Advertisement

ಈಸ್ಟ್‌ ಬ್ಲಾಕ್‌ ವಾರ್ಡ್‌ನಲ್ಲಿ  ಸಮಸ್ಯೆಗಳ ಸರಮಾಲೆ​​​​​​​

06:05 AM Jun 17, 2018 | |

ಕುಂದಾಪುರ: ನೀರು ಹರಿಯಲು ಸರಿಯಾದ ತೋಡಿನ ವ್ಯವಸ್ಥೆ ಇಲ್ಲ. ಇರುವ ಎರಡು ಸಾರ್ವಜನಿಕ ಶೌಚಾಲಯಕ್ಕೆ ಕಳೆದ 3 ದಿನಗಳಿಂದ ನೀರಿನ ವ್ಯವಸ್ಥೆಯಿಲ್ಲ. ಪಂಚ ಗಂಗಾವಳಿ ನದಿಯ ದಡದಲ್ಲಿ ಶೇಖರಣೆಯಾದ ಕಸ ತೆಗೆಯುವವರಿಲ್ಲ. ಪುರಸಭೆಯಾಡಳಿತಕ್ಕೆ ದೂರಿತ್ತರೆ ಕೇಳುವವರೇ ಇಲ್ಲ.  ಇದು ಪುರಸಭೆ ವ್ಯಾಪ್ತಿಯ 4 ನೇ ವಾರ್ಡ್‌ ಆಗಿರುವ ಈಸ್ಟ್‌ಬ್ಲಾಕ್‌ ವಾರ್ಡ್‌ ನಲ್ಲಿರುವ ಸಾಲು- ಸಾಲು ಸಮಸ್ಯೆಗಳ ಸರಮಾಲೆಯ ಪಟ್ಟಿ. 

Advertisement

ಈ ವಾರ್ಡ್‌ನಲ್ಲಿ ಕುಂದಾಪುರ ಹೊಸ ಬಸ್‌ ನಿಲ್ದಾಣ ಕಡೆಯಿಂದ ಹರಿದು ಬರುವ ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ. ಶ್ರೀ ನಾಗಜಟ್ಟಿಗೇಶ್ವರ ದೇವಸ್ಥಾನದವರೆಗೆ ನೀರು ಹರಿದು ಹೋಗುತ್ತಿದ್ದು, ಅಲ್ಲಿಂದ ಮುಂದಕ್ಕೆ ನೀರು ಹೋಗಲು ತೋಡಿನ ವ್ಯವಸ್ಥೆಯಿಲ್ಲ. 

ಮನೆಯೊಳಗೆ ಮಳೆ ನೀರು
ಖಾರ್ವಿಕೇರಿ ವಾರ್ಡಿನ ಶ್ರೀ ನಾಗಜಟ್ಟಿಗೇಶ್ವರ ದೇವಸ್ಥಾನದಿಂದ ಮತ್ತೆ ತೋಡಿನ ವ್ಯವಸ್ಥೆಯಿಲ್ಲದ ಕಾರಣ ಭಾರೀ ಮಳೆ ಬಂದಾಗ ಅಲ್ಲಿಯವರೆಗೆ ಹರಿದು ಬಂದ ನೀರು ಅಕ್ಕ-ಪಕ್ಕದ ಮನೆಗಳಿಗೆ ನುಗ್ಗುತ್ತವೆ. ಇದರಿಂದ ನಿತ್ಯ ಈ ಭಾಗದ ನಿವಾಸಿಗಳು ಸಂಕಷ್ಟ ಪಡುತ್ತಿದ್ದಾರೆ.  

ಫೂಟೋಗಷ್ಟೇ ಸ್ವತ್ಛತೆ
ಪುರಸಭೆ ವತಿಯಿಂದ ಸ್ವತ್ಛತಾ ಸಪ್ತಾಹದಡಿ ದಿನಕ್ಕೊಂದು ವಾರ್ಡಿನಲ್ಲಿ  ಚರಂಡಿ-ತೋಡುಗಳ ಸ್ವತ್ಛತೆ ನಡೆಯುತ್ತಿದೆ. ಆದರೆ ಇದು ಬರೀ ಫೂಟೋ, ಪ್ರಚಾರಕ್ಕೆ ಮಾತ್ರ ಮಾಡುತ್ತಿದ್ದಾರೆ.  ಮೊನ್ನೆ ಪುರಸಭೆಯಾಡಳಿತದಿಂದ ಸ್ವತ್ಛತಾ ಕಾರ್ಯ ಮಾಡಿದರೂ, ಕೇವಲ 10 ನಿಮಿಷ ಮಾಡಿ, ಫೂಟೋ ತೆಗೆದುಕೊಂಡು ಹೋಗಿದ್ದಾರಷ್ಟೇ. ಕಸ, ಕಡ್ಡಿಗಳು ಮಾತ್ರ ಹಾಗೇ ಇವೆ. ಪಂಚಗಂಗಾವಳಿ ನದಿಯ ದಡದಲ್ಲಿ ಕಸದ ರಾಶಿ ಇದೆ. ಅದನ್ನು ತೆಗೆಯುವ ಕೆಲಸ ಮೊದಲು ಮಾಡಲಿ ಎಂದು ಇಲ್ಲಿನ ನಿವಾಸಿಗರು ಆಗ್ರಹಿಸಿದ್ದಾರೆ. 

