Advertisement
ಕಟಪಾಡಿ: ತುಳುನಾಡಿನ ರಾಜಧಾನಿಯಾಗಿ ಗುರುತಿಸಲ್ಪಟ್ಟಿದ್ದ ಉದ್ಯಾವರ ಗ್ರಾಮದ ಪಡುಕರೆ, ಕನಕೋಡ, ತೆಂಕೊಪ್ಲ ಪ್ರದೇಶವು ಉದ್ಯಾವರ ಪೇಟೆಗೆ ಬಲು ದೂರದಲ್ಲಿದೆ. ಗ್ರಾಮಾಡಳಿತದ ಕೇಂದ್ರ ಬಿಂದುವಾಗಿರುವ ಪಂಚಾಯತನ್ನು ತಲುಪಲು ಸುಮಾರು ಹತ್ತು ಕಿ.ಮೀ. ಸುತ್ತುಬಳಸಿ ತಲುಪಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದೆ.
Related Articles
Advertisement
ಗ್ರಾಮ ಕೇಂದ್ರದಿಂದ 10 ಕಿ.ಮೀ. ದೂರ :
ಪಡುಕರೆ, ಕನಕೋಡ, ತೆಂಕೊಪ್ಲ ಭಾಗದ ಗ್ರಾಮಸ್ಥರಿಗೆ ಯಾವುದೇ ಸರಕಾರಿ ಸವಲತ್ತುಗಳನ್ನು ಪಡೆಯಲು ಉದ್ಯಾವರ ಗ್ರಾ.ಪಂ., ಮೆಸ್ಕಾಂ ಕಚೇರಿ, ಪಶುವೈದ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಿಕ್ಷಣ, ಶಾಲೆಗಳು, ಬ್ಯಾಂಕ್, ಅಂಚೆ ಕಚೇರಿ, ಸಹಿತ ಇತರ ಸರಕಾರಿ ಕಚೇರಿಗಳಿಗೆ ಸೌಲಭ್ಯ ಕ್ಕಾಗಿ ಉದ್ಯಾವರವನ್ನು ತಲುಪಲು ಸುಮಾರು 10 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಾದ ಅನಿವಾರ್ಯ ಇದೆ.
ಇಲ್ಲಿನ ಗ್ರಾಮಸ್ಥರು ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟು ಸೇತುವೆಯ ಮೂಲಕ (ಲಘು ವಾಹನ ಬಳಕೆ ಮಾತ್ರ ಸಾಧ್ಯ) ಕಟಪಾಡಿ ಪೇಟೆಗೆ ತಲುಪಿ ಮತ್ತೆ ರಾಷ್ಟ್ರೀಯ ಹೆದ್ದಾರಿ 66ರ ಮೂಲಕವೇ ಉದ್ಯಾವರವನ್ನು ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಮತ್ತೂಂದೆಡೆ ದೂರದ ಮಲ್ಪೆ ಭಾಗಕ್ಕೆ ಸಂಚರಿಸಬೇಕಾದರೆ ಕಿದಿಯೂರು, ಕಡೆಕಾರು ಭಾಗವಾಗಿ ಸುತ್ತುಬಳಸಿ ಕ್ರಮಿಸಬೇಕಾಗಿದೆ.
ಸೇತುವೆಯೇ ಪರಿಹಾರ :
ಈ ಮೊದಲು ಪಡುಕರೆ ಭಾಗದ ಸಂಪರ್ಕಕ್ಕೆ ದೋಣಿಯನ್ನು ಬಳಸಲಾಗುತ್ತಿದ್ದು ಮಳೆಗಾಲದಲ್ಲಿ ಗಾಳಿ ಮತ್ತು ಹೊಳೆಯ ಆಳವು ಅಪಾಯಕಾರಿಯಾಗಿದ್ದು ಕಳೆದ ಸುಮಾರು 9 ವರ್ಷಗಳ ಹಿಂದೆಯೇ ಇದನ್ನು ನಿಲ್ಲಿಸಲಾಗಿದೆ. ಪಡುಕರೆ ಪ್ರದೇಶವನ್ನು ಸುವ್ಯವಸ್ಥಿತಗೊಳಿಸಲು ಪಿತ್ರೋಡಿ-ಕಲಾೖಬೈಲು ಭಾಗದಿಂದ ಸುಮಾರು 300 ಮೀ.ನಷ್ಟು ಉದ್ದದ ಸುವ್ಯವಸ್ಥಿತ ಸಂಪರ್ಕ ಸೇತುವೆ ನಿರ್ಮಾಣವಾದಲ್ಲಿ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಲು ಸಾಧ್ಯ. ಆಗ ಪಡುಕರೆಯು ಉದ್ಯಾವರಕ್ಕೆ ಬಹಳಷ್ಟು ಹತ್ತಿರವಾಗುತ್ತದೆ. ಇಲ್ಲಿನವರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.
