Advertisement

ಸ್ತ್ರೀವಾದಿ ವಿಮರ್ಶೆಗೆ ಸಮಸ್ಯಾತ್ಮಕ ಸ್ಥಿತಿ ನಿರ್ಮಾಣ: ಡಾ|ತಾರಿಣಿ ಶ

12:04 PM Jan 04, 2019 | |

ಚಿತ್ರದುರ್ಗ: ಸ್ತ್ರೀವಾದಿ ವಿಮರ್ಶೆ ರಾಜಕೀಯ ಅಸ್ಮಿತೆ, ಅನನ್ಯತೆ, ಚಾರಿತ್ರಿಕ ನೆಲೆಗಟ್ಟಿನಲ್ಲಿ ರೂಪುಗೊಂಡಿದೆ ಎಂದು ವಿಮರ್ಶಕಿ ಡಾ| ಆರ್‌. ತಾರಿಣಿ ಶುಭದಾಯಿನಿ ಹೇಳಿದರು. ನಗರದ ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಲ್ಯಾಣಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಮರ್ಶಾ ಕಮ್ಮಟದಲ್ಲಿ ಸ್ತ್ರೀವಾದಿ ವಿಮರ್ಶೆ ಮತ್ತು ಸ್ವರೂಪ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

Advertisement

ಇಂದಿಗೂ ಸ್ತ್ರೀವಾದಕ್ಕೆ ಖಚಿತತೆಯೇ ಇಲ್ಲ. ಚಾರಿತ್ರಿಕವಾಗಿ ಗಮನಿಸುವುದಾದರೆ ಅದು ಪಾಶ್ಚಿಮಾತ್ಯರಿಂದ ಬಂದಿದೆ. ಪ್ರಸ್ತುತ ಸ್ತ್ರೀವಾದಿ ವಿಮರ್ಶೆ ಅಮೂರ್ತ ನೆಲೆಯಲ್ಲಿನ ಸಮಸ್ಯಾತ್ಮಕ ಸ್ಥಿತಿಯಲ್ಲಿದೆ. ಅದರ ಜೊತೆಗೆ ಗಡಿ ಹಾಗೂ ತಾತ್ವಿಕ ಪರಿಭಾಷೆಯ
ಸವಾಲುಗಳನ್ನು ಕನ್ನಡ ವಿಮರ್ಶೆ ಎದುರಿಸುತ್ತಿದೆ. ಕೃತಿ, ಕೃತಿಕಾರ ಹಾಗೂ ಸಮಾಜ ಕೇಂದ್ರಿತವಾಗಿ ಮೂಲ ಅಂಶಗಳ ಆಧಾರದ ಮೇಲೆ ವಿಮರ್ಶೆ ಮಾಡಲಾಗುತ್ತದೆ. ಇತ್ತೀಚೆಗೆ ಸಮಾಜ ಕೇಂದ್ರಿತ ವಿಮರ್ಶೆ ಮಾಡಲಾಗುತ್ತಿದ್ದು, ಈ ವಿಮರ್ಶೆಯಲ್ಲಿ ಜ್ಞಾನ, ಶಿಸ್ತುಗಳನ್ನು ಅಳವಡಿಸುವಾಗ ಸಮಸ್ಯೆಗಳು ಉದ್ಭವವಾಗುತ್ತಿವೆ ಎಂದರು.

ರಾಜಕೀಯ ಅಂಶಗಳಿಂದ ಪ್ರೇರೇಪಿತವಾಗಿರುವುದರಿಂದ ಸ್ತ್ರೀವಾದ ಹಾಗೂ ವಿಮರ್ಶೆ ಚರ್ಚಿತವಾಗುತ್ತಿಲ್ಲ. ಯಾವುದೇ ಲೇಖಕಿಯ
ಬಗ್ಗೆ ಚರ್ಚೆ ಮಾಡುವಾಗ ಆಕೆಯ ಪೂರ್ವಾಪರ ವಿಚಾರ, ಮಾಹಿತಿಯನ್ನು ತಿಳಿದುಕೊಂಡು ಕೃತಿಯನ್ನು ವಿಮರ್ಶೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಸಾಹಿತ್ಯ ರಚನೆಗೆ ಪ್ರೇರಣೆಯನ್ನು ಸಹ ಗಣನೆಗೆ ತೆಗೆದುಕೊಂಡು ಚರ್ಚಿಸಲಾಗುತ್ತಿದೆ. ಇಂತಹ ವಿಮರ್ಶೆ ಒಳ್ಳೆಯದೋ ಅಥವಾ ಕೆಟ್ಟ ವಿಮರ್ಶೆಯೋ ಗೊತ್ತಿಲ್ಲ, ಇಂದಿಗೂ ಸಹ ಸ್ತ್ರೀವಾದಿ ವಿಮರ್ಶೆಯಲ್ಲಿ ಅನೇಕ ಕವಲುಗಳಿರುವುದನ್ನು, ಬಹುತ್ವ ಮತ್ತು ಸಂಕೀರ್ಣದ ಅಸ್ಮಿತೆಗಳಿರುವುದನ್ನು ಕಾಣಬಹುದು ಎಂದು ತಿಳಿಸಿದರು.

