Advertisement

ಸಂಕಷ್ಟದಲ್ಲಿ ಮೀನುಗಾರಿಕೆ; ಗೋವಾದಲ್ಲಿ  ಇಂದು ಸಭೆ

11:22 AM Oct 01, 2018 | Team Udayavani |

ಮಂಗಳೂರು: ಡೀಸೆಲ್‌ ಹಾಗೂ ಪೆಟ್ರೋಲ್‌ ಬೆಲೆಯಲ್ಲಿ ತೀವ್ರ ಏರಿಕೆ ಹಾಗೂ ಸೀಮೆ ಎಣ್ಣೆ ಸಹಾಯಧನ ರದ್ದತಿ ಮೀನುಗಾರಿಕಾ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದೆ. ದೋಣಿಗಳು ಮೀನುಗಾರಿಕೆ ಸ್ಥಗಿತಗೊಳಿಸಿ ದಕ್ಕೆ ಯಲ್ಲೇ ಉಳಿಯತೊಡಗಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮೀನುಗಾರಿಕೆ ಬಹುತೇಕ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. 

Advertisement

ಡೀಸೆಲ್‌, ಪೆಟ್ರೋಲ್‌ ಬೆಲೆಯೇರಿಕೆಯಿಂದ ದೊಡ್ಡ ಮೀನುಗಾರಿಕೆ ಬೋಟುಗಳ ಸಮಸ್ಯೆ ಒಂದು ರೀತಿಯಾದರೆ ಸೀಮೆ ಎಣ್ಣೆ  ಸಹಾಯಧನ ರದ್ದತಿ ಹಾಗೂ ಕೊರತೆಯಿಂದ ನಾಡದೋಣಿಗಳ ಮೀನುಗಾರಿಕೆ ಸಂಪೂರ್ಣವಾಗಿ ನಿಲ್ಲುವ ಹಂತಕ್ಕೆ  ತಲುಪಿದೆ. 

ಸಂಪೂರ್ಣವಾಗಿ ಸ್ಥಗಿತ ಭೀತಿ
ಸಾಂಪ್ರದಾಯಿಕ ಮೀನುಗಾರರಿಗೆ ಕಳೆದ ಕೆಲವು ವರ್ಷಗಳಿಂದ  ಸಹಾಯಧನದಲ್ಲಿ ಸೀಮೆ ಎಣ್ಣೆ ನೀಡಲಾಗುತ್ತಿತ್ತು. ಆದರೆ ಕೇಂದ್ರ ಸರಕಾರ ಪಡಿತರ ವ್ಯವಸ್ಥೆಯಲ್ಲಿ ಕೇವಲ ಅಡುಗೆ ಉದ್ದೇಶಕ್ಕೆ ಮಾತ್ರ ಸೀಮೆ ಎಣ್ಣೆಯನ್ನು ಒದಗಿಸಿ ಇತರ ಉದ್ದೇಶಕ್ಕೆ  ನಿಲ್ಲಿಸಿದ ಪರಿಣಾಮ ನಾಡದೋಣಿ ಮೀನುಗಾರರಿಗೆ ಸಮಸ್ಯೆ ಎದುರಾಯಿತು. ಕಳೆದ 2 ವರ್ಷಗಳಲ್ಲಿ ರಾಜ್ಯ ಸರಕಾರ ಸಬ್ಸಿಡಿ ದರದಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಸೀಮೆ ಎಣ್ಣೆ  ಪೂರೈಸುತ್ತಿತ್ತು. ಈ ವರ್ಷ ಈವರೆಗೆ ಮೀನುಗಾರರಿಗೆ ಸೀಮೆ ಎಣ್ಣೆ ಪೂರೈಕೆಯಾಗಿಲ್ಲ. ಇದರಿಂದಾಗಿ ಸುಮಾರು ಅರ್ಧದಷ್ಟು  ದೋಣಿಗಳು ಮೀನುಗಾರಿಕೆಯನ್ನು ಈಗಾಗಲೇ ಸಂಪೂರ್ಣ ನಿಲ್ಲಿಸಿವೆ. ಸರಕಾರದ ವತಿಯಿಂದ ಸಹಾಯ ಧನದಲ್ಲಿ ಸೀಮೆ ಎಣ್ಣೆ ಪೂರೈಕೆಯಾಗ‌ದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ನಾಡದೋಣಿಗಳ ಮೀನುಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಸೀಮೆ ಎಣ್ಣೆ ಪೂರೈಕೆ ಸ್ಥಗಿತ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರರು ತಮ್ಮ  ದೋಣಿ ಗಳನ್ನು ಸೀಮೆಎಣ್ಣೆಯಿಂದ ಡೀಸೆಲ್‌ ಎಂಜಿನ್‌ಗೆ ಪರಿವರ್ತಿಸಬೇಕು ಎಂದು ಸರಕಾರ ಹೇಳುತ್ತಿದೆ. ಆದರೆ ಡೀಸೆಲ್‌ ಎಂಜಿನ್‌ಗೆ ಸುಮಾರು 1.7 ಲಕ್ಷ ರೂ. ವೆಚ್ಚವಾಗುತ್ತದೆ.ಇದಲ್ಲದೆ ಇದರ ನಿರ್ವಹಣಾ ವೆಚ್ಚವು ಅಧಿಕವಾಗಿರುತ್ತದೆ. ಸಣ್ಣ ಮೀನುಗಾರರಿಗೆ ಇದರ ವೆಚ್ಚ ಭರಿಸಲು ಸಾಧ್ಯವಾಗಲಾರದು ಎಂಬುದು ನಾಡದೋಣಿ ಮೀನುಗಾರರ ಅಭಿಪ್ರಾಯವಾಗಿದೆ.

