ಹಾವೇರಿ: ಐದು ಸಾವಿರ ರೂ. ಆಸೆಗಾಗಿ ಲಾರಿ ಚಾಲಕ ಮಾಡಿದ ಎಡವಟ್ಟಿನಿಂದ ಇಡೀ ಜಿಲ್ಲೆ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಹೌದು. ಮುಂಬಯಿಗೆ ಮೆಣಸಿನಕಾಯಿ ಲೋಡ್ ಮಾಡಿಕೊಂಡು ಹೋಗಿದ್ದ ಲಾರಿ ಚಾಲಕ, ಬರುವಾಗ ಮೂವರನ್ನು ಕರೆದುಕೊಂಡು ಬಂದಿದ್ದೇ ಎಡವಟ್ಟಾಯಿತು. ಲಾರಿ ಚಾಲಕ ಗೌಪ್ಯವಾಗಿ ಕರೆದುಕೊಂಡ ಬಂದ ಮೂವರಲ್ಲಿ ಈಗ ಒಬ್ಬನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಜನರು ಚಾಲಕನಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸೋಂಕು ಪತ್ತೆಯಾಗುತ್ತಿದ್ದಂತೆ ಗ್ರಾಪಂ ಉಪಾಧ್ಯಕ್ಷರೊಬ್ಬರು ಚಾಲಕನಿಗೆ ದೂರವಾಣಿ ಕರೆ ಮಾಡಿದಾಗಚಾಲಕ, ತಾನು ಲಾರಿಯ ಕ್ಯಾಬಿನ್ ಮೇಲೆ ಮಲಗಿಸಿಕೊಂಡು ಕರೆದುಕೊಂಡು ಬಂದಿದ್ದೇನೆ. ಅವರೊಂದಿಗೆ ನಾನು ಯಾವುದೇ ಸಂಪರ್ಕ ಹೊಂದಿಲ್ಲ. ಅವರಿಂದ 5000 ರೂ. ಪಡೆದಿದ್ದು ಅದನ್ನು ಡಬ್ಬಿಯಲ್ಲಿ ಹಾಕಿಸಿಕೊಂಡು, ಬಳಿಕ ತೊಳೆದು ಅದನ್ನು ಬಳಸಿದ್ದೇನೆಂದು ಹೇಳಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸವಣೂರು ಲಾಕ್: ಸ್ಥಳೀಯರೊಬ್ಬರಿಗೆ ಕೋವಿಡ್ ದೃಢಪಟ್ಟಿದೆ ಎಂಬ ಸುದ್ದಿ ಸವಣೂರು ಪಟ್ಟಣದವರನ್ನು ಬೆಚ್ಚಿಬೀಳುವಂತೆ ಮಾಡಿದೆ. ಲಾಕ್‌ಡೌನ್ ಇನ್ನಷ್ಟು ಬಿಗಿಯಾಗಿದೆ. ಸಡಿಲಿಸಿದ್ದ ಕೆಲ ನಿರ್ಬಂಧಗಳನ್ನು ಮುಂದುವರಿಸಲಾಗಿದೆ. ಎಸ್.ಎಂ. ಕೃಷ್ಣ ನಗರ ಹಾಗೂ ರಾಜೀವಗಾಂಧಿ ನಗರಗಳಿಗೆ ಬ್ಯಾರಿಕೇಡ್ ಹಾಕಿ ಸೀಲ್‌ಡೌನ್ ಮಾಡಲಾಗಿದ್ದು ವಾಹನ-ಜನ ಸಂಚಾರವನ್ನು ನಿಷೇಧಿಸಲಾಗಿದೆ. ಯಾರೂ ಮನೆಯಿಂದ ಹೊರಗೆ ಓಡಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಹೋಗಿ ಆರೋಗ್ಯ ತಪಾಸಣೆ ಆರಂಭಿಸಿದ್ದಾರೆ. ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆರಂಭಿಸಲಾಗಿದೆ.
24/7 ಕಂಟ್ರೋಲ್ ರೂಂ ಮಾಡಿದ್ದು ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮೊಬೈಲ್ ನಂಬರ್, ದಿನಸಿ, ತರಕಾರಿ, ಔಷಧಿಗಾಗಿ ಸಂಪರ್ಕಿಸುವ ನಂಬರ್ ಹಾಗೂ ಈ ಸಂದರ್ಭದಲ್ಲಿ ಪಾಲಿಸುವ ನಿಯಮ, ಮುಂಜಾಗ್ರತಾ ಕ್ರಮ ಕುರಿತ ಮಾಹಿತಿ ಕರಪತ್ರ ಮುದ್ರಿಸಿ ಮನೆ ಮನೆಗೆ ಹಂಚಲಾಗುತ್ತಿದೆ. ಸೀಲ್‌ಡೌನ್ ಪ್ರದೇಶದಲ್ಲಿ ನಿತ್ಯ
ಸ್ವತ್ಛತೆ ಕಾರ್ಯ ನಡೆದಿದೆ.
● ಅನ್ನಪೂರ್ಣ ಮುದಕಮ್ಮನವರ, ಸಹಾಯಕ ಆಯುಕ್ತರು, ಸವಣೂರು