ಎಳೆಯುತ್ತಿರುವ ಕುರಿತು ಉದಯವಾಣಿ ನ.8ರಂದು ವರದಿಯನ್ನು ಪ್ರಕಟಿಸಿತ್ತು.

ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ, ಸೋಮವಾರ ನಗರದ ಹೊರವಲಯದ ಮುಂಡರಗಿ ರಸ್ತೆಯ ಮೌಲಾಲಿ ಅನ್ಪುರ್ ರೈಸ್ ಮಿಲ್ ಬಳಿಯಿರುವ ಹಾಗೂ ಇಂಪಿರಿಯಲ್ ಗಾರ್ಡನ್, ಯಾದಗಿರಿ ಬಸ್ ಕಾರ್ಯಾಗಾರ ಎದುರುಗಡೆ ತೆರೆದಿರುವ ಹತ್ತಿ ಖರೀದಿ ಕೇಂದ್ರಗಳಿಗೆ ಖುದ್ದಾಗಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹತ್ತಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ತೂಕ ಮತ್ತು ಅಳತೆಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳ ಆಧಾರದಲ್ಲಿ ಅವರು ಅನಿರೀಕ್ಷಿತವಾಗಿ ನಗರದ ವಿವಿಧ ಹತ್ತಿ ಖರೀದಿ ಕೇಂದ್ರಗಳಿಗೆ ತೆರಳಿ ಅಲ್ಲಿನ ವಸ್ತುಸ್ಥಿತಿಯನ್ನು ಅವಲೋಕಿಸಿದರು.

ಹತ್ತಿ ಖರೀದಿ ಕೇಂದ್ರಗಳಿಂದ ರೈತರಿಗೆ ನೀಡಲಾದ ಬಿಲ್‌ಗಳನ್ನು ಪರಿಶೀಲಿಸಿದರು. ಈ ವೇಳೆ ಅನಧಿಕೃತ ಕಡಿತಗಳ ಮೂಲಕ ರೈತರಿಂದ ಹಣ ವಸೂಲಿ ಮಾಡುತ್ತಿರುವ ಖರೀದಿದಾರರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಂದಾಯ ನಿರೀಕ್ಷಕರು ನಾಲ್ವರು ಖರೀದಿದಾರರ ವಿರುದ್ಧ ಪ್ರಕರಣ ದಾಖಲಿಸಿರುವ ಮಾಹಿತಿ ಲಭ್ಯವಾಗಿದೆ.

Advertisement

ಕಾಯ್ದೆ ತಿದ್ದುಪಡಿಯಿಂದ ಹಲ್ಲಿಲ್ಲದ ಹಾವಿನಂತಾದ ಅಧಿಕಾರಿಗಳು: ಸರ್ಕಾರ ಕೃಷಿ ಮಾರಾಟ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದು ಕೃಷಿ ಮಾರಾಟ ಇಲಾಖೆ ಅಧಿಕಾರಿಗಳ ಪಾಡು ಹಲ್ಲಿಲ್ಲದ ಹಾವಿನಂತಾಗಿದೆ. ಅನಧಿಕೃತ ಖರೀದಿದಾರರ ಮೇಲೆ ಕ್ರಮಕೈಗೊಳ್ಳುವ ಯಾವುದೇ ಅಧಿಕಾರ ಕೃಷಿ ಮಾರುಕಟ್ಟೆ ಅಧಿಕಾರಿಗಳಿಗಿಲ್ಲ ಎನ್ನಲಾಗುತ್ತಿದೆ. ಕಳೆದ ಬಾರಿ ಅನಧಿಕೃತ ಹತ್ತಿ ಖರೀದಿ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು 23 ಲಕ್ಷಕ್ಕೂ ಅಧಿಕ ದಂಡ ವಿಧಿಸಿ 196  ಪ್ರಕರಣಗಳನ್ನು ದಾಖಲಿಸಿದ್ದರು. ಆದರೇ ಇತ್ತೀಚೆಗಷ್ಟೇ ಕಾಯ್ದೆ ತಿದ್ದುಪಡಿಯಂತೆ ಯಾರಿಗಾದರೂ ರೈತರು ತಮ್ಮ ಉತ್ಪನ್ನಗಳನ್ನು ಮಾರಬಹುದಾಗಿದ್ದು, ಕಾಯ್ದೆಯಲ್ಲಿ ಹಲವು ಸಡಿಲಿಕೆ ಇರುವುದರಿಂದ ಅಧಿಕೃತ ಪರವಾನಿಗೆ ಪಡೆಯದಿದ್ದರೂ ರೈತರಿಂದ ಖರೀದಿಸಲು ಅವಕಶಾವಿದೆ ಎಂದು ಕೃಷಿ ಮಾರಾಟ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ರೈತರು ಮತ್ತಷ್ಟು ಅನ್ಯಾಯಕ್ಕೊಳಗಾಗುವ ಆತಂಕ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next