ಗೋವಾದಲ್ಲಿ  ಸಭೆ
ಡೀಸೆಲ್‌, ಪೆಟ್ರೋಲ್‌ ಬೆಲೆ ಏರಿಕೆ ಮತ್ತು ಸೀಮೆ ಎಣ್ಣೆ ಸಹಾಯಧ‌ನ ರದ್ದತಿಯಿಂದಾಗಿ ಯಾಂತ್ರಿಕ ದೋಣಿ ಹಾಗೂ ನಾಡದೋಣಿ ಮೀನುಗಾರಿಕೆ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಇತರ ಬೇಡಿಕೆಗಳ ಕುರಿತು ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲು ಅ. 1ರಂದು ಪಶ್ಚಿಮ ಕರಾವಳಿ ರಾಜ್ಯಗಳ ಮೀನುಗಾರರ ಸಂಘಟನೆಗಳ ಪ್ರತಿನಿಧಿಗಳ ಸಭೆ ಆಯೋಜಿಸಲಾಗಿದೆ. ಗೋವಾದ ಸಭೆಯ ಕುರಿತಂತೆ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಸೆ. 30ರಂದು ತುರ್ತು ಸಭೆ ನಡೆಸಿ ಚರ್ಚಿಸಿದೆ. ಸಭೆಯಲ್ಲಿ ಭಾಗವಹಿಸಲು ಪದಾಧಿಕಾರಿಗಳು ಗೋವಾಕ್ಕೆ ತೆರಳಿದ್ದಾರೆ.

Advertisement

ಡೀಸೆಲ್‌ ಹಾಗೂ ಪೆಟ್ರೋಲ್‌ ಬೆಲೆಯಲ್ಲಿ ವಿಪರೀತ ಏರಿಕೆಯಿಂದಾಗಿ ಮೀನುಗಾರಿಕೆ ನಡೆಸಲು ಅಸಾಧ್ಯವಾದ ಸ್ಥಿತಿ ಉಂಟಾಗಿದೆ. ಮೀನುಗಾರಿಕಾ ದೋಣಿಗಳು ಮೀನುಗಾರಿಕೆ ಸœಗಿತಗೊಳಿಸಿ ದಕ್ಕೆಯಲ್ಲಿ ಉಳಿಯಲು ಆರಂಭಿಸಿವೆ. ಸರಕಾರ ಕೂಡಲೇ ಕ್ರಮ ಕೈಗೊಂಡು ಮೀನುಗಾರಿಕೆ ಕ್ಷೇತ್ರದ ಉಳಿವಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಚರ್ಚಿಸಲು ಅ.1 ರಂದು ಗೋವಾದಲ್ಲಿ  ಪಶ್ಚಿಮ ಕರಾವಳಿ ರಾಜ್ಯಗಳ ಮೀನುಗಾರರ ಸಂಘಟನೆಗಳ ಸಭೆ ಆಯೋಜನೆಗೊಂಡಿದೆ.
ಮನೋಹರ ಬೋಳೂರು, ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ

ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ಪೂರೈಕೆ ಸ್ಥಗಿತಗೊಂಡಿರುವುದರಿಂದ ನಾಡದೋಣಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ಇದರಿಂದ ಈ ಕ್ಷೇತ್ರವನ್ನು  ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿರುವ ಲಕ್ಷಾಂತರ ಮಂದಿ ಮೀನುಗಾರರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಸರಕಾರ ಕೂಡಲೇ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ಪೂರೈಸಿ ನಾಡದೋಣಿ ಮೀನುಗಾರಿಕಾ ಕ್ಷೇತ್ರವನ್ನು  ಉಳಿಸಬೇಕು.
ಸುಭಾಷ್‌ಚಂದ್ರ ಕಾಂಚನ್‌, ಗಿಲ್‌ನೆಟ್‌ ಮೀನುಗಾರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next