Advertisement

ಬಯೋಮೆಟ್ರಿಕ್‌ನಿಂದ ಸಾರ್ವಜನಿಕರಿಗೆ ಸಮಸ್ಯೆ

06:18 AM Feb 18, 2019 | Team Udayavani |

ಬೆಂಗಳೂರು: ಪಡಿತರ ಆಹಾರ ವಿತರಣೆಗೆ ಬಯೋಮೆಟ್ರಿಕ್‌ ಪದ್ಧತಿ ಕಡ್ಡಾಯಗೊಳಿಸಿರುವುದರಿಂದ ನಾಗರಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯು ಈ ನಿಯಮದ ಸಾಧಕ ಬಾಧಕಗಳ ಅಧ್ಯಯನ ನಡೆಸಬೇಕು ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ “ಸರ್ಕಾರಕ್ಕೆ ಕೃತಜ್ಞತಾ ಸಮರ್ಪಣೆ ಹಾಗೂ ರಾಜ್ಯಮಟ್ಟದ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಯೋಮೆಟ್ರಿಕ್‌ ಅಳವಡಿಕೆಯಿಂದ ಕೂಲಿ ಕಾರ್ಮಿಕರು ದಿನದ ಕೆಲಸ ಬಿಟ್ಟು ಸಾಲುಗಟ್ಟಿ ನಿಲ್ಲುವಂತಾಗಿದೆ.

ಕೆಲ ಜನರು ನಿಗದಿತ ಸಮಯಕ್ಕೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಯೋಮೆಟ್ರಿಕ್‌ ಪದ್ಧತಿಯನ್ನು ರದ್ದುಗೊಳಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲೂ ಚಿಂತನೆ ನಡೆದಿದೆ ಎಂದು ಹೇಳಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್‌ ಅಳವಡಿಕೆಯಿಂದ ಪ್ರತಿ ತಿಂಗಳು 5.60 ಕೋಟಿ ರೂ.ಪಡಿತರ ಆಹಾರ ಉಳಿಯುತ್ತಿದೆ. ಉಳಿತಾಯವಾಗುವ ಈ ಪಡಿತರಿಂದ ಸರ್ಕಾರಕ್ಕೆ ಬಹುಮೊತ್ತದ ಲಾಭ ಆಗುತ್ತಿಲ್ಲ. ಆದರೆ, ಸೂಕ್ತ ಸಮಯಕ್ಕೆ, ಕಡ್ಡಾಯವಾಗಿ ಬಯೋಮೆಟ್ರಿಕ್‌ ಒದಗಿಸಲು ಕುಟುಂಬಸ್ಥರಿಗೆ ಸಾಧ್ಯವಾಗುತ್ತಿಲ್ಲ.

ಹೀಗಾಗಿ, ಸಾಕಷ್ಟು ಫ‌ಲಾನುಭವಿಗಳು ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧ್ಯಯನದ ನಡೆಸಿ ನೈಜ ಸ್ಥಿತಿಗತಿ ಏನು ಎಂಬ ವರದಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಪಡಿತರ ಆಹಾರಕ್ಕೆ ಪ್ರತಿ ಕ್ವಿಂಟಲ್‌ಗೆ ವಿತರಿಸುತ್ತಿರುವ ಕಮಿಷನ್‌ ಹೆಚ್ಚಿಸುವ ಬಗ್ಗೆ ಇಲಾಖೆಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

Advertisement

ಸಂಸದ ಎಲ್‌.ಆರ್‌.ಶಿವರಾಮೇಗೌಡ ಮಾತನಾಡಿ, ಪಡಿತರ ವಿತರಕರ ಸಮಸ್ಯೆಗಳನ್ನು ಸರ್ಕಾರ ಅರಿತುಕೊಳ್ಳಬೇಕು. ಕೇವಲ ಪಡಿತರ ವಿತರಣೆಯಲ್ಲಿ ಅಕ್ರಮ ಹಾಗೂ ಭ್ರಷ್ಟಚಾರ ನಡೆಯುತ್ತಿದೆ ಎಂದು ಆರೋಪ ಮಾಡಿ ತನಿಖೆ ಮಾಡುವ ಬದಲು, ಅಕ್ರಮ ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಪಡಿತರ ವಿತರಕರಿಗೆ ಮಾಸಿಕ ಇಂತಿಷ್ಟು ಹಣವನ್ನು ಸಂಬಳ ರೂಪದಲ್ಲಿ ನೀಡಬೇಕು ಎಂದು ಹೇಳಿದರು.

ಸಂಘದ ರಾಜ್ಯಾಧ್ಯಕ್ಷ ಡಾ.ಟಿ.ಕೃಷ್ಣಪ್ಪ ಮಾತನಾಡಿ, ಕೇಂದ್ರ ಸರ್ಕಾರ ಪಡಿತರ ವ್ಯವಸ್ಥೆಯನ್ನೇ ತೆಗೆದು ನೇರವಾಗಿ ಜನರ ಬ್ಯಾಂಕ್‌ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳುತ್ತಿದೆ. ಈ ನಡೆಯಿಂದ ಬಡವರ ಹಸಿವು ನೀಗಿಸಲು ಸಾಧ್ಯವಿಲ್ಲ. ನೇರ ಹಣ ನೀಡಿ ಜನರನ್ನು ಸೋಮಾರಿಯಾಗಲು ಅಥವಾ ದುಶ್ಚಟಗಳಿಗೆ ಬಲಿಯಾಗಲು ಪ್ರಚೋದನೆ ನೀಡಿದಂತಾಗುತ್ತದೆ.

ಕೇಂದ್ರ ಸರ್ಕಾರವು ತನ್ನ ಈ ನಿರ್ಧಾರವನ್ನು ಬದಲಾಯಿಸಬೇಕು. ಜತೆಗೆ ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿ ಮಾಲೀಕರು ಅಕಾಲಿಕವಾಗಿ ಮೃತಪಟ್ಟರೆ ಅವರ ಹೆಸರಿನಲ್ಲಿರುವ ಅಂಗಡಿ ಅನುಮತಿಯನ್ನು ಕುಟುಂಬಸ್ಥರಿಗೆ ನೀಡಬೇಕು. ಪಡಿತರ ಸಾಗಣೆ ಸಾರಿಗೆ ಹಾಗೂ ಪೂರೈಕೆಯ ವೆಚ್ಚ ದುಬಾರಿಯಾಗುತ್ತಿದೆ. ಸರ್ಕಾರ ಪ್ರಸ್ತುತ ನೀಡುತ್ತಿರುವ ಕಮಿಷನ್‌ ಹೆಚ್ಚಿಸಬೇಕು ಎಂಬ ಇತ್ಯಾದಿ ಬೇಡಿಕೆಗಳ ಸಲ್ಲಿಸಿದರು. 

ಆಹಾರ ಪೂರೈಕೆ ಇಲಾಖೆಯ ಆಯುಕ್ತ ಟಿ.ಎಚ್‌.ಎಂ.ಕುಮಾರ್‌, ಪಡಿತರ ವಿತರಕರ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಬಿಸೆಂಬರ್‌ ಬಸು, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್‌, ಉಪಾಧ್ಯಕ್ಷರಾದ ಡಿ.ತಾಯಣ್ಣ, ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next