ಮಾಲೂರು: ಪಟ್ಟಣದ ಅರಳೇರಿ ರಸ್ತೆಯಲ್ಲಿ ಇತ್ತೀಚಿಗೆ ಆರಂಭವಾಗಿರುವ ಬಾರ್ ನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಾಗಿ ದೂರು ನೀಡಿರುವ ಕಾರಣದಿಂದ ಲೋಕಾಯುಕ್ತ ಅಧಿಕಾರಿಗಳು-ಅಬಕಾರಿ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿದರು. ಪಟ್ಟಣದ ಅರಳೇರಿ ರಸ್ತೆಯಲ್ಲಿ ಕಳೆದ 5-6 ತಿಂಗಳ ಹಿಂದೆ ಪಟ್ಟಣದ ಹೊಸಕೋಟೆ ರಸ್ತೆಯಲ್ಲಿದ್ದ ಸಿ.ಎಲ್-9 ಪರವಾನಗಿಯ ಗಾಯಿತ್ರಿ ಬಾರ್‌ನ್ನು ಅರಳೇರಿ ರಸ್ತೆ ವರ್ಗಾಯಿಸಿದ್ದರು.
ಇದರಿಂದಾಗಿ ಮಹಿಳೆಯರು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ನಿವೃತ್ತ ಕಂದಾಯ ನಿರೀಕ್ಷಕ ತಿಬ್ಬಯ್ಯ ಮತ್ತು ನಿವೃತ್ತ ಶಿಕ್ಷಕ ಮರಿಯಪ್ಪ ಅವರು ಕಂದಾಯ ಇಲಾಖೆ, ಅಬಕಾರಿ ಇಲಾಖೆ, ಲೋಕಾಯುಕ್ತರಿಗೆ ದೂರು ನೀಡಿದ್ದರು. ಹೀಗಾಗಿ ಲೋಕಾಯುಕ್ತ ಎಂಜನಿಯರಿಂಗ್ ವಿಭಾಗದ ನಾಗರತ್ನ, ರಮಾಮಣಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.
ದೂರುದಾರರು ನೀಡಿರುವ ದೂರಿನಂತೆ ಬಾರ್‌ನ ಸ್ಥಳದಿಂದ ಶಾಲಾ ಕಟ್ಟಡ ಮತ್ತು ಪುರಸಭಾ ಉದ್ಯಾನವನದ ವರೆಗೂ ಅಳತೆ ಮಾಡಿ ಪರಿಶೀಲಿಸಿ ಅಬಕಾರಿ ನಿಯಮಂತೆ ಎರಡೂ ಸ್ಥಳಗಳು 100 ಮೀಟರ್‌ಗಿಂತ ದೂರದಲ್ಲಿರುವುದಾಗಿ ತಿಳಿಸಿದರು.
ಸ್ಥಳದಲ್ಲಿದ್ದ ದೂರುದಾರ ತಿಬ್ಬಯ್ಯರಿಂದ ಮಾಹಿತಿ ಪಡೆಯುವ ವೇಳೆ ಪಟ್ಟಣದ ಹೊಸಕೋಟೆ ರಸ್ತೆಯ ಗಾಯಿತ್ರಿ ಬಾರ್‌ನ್ನು ಅರಳೇರಿ ರಸ್ತೆಗೆ ಸ್ಥಳಾಂತರ ಮಾಡಿದ್ದು ಒಂದೇ ಪರವಾನಗಿಯಲ್ಲಿ 2 ಕಡೆ ಬಾರ್ ನಡೆಸುತ್ತಿರುವುದಾಗಿ ದೂರಿದರು. ಶಾಲಾ ಕಟ್ಟಡ ಮತ್ತು ಉದ್ಯಾನವನಗಳಿಗೆ ದೂರದಲ್ಲಿದೆ ಎನ್ನುವ ಮಾತ್ರಕ್ಕೆ ಬಾರ್ ನೀಡುವುದು ಸರಿಯಲ್ಲ ಎಂದು ದೂರಿದರು.
ಈ ವೇಳೆಗೆ ದಾರಿಯಲ್ಲಿ ಬಂದ ಮಹಿಳೆಯೊಬ್ಬರು ತಾವು ಹೊಸದಾಗಿ ನಿರ್ಮಿಸುತ್ತಿರುವ ಮನೆ ಸಮೀಪ ಕೆಲವು ಕುಡುಕರು ಬಯಲಿನಲ್ಲಿ ಪಾನಗೋಷ್ಠಿ ನಡೆಸುತ್ತಾರೆ. ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು. ಗಾಯಿತ್ರಿ ಬಾರ್‌ನ ಮಾಲಿಕ ಎಂ.ಪಿ.ನಾಗರಾಜು ಮಾತನಾಡಿ, ನಮ್ಮ ಬಾರ್‌ನಲ್ಲಿ ಕುಡಿಯಲು ಮಾತ್ರ ಮದ್ಯ ನೀಡುತ್ತಿದ್ದೇವೆ. ಹೊರಗಡೆ ತೆಗೆದುಕೊಂಡ ಹೋಗಲು ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಅಬಕಾರಿ ಡಿವೈಎಸ್‌ಪಿ ಕ್ಯಾಪ್ಟನ್ ಅಜಿತ್‌ಕುಮಾರ್ ಮಾತನಾಡಿ, ಮಾಲೂರು ಪಟ್ಟಣದ ಹೊಸಕೋಟೆ ರಸ್ತೆಯಲ್ಲಿದ್ದ ಸಿ.ಎಲ್-9ರ ಗಾಯಿತ್ರಿ ಬಾರ್‌ನ್ನು ಕೋರಿಕೆಯಂತೆ ನಿಯಮಾನುಸಾರ ಅರಳೇರಿ ರಸ್ತೆಗೆ ಸ್ಥಳಾಂತರ ಮಾಡಲಾಗಿದೆ.
ಹೊಸಕೋಟೆ ರಸ್ತೆಯ ಗಾಯಿತ್ರಿ ಬಾರ್ ಮತ್ತು ರೆಸ್ಟೋರೆಂಟ್ ಸಿ.ಎಲ್-7ರ ಪರವಾನಗಿಯಾಗಿದೆ. ಅಲ್ಲಿ ಪ್ರವಾಸೋದ್ಯಮ ಇಲಾಖೆ ಶಿಫಾರಸ್ಸಿನ ಮೇರೆಗೆ ಪರವಾನಗಿ ನೀಡಲಾಗಿದೆ ಎಂದರು. ಅಬಕಾರಿ ನಿರೀಕ್ಷಕ ರವೀಂದ್ರ, ಸಬ್‌ಇನ್ಸ್‌ಪೆಕ್ಟರ್ ಶಿವಶಂಕರ್, ಲೋಕಾಯುಕ್ತ ನಾಗರತ್ನ ಇದ್ದರು.