Advertisement

ದೇಲಂಪುರಿ ದೇಗುಲಕ್ಕೆ ಬರಲು ಸುತ್ತುಬಳಸಬೇಕು

07:48 PM Aug 24, 2021 | Team Udayavani |

ವೇಣೂರು ಗ್ರಾ.ಪಂ. ವ್ಯಾಪ್ತಿಯ ಮೂಡುಕೋಡಿಯಲ್ಲಿ ಹಲವು ಸಮಸ್ಯೆಗಳಿವೆ. ಸಮರ್ಪಕ ರಸ್ತೆ ಇಲ್ಲದಿರುವುದು, ನೆಟ್‌ವರ್ಕ್‌ ಕೊರತೆ ಇಲ್ಲಿ ಸಮಸ್ಯೆ ತಂದಿತ್ತದರೆ ಚರಂಡಿ ಅವ್ಯವಸ್ಥೆಯಿಂದ ನೀರು ರಸ್ತೆಯಲ್ಲೇ ಹರಿದು ಹೂಳುಗಳೆಲ್ಲ ತುಂಬಿ ಹಂಪ್ಸ್‌ನಂತಹ ರಚನೆಯಾಗಿರುವುದು ಸುಗಮ ಸಂಚಾರಕ್ಕೆ ತಡೆಯುಂಟು ಮಾಡಿದೆ. ಒಟ್ಟಿನಲ್ಲಿ ಮೂಡುಕೋಡಿಯ ಚಿತ್ರಣ ಇಂದಿನ ಒಂದು ಊರು; ಹಲವು ದೂರು ಅಂಕಣದಲ್ಲಿ.

Advertisement

ವೇಣೂರು: ಒಂದು ಕಿ.ಮೀ. ದೂರದಲ್ಲಿರುವ ದೇವಸ್ಥಾನ. ಆದರೆ ಐದಾರು ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯತೆ. ವೇಣೂರು ಗ್ರಾ.ಪಂ. ವ್ಯಾಪ್ತಿಯ ಮೂಡುಕೋಡಿ ಗ್ರಾಮಸ್ಥರನ್ನು ಇಂಥದ್ದೊಂದು ಸಮಸ್ಯೆ ಕಾಡಲು ಶುರುವಾಗಿದೆ.

ಮೂಡುಕೋಡಿ ಗ್ರಾಮಕ್ಕೆ ಹತ್ತಿರ ಇರುವ ಪ್ರಸಿದ್ಧ ದೇವಸ್ಥಾನ ದೇಲಂಪುರಿ. ಸ್ಥಳೀಯ ಕರಿಮಣೇಲು ಗ್ರಾಮದಲ್ಲಿರುವ ಈ ದೇವಸ್ಥಾನಕ್ಕೆ ತೆರಳಲು ಮೂಡು ಕೋಡಿಯಿಂದ ವ್ಯವಸ್ಥಿತ ರಸ್ತೆ ಸಂಪರ್ಕ ಇಲ್ಲ. ಇದ್ದ ಕಾಲುದಾರಿಯೂ ಇತ್ತೀಚೆಗೆ ಖಾಸಗಿಯವರ ಪಾಲಾಗಿದೆ. ಹೀಗಾಗಿ ದೇಗುಲಕ್ಕೆ ತೆರಳಲು ನಮಗೊಂದು ರಸ್ತೆ ಸಂಪರ್ಕವನ್ನು ಕಲ್ಪಿಸಿಕೊಡಿ ಎಂದು ಇಲ್ಲಿನ ಜನತೆ ಅವಲತ್ತುಕೊಂಡಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಅವಕಾಶ:

ದೇಲಂಪುರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭ ಆಗಿದ್ದು, ನಮಗೆ ಸಕ್ರೀಯವಾಗಿ ಪಾಲ್ಗೊಳ್ಳಲು ಸಂಚಾರದ ತೊಡಕಿನಿಂದ ಸಾಧ್ಯವಾಗುತ್ತಿಲ್ಲ ಎನ್ನುವುದು ಇಲ್ಲಿನ ಬಹುಜನತೆಯ ಅಭಿಪ್ರಾಯ. ಕರಿಮಣೇಲು ಗ್ರಾಮದಲ್ಲಿರುವ ಹಿ.ಪ್ರಾ. ಶಾಲೆಗೂ ತೆರಳಲು ಮೂಡುಕೋಡಿ ಗ್ರಾಮದ ವಿದ್ಯಾರ್ಥಿಗಳನ್ನು ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಎಂಬಂತೆ ಮೂಡುಕೋಡಿಯ ಕೊಪ್ಪದಬಾಕಿಮಾರು ಪ್ರದೇಶದ ಪ್ರಮುಖ ರಸ್ತೆಯಿಂದ ದೇಲಂಪುರಿಗೆ ಕೇವಲ 1 ಕಿ.ಮೀ. ಅಂತರದಲ್ಲಿ ಸಂಪರ್ಕ ಕಲ್ಪಿಸಲು ಅವಕಾಶ ಇದೆ. ಅದಕ್ಕೆ ಇಲ್ಲಿರುವ ಪ್ರಭಾವಿ ಜನಪ್ರತಿನಿ ಧಿಗಳು ಮನಸ್ಸು ಮಾಡಬೇಕಷ್ಟೆ.

