Advertisement

ಕೇಂದ್ರ-ರಾಜ್ಯ ಸಮನ್ವಯದಿಂದ ಸಮಸ್ಯೆ ಇತ್ಯರ್ಥ

10:42 AM Nov 05, 2017 | Team Udayavani |

ಸುಬ್ರಹ್ಮಣ್ಯ: ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಸಮನ್ವಯತೆ ಸಾಧಿಸಿ ಸೂಕ್ಷ್ಮ ಪರಿಸರ ವಲಯ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು. ಈ ಕುರಿತು ಕೇಂದ್ರ ಪರಿಸರ ಖಾತೆ ಸಚಿವರಿಗೆ ಒತ್ತಡ ತಂದು ಸಮಸ್ಯೆಯ ಶಾಶ್ವತ ಇತ್ಯರ್ಥಕ್ಕೆ ಪ್ರಯತ್ನಿಸುವುದಾಗಿ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. 

Advertisement

ಹರಿಹರ ಪಳ್ಳತ್ತಡ್ಕದಲ್ಲಿ ಶನಿವಾರ ನಡೆದ ಸೂಕ್ಷ್ಮ ವಲಯದ ಐದು ಭಾಗದ ಕೃಷಿಕರ ಜತೆಗಿನ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರ ಹೊರಡಿಸಿದ ಅಧಿಸೂಚನೆ ಯಥವತ್ತಾಗಿ ಜಾರಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಕೇಂದ್ರ ಮೂರು ಬಾರಿ ಅಧಿಸೂಚನೆ ಜಾರಿ ಮಾಡಿದೆ. ವರದಿ ತಯಾರಿಸುವಾಗ ರಚನೆಗೊಂಡ ಉನ್ನತ ಸಮಿತಿ ಎಲ್ಲ ಭಾಗಗಳಿಗೆ ತೆರಳದೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದೆ. ಸ್ಯಾಟಲೈಟ್‌ ಮೂಲಕ ತಯಾರಿಸಿದ ಕಾರಣ ವರದಿಯಲ್ಲಿ ಪಶ್ಚಿಮ ಘಟ್ಟದ ಭೂಭಾಗದ ಹಲವು ಕೃಷಿ ಭೂಮಿಗಳು ಗುರುತಿಸಿಕೊಂಡಿವೆ. ಇದರಿಂದ ನೋಟಿಪಿಕೇಶನ್‌ ಮತ್ತೆ ಪುನಾರಾವರ್ತನೆಯಾಗಿ ಜಾರಿಯಾಗುತ್ತಿದೆ ಎಂದು ಹೇಳಿದರು.

ನುಣುಚಿಕೊಂಡಿಲ್ಲ
ಜಿಲ್ಲೆಯ ಕೃಷಿಕರ ಸಮಸ್ಯೆಗೆ ಈ ಹಿಂದೆಯೂ ಸ್ಪಂದಿಸಿದ್ದೇನೆ. ಜವಾಬ್ದಾರಿಯಿಂದ ಇದುವರೆಗೆ ಎಲ್ಲೂ ನುಣುಚಿಕೊಂಡಿಲ್ಲ. ಸೂಕ್ಷ್ಮ ಪರಿಸರ ಯೋಜನೆ ಕುರಿತಾಗಿ ತಾನು ಪ್ರತಿನಿಧಿಸಿದ ನಾಲ್ಕು ಜಿಲ್ಲೆಗಳ ಸಂಸದರ ಜತೆ ಈಗಾಗಲೆ ಚರ್ಚಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನ ಮುಂದುವರೆಸಿದ್ದೇನೆ. ಈ ಭಾಗದ ಕೃಷಿಕರ ಪರವಾಗಿ ಕಾರ್ಯನಿರ್ವಹಿಸಲು ಎಂದಿಗೂ ಹಿಂದೇಟು ಹಾಕುವುದಿಲ್ಲ. ಅಗತ್ಯಬಿದ್ದಲ್ಲಿ ಯೋಜನೆ ತಡೆಯುವ ಸಲುವಾಗಿ ಇಲ್ಲಿಯ ಶಾಸಕರ ನೇತೃತ್ವದಲ್ಲಿ ಈ ಭಾಗದ ಕೃಷಿಕರ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ದು ಪರಿಸರಖಾತೆ ಸಚಿವರ ಮುಂದೆ ಅಧಿಕಾರಿಗಳ ಜತೆ ಅಂಕಿ ಅಂಶ ಸಮೇತ ಚರ್ಚೆಗೆ ಅವಕಾಶ ಕಲ್ಪಿಸಿಕೊಡುವುದಾಗಿ ಅವರು ಹೇಳಿದರು.

