ದಾವಣಗೆರೆ: ಇದೇ ಮೊದಲ ಬಾರಿಗೆ ನಗರದಲ್ಲಿ ನಡೆಯಲಿರುವ ಗೆಜೆಟೆಡ್ ಪ್ರೊಬೇಷನರಿ ಆಫಿಸರ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಸೂಕ್ತ ವ್ಯವಸ್ಥೆಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚಿಸಿದ್ದಾರೆ.
ಗುರುವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಪರೀಕ್ಷೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಆ.20ರಂದು ನಗರದ 39 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 15,619 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅಧಿಕಾರಿಗಳು ಎಲ್ಲಾ ಪೂರ್ವ ಸಿದ್ಧತೆಯೊಂದಿಗೆ ಕೇಂದ್ರಗಳಲ್ಲಿ ಹಾಜರಿದ್ದು ಬೆಳಗಿನ ಮತ್ತು ಮಧ್ಯಾಹ್ನದ 2 ಅವಧಿ ಯ ಪರೀಕ್ಷೆಗಳನ್ನು ಯಾವುದೇ ಲೋಪವಾಗದಂತೆ ನಡೆಸಬೇಕು ಎಂದರು.
ಅಭ್ಯರ್ಥಿಗಳು ಸಮಯಕ್ಕೆ ಮುಂಚಿತವಾಗಿ ಆಗಮಿಸಿಬೇಕು. ಈ ಬಾರಿ ಪ್ರವೇಶ ಪತ್ರದೊಂದಿಗೆ ಆಧಾರ್ ಕಾರ್ಡ್ ತರುವುದು ಕಡ್ಡಾಯ. ಆಧಾರ್ ಕಾರ್ಡ್ ಲಭ್ಯವಿಲ್ಲದಿದ್ದರೆ ಯಾವುದಾದರೂ ಒಂದು ಗುರುತಿನ ಪತ್ರ ತೋರಿಸಬೇಕು. ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣ, ಕೈಗಡಿಯಾರ ತರುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಯ ನೋಂದಣಿ ಸಂಖ್ಯೆ, ಪ್ರಶ್ನೆ ಪತ್ರಿಕೆ ಸೇರಿಸಿ ಎಲ್ಲವೂ ಮುದ್ರಣವಾಗಿರುತ್ತದೆ. ಈ ಹಿಂದಿನಂತೆ ಅಭ್ಯರ್ಥಿ ಅವುಗಳನ್ನು ತುಂಬುವಂತಿಲ್ಲ. ಅಭ್ಯರ್ಥಿ ಸಹಿ ಮಾತ್ರ ಮಾಡಬೇಕಿದೆ. ಒಂದು ವೇಳೆ ಒಎಮ್‌ಆರ್ ಪತ್ರಿಕೆಯಲ್ಲಿ ಗೊಂದಲಗಳಿದ್ದರೆ ಕೊಠಡಿ ಮೇಲ್ವಿಚಾರಕರು ಬೇರೆ ಒಎಮ್ ಆರ್ ಕೊಡುತ್ತಾರೆ. ಪ್ರತಿ ರೂಮಿಗೆ 20 ವಿದ್ಯಾರ್ಥಿಗಳಿದ್ದು, ಎಲ್ಲ ಬೆಳವಣಿಗೆಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಆಗಸ್ಟ್ 20 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮೊದಲ ಪತ್ರಿಕೆ ಹಾಗೂ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆಎರಡನೇ ಪತ್ರಿಕೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೊಠಡಿ ವಿಶಾಲವಾಗಿದ್ದಲ್ಲಿ ಪ್ರತಿ 24 ಅಭ್ಯರ್ಥಿಗಳಿಗೆ ಒಂದು ಬ್ಲಾಕ್ ಮಾಡಿ ಪ್ರತ್ಯೇಕವಾಗಿ ಸಂವೀಕ್ಷಕರನ್ನು ನೇಮಿಸಬೇಕು. ಆಯೋಗದಿಂದಅನುಮತಿ ಪಡೆದು ಲಿಪಿಕಾರರನ್ನು ಕರೆತುವಂತಹ ಅಂಧ/ದೃಷ್ಟಿಮಾಂದ್ಯ ಅಭ್ಯರ್ಥಿಗಳಿಗೆ ಪ್ರತಿ 5 ಅಭ್ಯರ್ಥಿಗಳಿಗೆ ಒಂದು ಕೊಠಡಿಯಲ್ಲಿ ಆಸನ ವ್ಯವಸ್ಥೆ ಹಾಗೂ ಪ್ರತಿ ಅಭ್ಯರ್ಥಿಗೆ ಓರ್ವ ಸಂವೀಕ್ಷಕರನ್ನು ನೇಮಿಸಬೇಕು ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿ ಕಾರಿ ಪದ್ಮ ಬಸವಂತಪ್ಪ, ಕೆಪಿಎಸ್‌ಸಿಯ ವಿಶೇಷ ಕರ್ತವ್ಯಾಧಿಕಾರಿ ಸ್ವಾಮಿ, ಪಿಯು ಉಪನಿರ್ದೇಶಕ ವಿಜಯಾನಂದ್, ಮಹಾನಗರ ಪಾಲಿಕೆ ಉಪ ಆಯುಕ್ತ ರವೀಂದ್ರ ಇತರೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.