Advertisement

ಇಲ್ಲದ ಚರಂಡಿ ವ್ಯವಸ್ಥೆ:

ಮೂಡುಕೋಡಿಯ ಪ್ರಮುಖ ರಸ್ತೆಗಳಿಗೂ ಚರಂಡಿ ವ್ಯವಸ್ಥೆ ಇಲ್ಲ. ನಾರಡ್ಕ, ಪರಾರಿ, ಕೊಳಂಗಜೆ-ನೆಲ್ಲಿಗುಡ್ಡೆ, ನಡ್ತಿಕಲ್ಲು-ಮಠ ಹಾಗೂ ಪುತ್ತಿಲಕಜೆ ಎಸ್‌ಸಿ ಕಾಲನಿ ರಸ್ತೆ ಮುಂದುವರಿದ ಭಾಗ ಅಭಿವೃದ್ಧಿಯಾಗಬೇಕಿದೆ. ಗುಡ್ಡಗಳಿಂದ ನೀರು ಕಲ್ಲುಮಣ್ಣುಗಳ ಜತೆ ನೇರವಾಗಿ ರಸ್ತೆಗೆ ಹರಿದು ಅಲ್ಲಲ್ಲಿ ಹಂಪ್ಸ್‌ನಂತೆ ನಿರ್ಮಾಣ ಆಗಿದೆ. ಇದು ವಾಹನ ಸವಾರರಿಗೆ ಅಪಾಯವನ್ನುಂಟು ಮಾಡುತ್ತಿದೆ. ಕೆಲವೆಡೆ ಚರಂಡಿ ಇದ್ದರೂ ನಿರ್ವಹಣೆ ಇಲ್ಲದೆ ಹೂಳು ತುಂಬಿವೆ. ಇದರಿಂದ ಮಳೆನೀರು ರಸ್ತೆಯಲ್ಲೇ ಹರಿಯುತ್ತಿರುವುದು ಕಂಡು ಬರುತ್ತಿದೆ.

ವಾಹನ ಸೌಲಭ್ಯದ ಬೇಡಿಕೆ:

ಮೂಡುಕೋಡಿ-ನೆಲ್ಲಿಂಗೇರಿ ಸಂಪರ್ಕ ರಸ್ತೆಗೆ ಇದ್ದ ಬಸ್‌ನ ಸೌಲಭ್ಯ ಐದು ವರ್ಷಗಳಿಂದ ಇಲ್ಲವಾಗಿದೆ. ಸಂಚಾರಿ ವ್ಯವಸ್ಥೆಯ ಪಡಿತರ ವಿತರಣೆಗೆ ಮೂಡು ಕೋಡಿಯಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ರಿûಾ ಪಾರ್ಕಿಂಗ್‌ ಎನ್ನುವುದು ಈ ಗ್ರಾಮದಲ್ಲಿ ಇಲ್ಲದೇ ಇರುವುದರಿಂದ ಸಾಮಗ್ರಿಗಳನ್ನು ಮನೆಗೆ ಕೊಂಡೊಯ್ಯಲು 3 ಕಿ.ಮೀ. ದೂರದ ವೇಣೂರಿನಿಂದ ರಿಕ್ಷಾಗಳನ್ನು ತರಿಸಬೇಕಿದೆ. ಬೆದ್ರಡ್ಡದಲ್ಲಿ ಆಟೋ ರಿಕ್ಷಾ ನಿಲ್ದಾಣವೊಂದು ಆದರೆ ಅನುಕೂಲ ಎನ್ನುತ್ತಾರೆ ಸ್ಥಳೀಯರು.