ದರ್ಬಾರ್ ನಿಲ್ಲಿಸಿದ ಶಾಲೆ :
ಈ ಭಾಗದಲ್ಲಿ ಯಾವುದೇ ಶಾಲೆಗಳು ಕಾರ್ಯಾಚರಿಸುತ್ತಿಲ್ಲ. ಇದ್ದ 1 ಸರಕಾರಿ ಹಿರಿಯ ಪ್ರಾಥಮಿಕ (ದರ್ಬಾರ್) ಶಾಲೆಯು ತನ್ನ ದರ್ಬಾರನ್ನು ನಿಲ್ಲಿಸಿದೆ. ಇದೀಗ ಮತಗಟ್ಟೆ ಯಾಗಿ ಚುನಾವಣೆಯ ಸಂದರ್ಭ ಮಾತ್ರ ಬಳಕೆಯಾಗುತ್ತಿದೆ.
ಪ್ರವಾಸಿಗರಿಗೂ ಅನುಕೂಲ :
ಕಡಲ್ಕೊರೆತ, ನದಿ ಕೊರೆತ ಸಹಿತ ಇತರೇ ತುರ್ತು ಸಂದರ್ಭಗಳಲ್ಲಿ ಸುರಕ್ಷಾ ಕ್ರಮ ನಿರ್ವಹಣೆಗೆ ಸಂಪರ್ಕ ಸೇತುವೆ ನಿರ್ಮಾಣ ತೀರಾ ಆವಶ್ಯಕ. ಅಲ್ಲಿನ ಗ್ರಾಮಸ್ಥರಿಗೆ ತೊಂದರೆ ಆಗಬಾರದೆಂದು ಸಿಬಂದಿಯೇ ಮನೆಮನೆಗೆ ತೆರಳಿ ಮನೆ ತೆರಿಗೆ ಮತ್ತು ನೀರಿನ ತೆರಿಗೆ ಪಡೆಯಲಾಗುತ್ತದೆ. ಮೀನುಗಾರಿಕೆ ಅವಲಂಬಿತರು ಅಧಿಕವಾಗಿದ್ದು, ಸುತ್ತುಬಳಸಿ ಸಂಪರ್ಕಿಸುವ ಸ್ಥಿತಿ ಇದೆ. ನೇರ ಸಂಪರ್ಕ ಸೇತುವೆ ಆದಲ್ಲಿ ಗ್ರಾಮಸ್ಥರಿಗೂ, ಪ್ರವಾಸಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. -ರಾಜೇಶ್ ಶ್ರೀಯಾನ್, ಉದ್ಯಾವರ ಗ್ರಾ.ಪಂ. ಸದಸ್ಯ
ಪ್ರವಾಸೋದ್ಯಮಕ್ಕೆ ಹಿನ್ನಡೆ:
ಪಡುಕರೆ ಕಡಲ ಕಿನಾರೆಯು ಹೆಚ್ಚು ಆಕರ್ಷಿತವಾಗಿದ್ದು, ಈ ಭಾಗದಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಸಂಪರ್ಕ ಸೇತುವೆ ನಿರ್ಮಾಣಗೊಂಡಲ್ಲಿ ಕ್ರಮಿಸುವ ಹಾದಿ ಬಹಳಷ್ಟು ಸುಲಭ. ಆದರೆ ಮೂಲ ಸೌಕರ್ಯಗಳಿಲ್ಲದೆ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. -ಕೃಷ್ಣ ಜಿ. ಕೋಟ್ಯಾನ್,
ಉದ್ಯಾವರ ಗ್ರಾ.ಪಂ. ಮಾಜಿ ಸದಸ್ಯ
-ವಿಜಯ ಆಚಾರ್ಯ, ಉಚ್ಚಿಲ