ಭಯ ಪಡುವ ಅಗತ್ಯವಿಲ್ಲ
ಶಾಸಕ ಎಸ್‌. ಅಂಗಾರ, ಜನತೆ ಭಯ ಪಡುವ ಅಗತ್ಯವಿಲ್ಲ. ಈ ಭಾಗದ ಚುನಾಯಿತ ಪ್ರತಿನಿಧಿಯಾಗಿ ತನಗೆ ಜವಾಬ್ದಾರಿ ಇದೆ. ಯೋಜನೆ ಕಾನೂನಿನ ಚೌಕಟ್ಟಿನಲ್ಲಿ ನಡೆಯುವಾಗ ಕಾನೂನಿಗೆ ವಿರುದ್ಧವಾಗಿ ಹೋಗುವುದಕ್ಕೆ ಆಗುವುದಿಲ್ಲ. ಕಾನೂನಿನಲ್ಲಿ ತಿದ್ದುಪಡಿ ತರಲು ಪ್ರಯತ್ನ ನಡೆಸಲು ಸಾಧ್ಯ. ಡಿ.ವಿ ಯವರ ಜತೆ ಸೇರಿ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ಹೇಳಿದರು.

Advertisement

ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ಅಧ್ಯಕ್ಷ ಹಿಮ್ಮತ್‌ ಕೆ.ಸಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಕೊಲ್ಲಮೊಗ್ರು-ಹರಿಹರ ವ್ಯ.ಸೇ.ಸಹಕಾರ ಸಂಘದ ಅಧ್ಯಕ್ಷ ಹರ್ಷಕುಮಾರ ದೇವಜನ, ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಹರಿಹರೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸತೀಶ್‌ ಕೂಜುಗೋಡು, ಜಯರಾಮ ಆಲ್ಕಬೆ ಉಪಸ್ಥಿತರಿದ್ದರು. ಸೋಮಶೇಖರ ಕಟ್ಟೆಮನೆ ಪ್ತಸ್ತಾವಿಸಿ ಮಹೇಶ್‌ ಕೆ.ಪಿ ಸ್ವಾಗತಿಸಿ ವಂದಿಸಿದರು.

ಸಭೆ ಬಳಿಕ ಸಚಿವ ಡಿ.ವಿ. ಸದಾನಂದ ಗೌಡ ಅವರು ಶ್ರೀ ಹರಿಹರೇಶ್ವರ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸಮಾಲೋಚನ ಸಭೆಯಲ್ಲಿ ಐದು ಗ್ರಾಮಗಳ ನಾಗರಿಕರು ಉಪಸ್ಥಿತರಿದ್ದರು.

