Advertisement
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರ ಹಾಗೂ ಪುತ್ತೂರು ತಾಲೂಕು ಕೇಂದ್ರದಿಂದ ಸರಿಸುಮಾರು ಒಂದೇ ಅಂತರದಲ್ಲಿ ಇರುವ ಈ 2 ತಾಲೂಕುಗಳ ಗಡಿಭಾಗದ ಇಳಂತಿಲ ಗ್ರಾಮ ಹಲವು ಮೂಲಸೌಕರ್ಯಗಳು ಇಲ್ಲದಂತಿರುವ ಗ್ರಾಮಗಳಲ್ಲಿ ಒಂದು.
Related Articles
Advertisement
ಒಳ ರಸ್ತೆಗಳ ಅಭಿವೃದ್ಧಿ ಕುರಿತಾಗಿ ಸುಮಾರು 25 ವರ್ಷಗಳಿಂದ ಪ್ರತೀ ಬಾರಿ ಶಾಸಕರಿಗೆ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ಮತ ಯಾಚನೆಗೆ ಬಂದಾಗ ಮನವರಿಕೆ ಮಾಡಿದರೂ ಭರವಸೆ ಮಾತ್ರ ಸಿಕ್ಕಿದೆ ಹೊರತು ಕಾರ್ಯವಾಗಿಲ್ಲ ಎಂಬ ಗಂಭೀರ ದೂರು ಇಲ್ಲಿನವರದು. ಪೆದಮಲೆ -ಅಂಡೆತ್ತಡ್ಕ- ಇಳಂತಿಲ ರಸ್ತೆಯೂ ತೀರಾ ಹಾಳಾಗಿದೆ.
ಕುಡಿಯುವ ನೀರಿನ ಸಮಸ್ಯೆ :
ಜೀವ ನದಿ ನೇತ್ರಾವತಿಯ ಮಡಿಲಲ್ಲೇ ಗ್ರಾಮ ಇದ್ದರೂ ಬೇಸಗೆ ಬಂತೆಂದರೆ ಕಡವಿನ ಬಾಗಿಲು, ಪೆರ್ಲಾಪು ಮುಂತಾದ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತಿದೆ. ಈ ಪ್ರದೇಶದಲ್ಲಿ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆಗೆ ಕ್ರಮಕೈಗೊಂಡಿದ್ದರೂ ಬೇಸಗೆಯಲ್ಲಿ ನೀರಿನ ಮೂಲವೇ ಬತ್ತುವುದು ಇಲ್ಲಿನ ಸಮಸ್ಯೆಯ ಮೂಲ.
ಕಾಡು ಪ್ರಾಣಿಗಳ ಕಾಟ :
ಕೃಷಿಯೇ ಪ್ರಧಾನವಾದ ಈ ಗ್ರಾಮದಲ್ಲಿ ಈಗ ಕಾಡುಪ್ರಾಣಿಗಳ ಕಾಟ ಅಧಿಕವಾಗಿದೆ. ಮರ, ಗಿಡದಲ್ಲಿ ಬೆಳೆದ ಬೆಳೆ ಮಂಗಗಳ ಪಾಲಾದರೆ ಅವುಗಳಿಂದ ಉಳಿದು ನೆಲಕ್ಕೆ ಬಿದ್ದರೆ ಹಂದಿಗಳು ರೆಡಿ. ತೋಟದಲ್ಲಿ ಗಿಡ ನೆಟ್ಟರೆ ಅವುಗಳ ಬುಡವನ್ನು ಆಹಾರ ಅರಸಿ ಬಂದ ಹಂದಿಗಳು ಅಗೆದು ಗಿಡ ಬೆಳೆಯಲೇ ಅವಕಾಶ ನೀಡುತ್ತಿಲ್ಲ. ಕಾಡುಪ್ರಾಣಿಗಳ ಕಾಟದ ಕುರಿತು ಅರಣ್ಯ ಇಲಾಖೆಗೆ ದೂರಿದರೂ ಈ ವರೆಗೆ ಪ್ರಯೋಜನ ಆಗಿಲ್ಲ ಎನ್ನುತ್ತಿದ್ದಾರೆ ಕೃಷಿಕರು.
