ಬೆಂಗಳೂರು: ಹುಳಿಮಾವು ಕೆರೆಯ ಏರಿ ಒಡೆದು ಸಂತ್ರಸ್ತರಾಗಿರುವವರಿಗೆ ಸರ್ಕಾರ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಒತ್ತಾಯಿಸಿದ್ದಾರೆ. ಈ ಸಂಬಂಧ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆ ಏರಿ ಒಡೆದು ಸಾವಿರಾರು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಸರ್ಕಾರ ನೀಡು ವ ಪರಿಹಾರದಿಂದ ಅವರು ಏನನ್ನೂ ಖರೀದಿ ಮಾಡಲು ಆಗುವುದಿಲ್ಲ ಎಂದರು. ಕೆರೆ ಏರಿ ಒಡೆಯಲು ಅಲ್ಲಿ ಒತ್ತುವರಿಯೇ ಕಾರಣವಾಗಿದೆ. ಹುಳಿಮಾವು ಕೆರೆಯ ಸುತ್ತಮುತ್ತ 24ರಿಂದ 30 ಎಕರೆಯಷ್ಟು ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಕೆರೆ ಸೇರಿದಂತೆ ಎಲ್ಲ ಕೆರೆಗಳ ಒತ್ತುವರಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ನಗರದಲ್ಲಿ 206 ಕೆರೆಗಳಿವೆ. ಇವುಗಳಲ್ಲಿ 178 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ. ಇವುಗಳಲ್ಲಿ 60 ಕೆರೆಗಳು ಬಿಬಿಎಂಪಿಗೆ ಹಸ್ತಾಂತರವಾಗಿವೆ. ಇವುಗಳಲ್ಲಿ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳನ್ನು ಬಿಟ್ಟರೆ ಉಳಿದ 58 ಕೆರೆಗಳ ಸ್ಥಿತಿಯ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಈ ಕೆರೆಗಳ ವಿಸ್ತೀರ್ಣ ಎಷ್ಟಿದೆ. ಎಷ್ಟು ಒತ್ತುವರಿ ಆಗಿದೆ ಎಂಬ ಮಾಹಿತಿ ಇಲ್ಲ.
ಬಿಡಿಎ ಕೇವಲ ಒಂದು ಪತ್ರದ ಮೂಲಕ ಬಿಬಿಎಂಪಿಗೆ ಕೆರೆಗಳನ್ನು ಹಸ್ತಾಂತರ ಮಾಡಿದೆ. ಕೆರೆಗಳ ಸಂಪೂರ್ಣ ಮಾಹಿತಿಯನ್ನೇ ನೀಡಿಲ್ಲ. ಇದೇ ಸಮಸ್ಯೆಗೆ ಕಾರಣ. ಈಗ ಉಂಟಾಗುತ್ತಿರುವ ಸಮಸ್ಯೆಗಳಿಗೆ ಬಿಡಿಎ ನೇರ ಹೊಣೆ. ಬಿಡಿಎ ಮಾಡಿದ ತಪ್ಪಿಗೆ ಬಿಬಿಎಂಪಿಗೆ ಬೆಲೆ ತೆರುತ್ತಿದೆ ಎಂದರು.
ಅಧಿಕಾರಿಗಳ ವರ್ಗಾವಣೆಗೆ ಆಗ್ರಹ: ಉಪಚುನಾವಣೆ ನಡೆಯುತ್ತಿರುವ ಬೆಂಗ ಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಮುಗಿಯುವವರೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡ ಬೇಕು ಎಂದು ಅಬ್ದುಲ್ ವಾಜೀದ್ ಒತ್ತಾಯಿಸಿದ್ದಾರೆ.
ಉಪಚುನಾವಣೆ ನಡೆಯುತ್ತಿರುವ ಕೆ.ಆರ್.ಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಜಿನಿಯರ್‌ಗಳನ್ನು ಬೇರೆ ಕಡೆಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಕೋರಲಾಗಿದೆ. ಆದರೆ, ಆಯುಕ್ತರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಕ್ಷೇತ್ರಗಳಲ್ಲಿ ಅವ್ಯವಹಾರ ನಡೆದರೆ ಆಯುಕ್ತರೇ ನೇರ ಹೊಣೆ ಎಂದರು.