ಕುಡಿಯುವ ನೀರಿನ ಸಮಸ್ಯೆ:

ಮಟ್ಟು, ಪಾಲ್ದಡ್ಕ ಪರಿಸರದಲ್ಲಿ ಕುಡಿ ಯುವ ನೀರಿನ ಸಮಸ್ಯೆ ಇದ್ದು, ಗ್ರಾ.ಪಂ.ನಿಂದ ಕೊಳವೆಬಾವಿ ತೆಗೆಯ ಲಾಗಿದೆ. ಆದರೆ ಇನ್ನೂ ಪೈಪ್‌ಲೈನ್‌ ಸಂಪರ್ಕ ಆಗಬೇಕಾಗಿರುವುದರಿಂದ ಸಮಸ್ಯೆ ಪೂರ್ಣ ನಿವಾರಣೆ ಆಗಿಲ್ಲ. ಮಳೆಗಾಲ ಮುಗಿದ ಬಳಿಕ ಪೈಪ್‌ಲೈನ್‌ ವಿಸ್ತರಣೆಗೆ ಕ್ರಮ ಕೈಗೊಳ್ಳಲಿ ಎನ್ನುವುದು ಗ್ರಾಮಸ್ಥರ ಮನವಿ.

ನೆಟ್‌ವರ್ಕ್‌ ಸಮಸ್ಯೆ:

ವೇಣೂರು, ಸುತ್ತಲಿನ ಗ್ರಾಮಗಳಲ್ಲಿ ಐದಾರು ಟವರ್‌ಗಳು ಇದ್ದರೂ ಮೂಡುಕೋಡಿ ಗ್ರಾಮದ ಕೆದ್ದು, ನೆಲ್ಲಿಗುಡ್ಡೆ, ನಾರಡ್ಕ, ಮಟ್ಟು, ದೈಪಾಲಬೆಟ್ಟು, ಕಲ್ಲತ್ತಿ, ಕಡಂಬಿಲ, ಪುತ್ತಿಲಕಜೆ ಬಹುತೇಕ ನೆಟ್‌ವರ್ಕ್‌ನಿಂದ ದೂರ ಉಳಿದಿವೆ. ಮೂಡುಕೋಡಿ, ಪರಾರಿ, ಪಂಜಾಲಬೈಲು, ಉಂಬೆಟ್ಟು, ಮಠ, ಕೊಪ್ಪದಬಾಕಿಮಾರು ಪ್ರದೇಶದಲ್ಲಿ ಅಲ್ಪಸ್ವಲ್ಪ ನೆಟ್‌ವರ್ಕ್‌ ಗೋಚರವಾಗುತ್ತಾದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎನ್ನುವುದು ಗ್ರಾಮಸ್ಥರ ಗೋಳು. ಒಟ್ಟಿನಲ್ಲಿ ಗ್ರಾಮದ ಬಹುಪಾಲು ನೆಟ್‌ವರ್ಕ್‌ನಿಂದ ವಂಚಿತವಾಗಿದೆ. ಆನ್‌ಲೈನ್‌ ತರಗತಿಗೆ ವಿದ್ಯಾರ್ಥಿಗಳು, ವರ್ಕ್‌ ಫÅಮ್‌ ಹೋಂನ ಉದ್ಯೋಗಿಗಳು ಪ್ರತಿದಿನ ನೆಟ್‌ವರ್ಕ್‌ಗಾಗಿ ಬಂಡೆ ಏರುವುದು ಸಾಮಾನ್ಯ ಎಂಬಂತಾಗಿದೆ.

ಇದ್ದ ನೆಟ್‌ವರ್ಕ್‌ ಮಾಯ! :

ಟವರ್‌ ಇರುವ ನಡ್ತಿಕಲ್ಲು ಪ್ರದೇಶದಿಂದ ನೆಟ್‌ವರ್ಕ್‌ ಇಲ್ಲದ ಪ್ರದೇಶಗಳಿಗೆ ಹೆಚ್ಚುಕಮ್ಮಿ ಒಂದೂವರೆ ಕಿ.ಮೀ. ಅಂತರ. ಆದರೂ ನೆಟ್‌ವರ್ಕ್‌ ನೆಟ್ಟಗಿಲ್ಲದೆ ಟವರ್‌ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಟವರ್‌ ನಿರ್ಮಾಣದ ಮೊದಲು ಅಂಡಿಂಜೆಯಲ್ಲಿರುವ ಬಿಎಸ್ಸೆನ್ನೆಲ್‌ ಟವರ್‌ನಿಂದ ಅಲ್ಪ ಪ್ರಮಾಣದ ನೆಟ್‌ವರ್ಕ್‌ ಇತ್ತು. ಈಗ ಅದೂ ಇಲ್ಲದಂತಾಗಿದೆ ಎನ್ನುತ್ತಾರೆ ಇಲ್ಲಿನ ನಾಗರಿಕರು. ತಗ್ಗು ಪ್ರದೇಶದಲ್ಲಿ ನಿರ್ಮಿಸಲಾದ ಟವರ್‌ನಿಂದ ಮೂಡುಕೋಡಿ ಗ್ರಾಮದಲ್ಲಿ ಸಮಸ್ಯೆ ಜೀವಂತವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

 

ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next