ನೆಟ್ ವರ್ಕ್ ಸಮಸ್ಯೆ :
ನೆಟ್ ವರ್ಕ್ ಸಮಸ್ಯೆ ಈ ಗ್ರಾಮವನ್ನೂ ಬಿಟ್ಟಿಲ್ಲ. ಇದರಿಂದಾಗಿ ಪಡಿತರಕ್ಕಾಗಿ ಒಂದು ಕುಟುಂಬವು ಹಲವು ಬಾರಿ ನ್ಯಾಯಬೆಲೆ ಅಂಗಡಿ ಬಾಗಿಲಿಗೆ ಹೋಗಬೇಕಾದ ಸ್ಥಿತಿ ಇದೆ. ಆನ್ ಲೈನ್ ಶಿಕ್ಷಣ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿಗಳ ಪರದಾಟ ಹೇಳತೀರದಾಗಿದೆ.
ಖಾಯಂ ಪಿಡಿಒ ಇಲ್ಲ :
ಇಳಂತಿಲ ಗ್ರಾ. ಪಂ.ಗೆ ವಿವಿಧ ಕಾರ್ಯ ನಿಮಿತ್ತ ತೆರಳಿದರೆ ಪೂರ್ಣಕಾಲಿಕೆ ಪಿಡಿಒ ಇಲ್ಲದೆ ಸಮಸ್ಯೆ ಸೃಷ್ಟಿಯಾಗಿದೆ.
ನೇಜಿಕಾರಿನಲ್ಲಿ ಇರುವ ಅಕ್ಷರ ಕರಾವಳಿ ಕಟ್ಟಡವೊಂದು ಇಂದೋ ನಾಳೆಯೊ ಕುಸಿಯುವ ಹಂತ ತಲುಪಿದೆ.
ಪ್ರಾ.ಆ. ಕೇಂದ್ರ ಬೇಕು :
ಗ್ರಾಮದ ಜನ ಆರೋಗ್ಯ ಸಮಸ್ಯೆಗೊಳಗಾದರೆ ಕಣಿಯೂರು ಅಥವಾ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. “ಉಳ್ಳವರು’ ತಮಗೆ ಬೇಕಾದ ವೈದ್ಯರ ಬಳಿ ತಮ್ಮದೇ ವಾಹನದಲ್ಲಿ ತೆರಳುತ್ತಾರೆ. ಈ ಗ್ರಾಮ ಕೇಂದ್ರದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಕನಿಷ್ಠ ಉಪ ಆರೋಗ್ಯ ಕೇಂದ್ರವಾದರೂ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪಶು ಆರೋಗ್ಯ ಕೇಂದ್ರವೂ ಬೇಕೆಂಬುದು ಇಲ್ಲಿನವರ ಬೇಡಿಕೆ ಪಟ್ಟಿಯಲ್ಲಿದೆ.
ಘನತ್ಯಾಜ್ಯ ಘಟಕ :
ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾದರೂ ಅದರ ಉದ್ಘಾಟನೆ ಆಗಿಲ್ಲ. ತ್ಯಾಜ್ಯ ನಿರ್ವಹಣೆ ಈಗ ಸಮರ್ಪಕವಾಗಿಲ್ಲ. ಗ್ರಾಮದ ಜನರಿಗಿಂತಲು ಹೆಚ್ಚಾಗಿ ಗ್ರಾಮದ ಮೂಲಕ ವಾಹನಗಳಲ್ಲಿ ಹಾದು ಹೋಗುವ ಜನರು ತಮ್ಮ ಮನೆಯ ತ್ಯಾಜ್ಯವನ್ನು ರಸ್ತೆ ಬದಿ ಎಸೆದು ಹೋಗುವುದು ಈ ಗ್ರಾಮದ ಮುಖ್ಯ ಸಮಸ್ಯೆಗಳಲ್ಲಿ ಒಂದು.
-ಎಂ.ಎಸ್. ಭಟ್ ಉಪ್ಪಿನಂಗಡಿ