ಸಾಂಸ್ಕೃತಿಕ ಅಧ್ಯಯನ ಆಯಾಮದ ಕುರಿತು ಚಿಂತಕ ಡಾ| ರಹಮತ್‌ ತರೀಕೆರೆ ಮಾತನಾಡಿ, ಅಧಿಕಾರಸ್ಥರು ಮೇಲ್ಜಾತಿಯ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ದಮನಿತರ ಮೇಲೆ ಅಧಿಕಾರ ಚಲಾಯಿಸುವ ಸಾಧನವಾಗಿಯೂ ಸಂಸ್ಕೃತಿ
ಬಳಕೆಯಾಗುತ್ತಿದೆ ಎಂದು ವಿಷಾದಿಸಿದರು. ರಾಜ್ಯದಲ್ಲಿ ಹಲವು ಬಗೆಯ ಕನ್ನಡ ಹಾಸುಹೊಕ್ಕಾಗಿದೆ.

ಇಂತಹ ನೆಲದಲ್ಲಿ ಊರುಗಳ ಹೆಸರುಗಳನ್ನು ಬದಲಾಯಿಸುವ, ಧಾರ್ಮಿಕ ಸಂಕೇತಗಳನ್ನು ಅಳಿಸಿ ಹಾಕುವ ಹುನ್ನಾರ ನಡೆಯುತ್ತಿವೆ. ರಾಷ್ಟ್ರದ ಸಂಸ್ಕೃತಿ ಹಲವು ಭಾಷೆ, ಆಹಾರ ಕ್ರಮ ಹಾಗೂ ಜೀವನ ಕ್ರಮಗಳನ್ನು ಒಳಗೊಂಡಿದೆ. ಸಾಂಸ್ಕೃತಿಕ ರಾಜಕಾರಣ
ಏಕಸಂಸ್ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಹೇರುತ್ತಿದೆ ಎಂದರು.

Advertisement

ಇಂದಿನ ದಿನಮಾನಗಳಲ್ಲಿ ದೇಶದ ಸಂಸ್ಕೃತಿ, ಧರ್ಮ, ಆಹಾರದ ಹೆಸರಿನಲ್ಲಿ ಆಕ್ರಮಣಕಾರಿ ಸ್ವರೂಪ ಪಡೆದುಕೊಂಡಿದೆ. ಆಹಾರ ಸಂಸ್ಕೃತಿ ಸೂಕ್ಷ್ಮವಾಗುತ್ತಿದೆ. ಮಾಂಸಾಹಾರ ಸೇವಿಸುವವರ ಮೇಲೆ ದಾಳಿಗಳು ನಡೆಯುತ್ತಿವೆ. ಸಸ್ಯಾಹಾರ ಫ್ಯಾಸಿಸಂ ಭಾಗವಾಗುತ್ತಿದೆ. ಮಾಂಸ ಸೇವಿಸಿ ದೇಗುಲ ಪ್ರವೇಶ ಮಾಡದಂತೆ ಅಲಿಖೀತ ನೀತಿ ರೂಪಿಸಲಾಗಿದೆ ಎಂದು ಹೇಳಿದರು.

ದೇಶದ ವ್ಯವಸ್ಥೆಯಲ್ಲಿಂದು ಪ್ರತಿ ಜಾತಿಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ನಾಯಕನನ್ನು ಸೃಷ್ಟಿ ಮಾಡಿಕೊಳ್ಳುತ್ತಿವೆ. ಇದನ್ನು ಆಧರಿಸಿ ರಾಜಕೀಯ ಆಶೋತ್ತರ ಈಡೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಅನೇಕರು ಈ ಬದಲಾವಣೆಯ ಮೇಲೆ ಸಂಶೋಧನೆ
ನಡೆಸಿದ್ದಾರೆ. ಜಾತಿ ಪ್ರಜ್ಞೆ ಜಾಗೃತವಾಗಿದ್ದು ಬಹಿರಂಗವಾಗಿ ಪ್ರಕಟಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.  ಶಿಕ್ಷಣ, ವಿಚಾರಧಾರೆಯ ರೂಪದಲ್ಲಿ ಆಧುನಿಕತೆ ಭಾರತವನ್ನು ಪ್ರವೇಶಿಸಿದೆ. ಅದರ ವಿಕಾರ ಸ್ವರೂಪವನ್ನು ತಡೆಯುವುದು ಕಷ್ಟ. ಸಣ್ಣ ಸಮುದಾಯದ ಸಂಸ್ಕೃತಿಯನ್ನು ಗುರುತಿಸುವ ಕೆಲಸವನ್ನು ಶಂಭಾ ಜೋಷಿ ಹಾಗೂ ಬರಗೂರು ರಾಮಚಂದ್ರಪ್ಪ ಮಾಡಿದ್ದಾರೆ. ಅವರ
ಅಧ್ಯಯನವನ್ನು ವಿಮಶಾìತ್ಮಕವಾಗಿ ನೋಡಬೇಕೇ ಹೊರತು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಾರದು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಎಸ್‌. ಕರಿಯಪ್ಪ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಬಿ.ಎಂ. ಗುರುನಾಥ್‌, ದಂಡಪ್ಪ, ಕಮ್ಮಟದ ನಿರ್ದೇಶಕ ಡಾ| ಎಸ್‌. ಮಾರುತಿ, ಡಾ| ಎಸ್‌.ಎಂ. ಮುತ್ತಯ್ಯ, ಆಯೋಜಕರಾದ ರವಿ, ಯಶೋಧರ ಗುಳಾ, ವಸಂತ್‌, ಪ್ರೊ| ಪುಷ್ಪಲತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next