ಸಮಸ್ಯೆ ನೂರಾರು
ಈ ವಾರ್ಡಿನಲ್ಲಿರುವ ಸುಮಾರು 100 ಮನೆಗಳಲ್ಲಿ ಕೆಲವೇ ಕೆಲವು ಮನೆಗಳಿಗೆ ಮಾತ್ರ ಶೌಚಾಲಯವಿದೆ. ಬಾಕಿ ಉಳಿದವರು ಪುರಸಭೆ ನಿರ್ಮಿಸಿದ ಸಾರ್ವಜನಿಕ ಶೌಚಾಲಯವನ್ನೇ ಬಳಸುತ್ತಿದ್ದಾರೆ. ಆದರೆ ಅಲ್ಲಿ ನೀರಿನ ಸಮಸ್ಯೆ, ಬಾಗಿಲಿಗೆ ಲಾಕ್‌ ಇಲ್ಲ, ಕರೆಂಟಿಲ್ಲ ಹೀಗೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ. 

Advertisement

ಇನ್ನೂ ಆರಂಭವಾಗಿಲ್ಲ
ಒಳಚರಂಡಿ ಕಾಮಗಾರಿ ಎಲ್ಲ ಕಡೆ ಆಗಿಲ್ಲ. ಒಟ್ಟು ಶೇ. 70 ರಷ್ಟು ಪೈಪ್‌ಲೈನ್‌ ಮಾತ್ರ ಆಗಿದೆಯಷ್ಟೇ. ವೆಟ್‌ವೆಲ್‌ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಎಲ್ಲ ವಾರ್ಡ್‌ಗೂ ಈ ಸಮಸ್ಯೆಯಿದೆ. ಜಪ್ತಿಯಲ್ಲಿ ಕರೆಂಟ್‌ ಸಮಸ್ಯೆಯಿಂದಾಗಿ ನೀರು ಪೂರೈಕೆ ಆಗಿರಲಿಲ್ಲ. ಇದರಿಂದ ಸಮಸ್ಯೆಯಾಗಿತ್ತು. 
-ರವಿರಾಜ್‌ ಖಾರ್ವಿ,
ವಾರ್ಡ್‌ ಸದಸ್ಯರು

ಪರಿಹರಿಸಿ
ನಮ್ಮ ವಾರ್ಡಿನ ಮುಖ್ಯ ಸಮಸ್ಯೆಯೆಂದರೆ ತೋಡಿಲ್ಲದಿರುವುದು. ತೋಡಿನ ನೀರೆಲ್ಲ ಮನೆಯೊಳಗೆ ನುಗ್ಗುತ್ತಿದೆ. ಆದಷ್ಟು ಬೇಗ ಇದನ್ನೊಂದು ಪರಿಹಾರ ಮಾಡಿಕೊಡಲಿ. 
-ನಾರಾಯಣ ಪಟೇಲ್‌, 
ಸ್ಥಳೀಯರು

ಹೇಳಿ ಸಾಕಾಯಿತು
ಇಡೀ ಕುಂದಾಪುರ ಪೇಟೆಯ ನೀರೆಲ್ಲ ಈ ನಮ್ಮ ವಾರ್ಡಿಗೆ ಹರಿದು ಬರುತ್ತಿದ್ದರೂ, ಅದಕ್ಕೆ ಪೂರಕವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸದಸ್ಯರಿಗೆ ಹೇಳಿ ಹೇಳಿ ಸಾಕಾಯಿತು. 
– ಉದಯ, ಸ್ಥಳೀಯರು

ತಲೆಗೆ ಹಾಕಿಕೊಳ್ಳುವುದಿಲ್ಲ
ಈ ವಾರ್ಡಿನ ಕೆಲಸ -ಕಾರ್ಯಗಳಿಗೆ ಸಾಕಷ್ಟು ಅನುದಾನ ಬಂದಿದ್ದರೂ, ಅದನ್ನು ಬೇರೆ ವಾರ್ಡ್‌ ಗಳಿಗೆ ಬಳಕೆ ಮಾಡಿದ್ದಾರೆ. ಪ್ರತಿ ಬಾರಿಯೂ ಈ ವಾರ್ಡನ್ನು ನಿರ್ಲಕ್ಷé ಮಾಡುತ್ತಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ಎಷ್ಟು ಹೇಳಿದರೂ ತಲೆಗೆ ಹಾಕಿಕೊಳ್ಳುವುದಿಲ್ಲ. ಕೊಳಚೆ ನೀರು ಹರಿದು ಹೋಗುವ ಚರಂಡಿಗೆ ಮುಚ್ಚುವ ಕಾರ್ಯವೇ ಆಗಿಲ್ಲ. 
– ಸತೀಶ್‌ ಪಟೇಲ್‌,ಸ್ಥಳೀಯರು

ಗಮನವೇ ಕೊಡುವುದಿಲ್ಲ
23 ವಾರ್ಡ್‌ಗಳ ಪೈಕಿ ಈ ಖಾರ್ವಿಕೇರಿ ವಾರ್ಡಿನಲ್ಲಿ ಒಳಚರಂಡಿ ಕಾಮಗಾರಿಯೇ ಆಗಿಲ್ಲ. ನೀರು ಹರಿದು ಹೋಗುತ್ತಿಲ್ಲ. ಈ ಬಗ್ಗೆ ಯಾರೂ ಕೂಡ ಗಮನವೇ ಕೊಡುವುದಿಲ್ಲ. 
– ದಿನೇಶ್‌ ಖಾರ್ವಿ,ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next