ದುರ್ಗಾದಾಸ್‌ ಮಲ್ಲಾರ, ಕೋಟೆ ಸೋಮಸುಂದರ, ವಸಂತ ಕಿರಿಭಾಗ, ಹಮೀದ್‌ ಇಟ್ನೂರು, ಐದು ಗ್ರಾಮಗಳ ಗ್ರಾಮಸ್ಥರ ಪರವಾಗಿ ವಿಷಯ ಮಂಡನೆ ಮಾಡಿ ಅಧಿಸೂಚನೆ ವಾಪಸ್ಸಿಗೆ ಮನವಿ ಮಾಡಿದರು. ಅಧಿಸೂಚನೆ ಹಿಂದೆಗೆದುಕೊಳ್ಳುವಂತೆ ಉಮೇಶ್‌ ಗೌಡ ಬಿಳಿಮಲೆ ಮತ್ತು ಅಂಬದಾಸ್‌ ಹಿರಿಯಡ್ಕ ಡಿ.ವಿ. ಅವರಿಗೆ ಮನವಿ ನೀಡಿದರು. ಸೂಕ್ಷ್ಮ ಪರಿಸರ ವಲಯ ಅನುಷ್ಠಾನ ವಿಚಾರವಾಗಿ ಹರಿಹರ ಪಳ್ಳತ್ತಡ್ಕದಲ್ಲಿ ಶನಿವಾರ ನಡೆದ ಸಭೆ ರಾಜಕೀಯ ಪ್ರೇರಿತ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ಪ್ರದೀಪ್‌ ಕೊಲ್ಲಮೊಗ್ರು ಆಪಾದಿಸಿದ್ದಾರೆ.

ಆರೋಪ
ಸೂಕ್ಷ್ಮ ಪರಿಸರ ವಲಯಕ್ಕೆ ಸಂಬ‌ಂದಿಸಿ ಶನಿವಾರ ನಡೆದ ಸಭೆ ಏಕಾಭಿಪ್ರಾಯದ ಸಭೆಯಾಗಿದ್ದು ಕೃಷಿಕರ ಸಮಸ್ಯೆಗಳಿಗೆ
ಸಭೆಯಲ್ಲಿ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ದಿನದ ಸಭೆ ಕೇವಲ ಭಾಷಣಕ್ಕೆ ಸೀಮಿತವಾಗಿತ್ತು ಎಂದವರು ಪತ್ರಿಕಾ
ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಮ್ಮಲ್ಲಿ ನನ್ನ ಮನವಿ
ಅಧಿಕಾರಿಗಳಿಗೆ ದಿಗ್ಬಂಧನ ಹಾಕುವುದು ಬೆದರಿಕೆ ಒಡ್ಡುವುದು ಮಾಡಬೇಡಿ. ಇದು ಸರಕಾರಕ್ಕೆ ಬೆದರಿಕೆ ಹಾಕಿದಂತೆ. ದಿಗ್ಬಂಧನದಿಂದ ನೋಟಿಫೀಕೇಶನ್‌ ರದ್ಧತಿ ಆಗಲ್ಲ. ಈ ಭಾಗದ ಹುಡುಗನಾಗಿ ಇದೆಲ್ಲ ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ಡಿವಿ ಈ ಭಾಗದಲ್ಲಿ ಈ ಹಿಂದೆ ಓಡಾಡಿದ ನೆನಪು ಮೆಲುಕು ಹಾಕಿದರು. ಭಾಷಣ ಮಧ್ಯೆ ಅರೆಭಾಷೆಯಲ್ಲಿ ಮಾತನಾಡಿ ಎಲ್ಲರ ಜತೆ ಬೆರೆತರು. 

ಪರಸ್ಪರ ಸಹಕಾರ ಮುಖ್ಯ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯ ಸೌಹಾರ್ದ ಸಾಧಿಸಿ ನಡೆದಾಗ ಅದ್ಭುತ ಯಶಸ್ಸು ಸಾಧ್ಯ. ಸಂಘರ್ಷಗಳಿಂದ ರಾಜಕೀಯ ಲಾಭವಷ್ಟೇ ಸಿಗುವುದು. ಎರಡೂ ಸರಕಾರಗಳು ಪರಸ್ಪರ ಉತ್ತಮ ಸಂಬಂಧ ಮತ್ತು ಸಹಕಾರ ನೀಡುವ ಮೂಲಕ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು.
ಡಿ.ವಿ. ಸದಾನಂದ ಗೌಡ
  ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next